ಮೂಡುಬಿದಿರೆ: ಅಯ್ಯಪ್ಪ ದೇವರ ಪುಣ್ಯ ಕ್ಷೇತ್ರ ಶಬರಿಮಲೆ ಹಿಂದುಗಳ ಶ್ರದ್ಧಾಕೇಂದ್ರವಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿದ ತೀರ್ಪಿನಂತೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ಎಲ್ಲೆಡೆ ವ್ಯಾಪಕ ವಿರೋಧವಾಗಿದೆ. ಹಾಗೂ ಇದೇ ತೀರ್ಪನ್ನು ಕೇರಳ ಸರ್ಕಾರವೂ ಕೂಡ ಅನುಷ್ಠಾನಗೊಳಿಸಲು ಮುಂದಾಗಿರುವುದರಿಂದ ಇದನ್ನು ವಿರೋಧಿಸಿ ಮೂಡುಬಿದಿರೆ ಐಯ್ಯಪ್ಪ ಭಕ್ತರಿಂದ ಪ್ರತಿಭಟನೆ ನಡೆಯಲಿದೆ ಎಂದು ರಮೇಶ್ ಗುರು ಸ್ವಾಮಿಗಳು ತಿಳಿಸಿದರು.

ಮೂಡುಬಿದಿರೆ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೂಡುಬಿದಿರೆಯಲ್ಲಿ 100ಕ್ಕೂ ಮಿಕ್ಕಿದ ಐಯ್ಯಪ್ಪ ಶಿಬಿರವಿದ್ದು, ಪ್ರತಿವರ್ಷವೂ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಶಬರಿಮಲೆಗೆ ತೆರಳುತ್ತಾರೆ. ಇದರಿಂದ ಭಕ್ತರ ಭಾವನೆಗಳಿಗೆ ನೋವುಂಟಾಗಿದೆ. ಪ್ರತಿಭಟನೆಯು ಅ.16 ಮಂಗಳವಾರದಂದು ಮೂಡುಬಿದಿರೆ ಸಾವಿರಕಂಬ ಬಸದಿಯಿಂದ ಬಸ್ನಿಲ್ದಾಣದವರೆಗೆ ಪಾದಯಾತ್ರೆ ಹಾಗೂ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.
ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಐಯ್ಯಪ್ಪ ಭಕ್ತರು ಹಾಗೂ ಸಾರ್ವಜನಿಕ ಬಂಧುಗಳು ಭಾಗವಹಿಸಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುಸ್ವಾಮಿಗಳಾದ ಸದಾನಂದ, ನವೀನ್, ಸುಧಾಕರ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.