ಬಂಟ್ವಾಳ: ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾರಿಗೆ ಬರಲಿರುವ ನೂತನ ಮರಳು ನೀತಿಯನ್ವಯ ಲೋಕೋಪಯೋಗಿ ಇಲಾಖೆ ಮೂಲಕ ಮರಳು ವಿತರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ಬಿ.ಸಿ.ರೋಡಿನಲ್ಲಿ ಮರಳು ದಾಸ್ತಾನು ಆರಂಭಗೊಂಡಿದೆ.
ಬಿ.ಸಿ.ರೋಡಿನ ವೃತ್ತದ ಬಳಿಯಿರುವ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕವಾಗಿ ಮರಳು ಸಂಗ್ರಹಾಗಾರವನ್ನು ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಂದಲೇ ಮರಳು ವಿತರಣೆ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಉಮೇಶ್ ಭಟ್ ತಿಳಿಸಿದ್ದಾರೆ.

ನೂತನ ಮರಳು ನೀತಿಯನ್ವಯ ಮರಳುಗಾರಿಕೆಗೆ ದ.ಕ.ಜಿಲ್ಲೆಯಲ್ಲಿ 37 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ 21 ಬ್ಲಾಕ್ ಬಂಟ್ವಾಳ ತಾಲೂಕಿನಲ್ಲಿದೆ. ಅತೀ ಹೆಚ್ಚು ಮರಳುಗಾರಿಕೆ ನಡೆಯುವ ತಾಲೂಕು ಎಂಬ ಹೆಗ್ಗಳಿಕೆ ಇರುವ ಬಂಟ್ವಾಳದಲ್ಲಿ ಮರಳುಗಾರಿಕೆ ನಡೆಸಲು ಗಣಿ ಇಲಾಖೆ ನದಿತಟದ ಪ್ರದೇಶಗಳಾದ ಸಜಿಪಪಡು, ಸಜಿಪಮುನ್ನೂರು, ಬರಿಮಾರು, ಪುದು ತುಂಬೆ, ಕಡೇಶ್ವಾಲ್ಯ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ಮಣಿನಾಲ್ಕೂರು, ಸರಪಾಡಿ ಮೊದಲಾದೆಡೆ 21 ಬ್ಲಾಕ್ ಗಳನ್ನು ಗುರುತಿಸಲಾಗಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆಯೂ ನಡೆದಿದೆ.
ತಾಲೂಕಿನ ಬಿ.ಸಿ.ರೋಡು, ತುಂಬೆ ಹಾಗೂ ಕರಿಯಂಗಳದಲ್ಲಿ ಕಂದಾಯ ಇಲಾಖೆಯ ಮಾರ್ಗದರ್ಶನದಲ್ಲಿ ಮರಳೂ ಸಂಗ್ರಹಕ್ಕೆ ಜಮೀನು ಗುರುತಿಸಲಾಗಿದ್ದು, ಈ ಪೈಕಿ ಬಿ.ಸಿ.ರೋಡಿನ ಖಾಸಗಿ ಜಮೀನೂ ಸೇರಿದೆ. ಇಲ್ಲಿ ದಾಸ್ತಾನಿರಿಸಿದ ಮರಳನ್ನು ಗ್ರಾಹಕರು ಅಗತ್ಯ ದಾಖಲೆಗಳ ಜೊತೆಗೆ ಅರ್ಜಿಯನ್ನು ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿ ಪಡೆಯಬಹುದಾಗಿದೆ. ದಾಸ್ತಾನು ಜವಬ್ದಾರಿ ವಹಿಸಿದ ಗುತ್ತಿಗೆದಾರ ಪುರುಷೋತ್ತಮ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.