ಮೂಡುಬಿದಿರೆ : ಕೃಷಿಯ ಜೊತೆಗೆ ಔಷಧೀಯ ಗುಣಗಳುಳ್ಳ ಗಿಡಗಳನ್ನು ಬೆಳೆಸಿದರೆ ಉತ್ತಮ. ಕಳೆದ ಹತ್ತು ವರ್ಷಗಳ ಹಿಂದೆ ವ್ಯಾಪಾರದ ದೃಷ್ಠಿಯಿಂದ ಮರಗಳನ್ನು ಕಡಿಯುತ್ತಿದ್ದರು ಆದರೆ ಈಗ ಬದಲಾವಣೆಯಾಗಿದ್ದು ವಿವಿಧ ಸಂಘ ಸಂಸ್ಥೆಗಳು ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಗಿಡಗಳನ್ನು ನೆಟ್ಟು ಗಿಡ ಮರಗಳನ್ನು ಉಳಿಸಿ ಬೆಳೆಸುವ ಜಾಗೃತಿಯನ್ನು ಜನರಲ್ಲಿ ಮೂಡಿಸಿದೆ ಎಂದು ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ.ಬೆಳುವಾಯಿ ಇದರ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಹೇಳಿದರು.
ಅವರು ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ.ಬೆಳುವಾಯಿ ಮತ್ತು ಮೂಡುಬಿದಿರೆ ಅರಣ್ಯ ಇಲಾಖೆ ಇವುಗಳ ಸಹಕಾರದೊಂದಿಗೆ ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಬಂಗ್ಲೆ ಫ್ರೆಂಡ್ಸ್ ಬೆಳುವಾಯಿ, ಸೂರ್ಯೋದಯ ಯುವಕ ಸಂಘ ಗಾಂಧಿನಗರ, ನಮ್ಮ ಜವನೆರ್ ಮಂಜನಕಟ್ಟೆ, ನೇತಾಜಿ ಯುವಕ ಮಂಡಲ (ರಿ) ಮೂಡುಮಾರ್ನಾಡು ಮತ್ತು ಚೇತನ ಯುವಕ ಮಂಡಲ(ರಿ) ತಂಡ್ರಕೆರೆ ಇವುಗಳ ಆಶ್ರಯದಲ್ಲಿ ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ.ಬೆಳುವಾಯಿ ಇದರ ಕೆಸರ್ಗದ್ದೆ ಶಾಖೆಯ ಸಭಾಭವನದಲ್ಲಿ ಭಾನುವಾರ ವನ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರೆ ವಲಯಾರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಬೌಗೋಳಿಕ ವ್ಯಾಪ್ತಿಗೆ ಶೇ 33 ಭಾಗ ಅರಣ್ಯ ಪ್ರದೇಶ ಬೇಕಿತ್ತು ಆದರೆ ಶೇ 22 ಭಾಗ ಮಾತ್ರ ಇದೆ. ಇದೀಗ ನಾವು ಶೇ 33 ಭಾಗ ಅರಣ್ಯ ಪ್ರದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ . ಈ ವರ್ಷ ಹಸಿರು ಕರ್ನಾಟಕ ಆಂದೋಲನ ಎಂಬ ಕಾರ್ಯಕ್ರಮವು ಜಾರಿಗೆ ಬಂದಿದ್ದು ಈ ಮೂಲಕ ಗಿಡಗಳನ್ನು ಬೆಳಸುವ ಕಾರ್ಯವನ್ನು ಕೈಗೊಂಡಿದೆ. ಇಲಾಖೆಯಿಂದ ನೀಡುವ ಗಿಡಗಳನ್ನು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ ಮತ್ತು ಕಾಡು ಪ್ರಾಣಿಗಳಿಂದ ರೈತರಿಗೆ ಅನಾಹುತವಾಗಿದ್ದರೆ ಅಥವಾ ಬೆಳೆ ನಾಶವಾಗಿದ್ದರೆ ಅದಕ್ಕೂ ಕೂಡಾ ಇಲಾಖೆಯಿಂದ ಪರಿಹಾರಧನವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ, ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಳುವಾಯಿ ಸಹಕಾರಿ ವ್ಯವಸಾಯಿಕ ಸಂಘ ನಿ.ಬೆಳುವಾಯಿ ಇದರ ಉಪಾಧ್ಯಕ್ಷ ವಸಂತ ಶೆಟ್ಟಿ, ಬ್ಯಾಂಕಿನ ನಿರ್ದೇಶಕರುಗಳಾದ ಕೃಷ್ಣ ಮೂಲ್ಯ, ಸದಾನಂದ ಹೆಗ್ಡೆ ದಾಮೋಧರ ಬಂಗೇರಾ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ರಾವ್ ಸ್ವಾಗತಿಸಿ ವರದಿ ವಾಚಿಸಿದರು. ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್ನ ಅಧ್ಯಕ್ಷ ಪ್ರವೀಣ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಮನೊಟ್ಟು ಬ್ರಾಂಚಿನ ಮೆನೇಜರ್ ಉಮೇಶ್ ವಂದಿಸಿದರು.
