ಗುರುಪುರ : . ಸಮಾಜದಲ್ಲಿ ಬೇರೂರಿರುವ ಈ ಪಿಡುಗು ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯುವಜನಾಂಗದಿಂದ ಮಾತ್ರ ಸಾಧ್ಯ ಎಂಬುದು ನನ್ನ ವೈಯಕ್ತಿಕ ಆಲೋಚನೆಯಾಗಿದೆ.ಇಂದು ಜೈಲಿಗೆ ಹೋಗಿ ಬಂದವರಿಗೂ ಸನ್ಮಾನವಾಗುತ್ತದೆಹಿರಿಯರು ಕಟ್ಟಿದ ಮೌಲ್ಯಗಳಿಗೆ ಬೆಲೆ ಇಲ್ಲ, ದುಡ್ಡಿಗೆ ಬೆಲೆ ಬಂದಿದೆ. ಯಾರಲ್ಲೂ ತೃಪ್ತಿ ಮತ್ತು ಮಾನವೀಯತೆ ಇಲ್ಲದಂತಾಗಿದೆ ಪ್ರಾಮಾಣಿಕರು ಯಾರು ಮತ್ತು ಅಪ್ರಾಮಾಣಿಕರು ಯಾರು ಎಂಬ ವಿವೇಚನೆರಹಿತ ಗೌರವ ಸಂದಾಯ ಕಾಲವಿದು.
ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ, ಸುಪ್ರೀಂ ಕೋರ್ಟಿನ ನಿವೃತ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ `ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ ಗುರುವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.
ರಾಜಕೀಯದಲ್ಲಿ ಒಂದಷ್ಟು ಜನ ಭ್ರಷ್ಟಾಚಾರಿಗಳಿದ್ದರೂ ಎಲ್ಲರನ್ನೂ ಭ್ರಷ್ಟಾಚಾರಿಗಳೆಂದು ಸಂಬೋಧಿಸುವುದು ಸೂಕ್ತವಲ್ಲ. ಅಲ್ಲೂ ಪ್ರಾಮಾಣಿಕರಿರುತ್ತಾರೆ. ಎಲ್ಲ ಕ್ಷೇತ್ರದ ಪ್ರಾಮಾಣಿಕರ ಗುರುತಿಸಿದಾಗ ಮಾತ್ರ ಭ್ರಷ್ಟಾಚಾರ ಕಡಿಮೆಯಾಗಬಹುದು ಎಂದ ಮಾಜಿ ಸಚಿವ ರಮಾನಾಥ ರೈ, ಕೊಂದವರು, ಹಿಂಸೆ ಮಾಡುವವರನ್ನು ಸಮರ್ಥಿಸುವ ಕಾಲ ಇದಾಗಿದ್ದು, ಎಲ್ಲರ ಮನಸ್ಸು ಮಗುವಿನಂತಿರಬೇಕು ಮಗು ದೇವರಿಗೆ ಸಮಾನ ಈ ಸಮಾಜದಲ್ಲಿ ಶಾಂತಿ, ಪ್ರೀತಿ, ಬಾಂಧವ್ಯದ ಸುಮಧುರ ವಾತಾವರಣ ಕಾಣಲು ಸಾಧ್ಯ ಎಂದರು.
ಮಾಜಿ ಸಚಿವ ವಿನಯಕುಮಾರ ಸೊರಕೆ ಮಾತನಾಡುತ್ತ, “ನಾನು ಕೇಳಿ ಪಡೆದ ಮಾಹಿತಿಗಿಂತ ಹೆಚ್ಚಿನದನ್ನಿಲ್ಲಿ ಕಂಡಿದ್ದೇನೆ. ಏಕತೆಯಿಂದ ಸರ್ವರ ಸಹಾಯ ಮತ್ತು ಕರಸೇವೆಯೊಂದಿಗೆ ಈ ಭವ್ಯ ದೈವಾಲಯ ನಿರ್ಮಿಸಿದ ಗುರುಪುರದ ಜನತೆ ಅಭಿನಂದನಾರ್ಹರು” ಎಂದರು.
