ಗುರುಪುರ: ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳು ರಕ್ತ ಹರಿಸಿದ್ದಾರೆ. ಈ ದೇಶಕ್ಕೆ ಕ್ರಾಂತಿಕಾರಿಗಳ ಬಲಿದಾನದಿಂದ ಸ್ವಾತಂತ್ರ್ಯಗೊಂಡಿದೆ. ಆದರೆ ರಾಜಕಾರಣಿಗಳ ತಪ್ಪಿನಿಂದಾಗಿ ಭಾರತ ತುಂಡಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಕಿಶೋರ್ ಕುಮಾರ್ ಹೇಳಿದರು.

ಅವರು ಹಿಂದೂ ಜಾಗರಣ ವೇದಿಕೆ ಗುರುಪುರ ಪ್ರಖಂಡ ಇದರ ಆಶ್ರಯದಲ್ಲಿ ಜನಜಾಗೃತಿಗಾರಿ ಮತ್ತು 72ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುಪುರ ಕೈಕಂಬದ ಗಣೇಶ್ ಕಟ್ಟೆಯ ಬಳಿ ಪಂಜಿನ ಮೆರವಣಿಗೆಯ ಬಳಿಕ ನಡೆದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಈ ದೇಶಕ್ಕಾಗಿ ಶಾಂತಿಯಿಂದ ಸ್ವಾತಂತ್ರ್ಯ ಸಿಕ್ಕಿತೆಂದು ಹೇಳಲಾಗುತ್ತಿದೆ. ಆದರೆ ಸುಭಾಷ್ ಚಂದ್ರ ಬೋಸ್, ವೀರಸಾವರ್ಕರ್, ಭಗತ್ ಸಿಂಗ್ರಂಥಾ ಸ್ವಾತಂತ್ರ್ಯ ಹೋರಾಟಗಾರರಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು ಎಂದು ಕಿಶೋರ್ ಕುಮಾರ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಕಾರ್ಯದರ್ಶಿ ಅಕ್ಷತಾ ಬಜಪೆ ಮಾತಾಡಿ, ಭಾರತವು ಅಖಂಡವಾದ ಭೂಪ್ರದೇಶ ಹೊಂದಿದ ದೇಶವಾಗಿತ್ತು. ಈ ದೇಶ ಸ್ವಾತಂತ್ರ್ಯ ಸಿಕ್ಕ ಬಳಿಕವಷ್ಟೇ ತುಂಡಾಗಿದ್ದಲ್ಲದೆ, ಅಖಂಡ ಭೂಸಿಂಧುವಾಗಿದ್ದ ಭಾರತ ಈ ಮುಂಚೆಯೂ ತುಂಡಾಗಿತ್ತು. ಈ ನಿಟ್ಟಿನಲ್ಲಿ ಭಾರತದ ಹಿಂದಿನ ಗರಿಮೆಯನ್ನು ವಿವರಿಸಲು ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಗುತ್ತಿದೆ ಎಂದು ತನ್ನ ದಿಕ್ಸೂಚಿ ಭಾಷಣದಲ್ಲಿ ವಿವರಿಸಿದರು.
ಕಾರ್ಯಕ್ರಮದ ಮುನ್ನ ಗಂಜಿಮಠ ಮಹಾ ಗಣಪತಿ ದೇವಸ್ಥಾನದಿಂದ ಕೈಕಂಬದವರೆಗೆ ಪಂಜಿನ ಮೆರವಣಿಗೆ ನಡೆಯಿತು. ಮಳೆಯ ನಡುವೆಯೂ ಕಾರ್ಯಕರ್ತರು ಹೆಜ್ಜೆ ಹಾಕಿದರು. ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಇದ್ದರು. ಸಂಘಟನೆಯ ಮುಖಡ ಹರೀಶ್ ಮಟ್ಟಿ ಸೇರಿ ಹಲವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಬಜಪೆ ಪೊಲೀಸರು ಬಿಗಿಬಂದೋಬಸ್ತ್ ಕೈಗೊಂಡಿದ್ದರು.