ಕೈಕಂಬ: ಡಿಸೆಂಬರ್ ತಿಂಗಳಲ್ಲಿ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಗುರುಪುರದಲ್ಲಿ ಮೆಸ್ಕಾಂ ಹಳೆಯ ವಿದ್ಯುತ್ ಮೀಟರ್ ತೆರವುಗೊಳಿಸಿ ಹೊಸ ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯ ಆರಂಭಿಸಿದ್ದು, ಈ ಮೀಟರ್ ಕಳಪೆ ಮಟ್ಟದ್ದಾಗಿದೆ ಮತ್ತು ಹೆಚ್ಚು ವಿದ್ಯುತ್ ಬಿಲ್ ಬರುತ್ತಿದೆ ಎಂಬ ದೂರುಗಳು ಬಂದಿವೆ.
ಅಡ್ಡೂರು ಮತ್ತು ಗುರುಪುರದಲ್ಲಿ ಕಳೆದ ತಿಂಗಳು ಲಭಿಸಿದ ವಿದ್ಯುತ್ ಬಿಲ್ ಮೊತ್ತ ಹಿಂದಿನ ಮೊತ್ತಕ್ಕಿಂತ ಹೆಚ್ಚಾಗಿದೆ. ಉದಾಹರಣೆಗೆ ಹಿಂದೆ 100 ರೂ ವಿದ್ಯುತ್ ಬಿಲ್ ಬರುತ್ತಿದ್ದರೆ, ಈ ಬಾರಿ ಅದೇ ಬಳಕೆಯ ವಿದ್ಯುತ್ತಿಗೆ 150 ರೂವರೆಗೆ ಬಿಲ್ ಬಂದಿದೆ. ಹೊಸ ಮೀಟರ್ ಉತ್ತಮವಾಗಿಲ್ಲ. ಇದರಲ್ಲಿ ಬಿಲ್ ಮೊತ್ತ ದುಪ್ಪಟ್ಟಾಗಿದೆ ಎಂದು ಹಲವು ಗ್ರಾಹಕರು ದೂರಿದ್ದಾರೆ.
ದೂರುಗಳ ಪರಿಶೀಲನೆ ನಡೆಸಿದ ದ.ಕ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ನೇತೃತ್ವದ ಕಾಂಗ್ರೆಸ್ ನಿಯೋಗ ಬುಧವಾರ ಗುರುಪುರ ಕೈಕಂಬದಲ್ಲಿರುವ ಮೆಸ್ಕಾಂ ಕಚೇರಿಗೆ ತೆರಳಿ, ಅಧಿಕಾರಿಗಳಿಗೆ ದೂರು ನೀಡಿತು.
“ಹೊಸ ಎಚ್ಪಿಎಲ್ ಡಿಜಿಟಲ್ ಮೀಟರಿನ ದೋಷ ಕಂಡು ಪತ್ತೆ ಹಚ್ಚಿ, ಗ್ರಾಹಕರಿಗೆ ನ್ಯಾಯೋಚಿತ ವಿದ್ಯುತ್ ಬಿಲ್ಗೆ ವ್ಯವಸ್ಥೆ ಮಾಡಬೇಕು. ಹೊಸ ಮೀಟರ್ ವಿದ್ಯುತ್ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ” ಎಂದು ಮೆಸ್ಕಾಂ ಮಹಿಳಾ ಅಧಿಕಾರಿಯಲ್ಲಿ ಇಬ್ರಾಹಿಂ ತಿಳಿಸಿದರು. ನಿಯೋಗದಲ್ಲಿ ಕಾಂಗ್ರೆಸ್ಸಿಗರಾದ ಯಶವಂತ ಶೆಟ್ಟಿ ಗುರುಪುರ, ಮೋಹಿನಿ, ಮೊಹಮ್ಮದ್ ಸಾದಿಕ್, ಫಾರೂಕ್ ಕೆಳಗಿನಮನೆ, ಎ ಕೆ ಅಶ್ರಫ್, ಹಮೀದ್, ಚಂದ್ರಾವತಿ ಹಾಗೂ ಇತರರು ಇದ್ದರು.