ಕೈಕಂಬ: ಕಂದಾವರ ಪಂಚಾಯತ್ ಗ್ರಾಮ ಸಯಾಹಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಅಪರಿಚಿತನೋರ್ವ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುಪುರ ಕೈಕಂಬ ಸಮೀಪದ ಕಂದಾವರದಲ್ಲಿರುವ ನಾಡಕಚೇರಿ ಬಳಿ ಮಂಗಳವಾರ ಮಧ್ಯಾಹ್ನದ ವೇಳೆಗೆ ನಡೆದಿದೆ. ಹಲ್ಲೆಗೊಳಗಾದವರನ್ನು ಭಾಸ್ಕರ್ ಎಂದು ಗುರುತಿಸಲಾಗಿದೆ.
ನಾಡಕಚೇರಿಯ ಆಧಾರ್ ನೋಂದಣಿ ಮಾಡುವ ಸಿಬ್ಬಂದಿ ರಜೆ ಇದ್ದ ಕಾರಣ, ಅವರ ಕಾರ್ಯವನ್ನು ಭಾಸ್ಕರ್ ಅವರು ನಿರ್ವಹಿಸುತ್ತಿದ್ದರು. ಈ ವೇಳೆ ಕಚೇರಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಆಧಾರ್ ಬಗ್ಗೆ ವಿಚಾರಣೆ ನಡೆಸಿದ್ದು, ಈ ವೇಳೆ ತಾಂತ್ರಿಕ ಅಡಚಣೆಯ ಬಗ್ಗೆ ಆತನಲ್ಲಿ ಮನವರಿಕೆ ಮಾಡಿದ್ದರು. ಇದರಿಂದ ಕುಪಿತನಾದ ಆ ವ್ಯಕ್ತಿ ಭಾಸ್ಕರ್ ಅವರಿಗೆ ಅವಾಚ್ಯವಾಗಿ ನಿಂದಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ಭಾಸ್ಕರ್ ಅವರ ಕಿವಿಯ ಬಳಿ ರಕ್ತಸ್ರಾವ ಉಂಟಾಗಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯತ್ತಿದ್ದಾರೆ. ಮಾಹಿತಿ ಪಡೆದ ಬಜಪೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿ ಶೋಧ ನಡೆಸುತ್ತಿದ್ದಾರೆ.