ಪುಣೆಯ ಸಿಂಬಯೋಸಿಸ್ ಕಾನೂನು ಸಂಸ್ಥೆಯ ಡೀನ್ & ಡೈರೆಕ್ಟರ್ ಡಾ. ಶಶಿಕಲಾ ಗುರುಪುರ(ಗೋಳಿದಡಿಗುತ್ತು) ಆಶಯ ಭಾಷಣ ಮಾಡುತ್ತ, ಜೀವನದಲ್ಲಿ ರಾಕ್ಷಸೀ ಪ್ರವೃತ್ತಿ ಬೆಳೆಸಿಕೊಂಡಿದ್ದ ಹಿಟ್ಲರ್ ಹುಟ್ಟಿದ ನಾಡಿನಲ್ಲೇ ಶಾಂತಿದೂತರಾಗಿ ಮೆರೆದ ಪ್ರಥಮ ಪೋಪ್ ಹುಟ್ಟಿದ್ದರು. ಅಂತೆಯೇ ಈ ಮಣ್ಣಿನಲ್ಲಿ ಕೆಲವು ಅಸಂಗತ ಪ್ರವೃತ್ತಿಯ ಹುಟ್ಟುಗಳಾಗಿದ್ದರೂ, ವೈದ್ಯನಾಥನ ಕೃಪೆಯಿಂದ ಅವೆಲ್ಲವೂ ದೂರವಾಗಿ ಇದೊಂದು ಶಾಂತಿ ಮತ್ತು ಐಕ್ಯತೆ ಸಾರುವ ನೆಲೆವೀಡಾಗಿ ತಲೆ ಎತ್ತಿ ನಿಂತಿದೆ. ಹಳೆಯ ದೇವಾಲಯ/ದೈವಾಲಯಗಳ ಪುನರುತ್ಥಾನ ತಪ್ಪಲ್ಲ. ಆದರೆ ವೈಯಕ್ತಿಕ ಪ್ರತಿಷ್ಠೆಗೆ ದೈವ/ದೇವಾಲಯ ಕಟ್ಟಿಕೊಳ್ಳುವುದು ಅಥವಾ ಸ್ಪರ್ಧೆಯೂ ಬೇಡ. ಇದರ ಬದಲಾಗಿ ಗುರುಪುರದಲ್ಲಿ ಬಾಲವಾಡಿಯಿಂದ ಹಿಡಿದು ಕಾಲೇಜುವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಮತ್ತು ಆಸ್ಪತ್ರೆಯೊಂದು ತೆರೆಯಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಈ ಸಂದರ್ಭದಲ್ಲಿ ಮುಂಬೈಯ ಪ್ರಖ್ಯಾತ ಮನೋವೈದ್ಯ, ಸಾಮಾಜಿಕ ಕಾರ್ಯಕರ್ತ ಡಾ. ಹರೀಶ್ ಶೆಟ್ಟಿ ಮಾತನಾಡುತ್ತ, ಮನಸ್ಸಿನಲ್ಲಿ `ಮುರಿತ’ವಾದಾಗ ದೇವಾಲಯಗಳಿಗೆ ಹೋದರೆ ಶಾಂತಿ ಸಿಗುತ್ತದೆ, ದೇಹದಲ್ಲಿ ಮುರಿತವಾದರೆ ವೈದ್ಯರ ಬಳಿಗೆ ಹೋಗಬೇಕಾಗುತ್ತದೆ ಎಂದು ದೈವ/ದೇವರ ಔಚಿತ್ಯದ ಬಗ್ಗೆ ಸೋದಾಹರಣ ವಿವರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ ದೋಣಿಂಜೆಗುತ್ತು ಈ ಪುಣ್ಯಕಾರ್ಯದಲ್ಲಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ವೇದಿಕೆಯಲ್ಲಿ ಗಡಿಕಾರ ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು, ಶಶಿಕುಮಾರ್ ಪಂಡಿತ್, ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ. ಸುಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಶೆಡ್ಡೆ ಮಂಜುನಾಥ ಭಂಡಾರಿ ಮೊದಲಾದವರಿದ್ದರು. ಕಿಟ್ಟಣ್ಣ ರೈ ಸ್ವಾಗತಿಸಿದರು. ಲಕ್ಷ್ಮಣ ಶೆಟ್ಟಿ ಗುರುಪುರ ಹಾಗೂ ನಿತೇಶ್ ಕುಮಾರ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ಶೆಟ್ಟಿ ದೋಣಿಂಜೆಗುತ್ತು ವಂದಿಸಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಗುರುಪುರ ವಿಜಯ ದೇವಾಡಿಗರಿಂದ ಸ್ಯಾಕ್ಸೋಫೋನ್ ವಾದನ, ವಿಠಲ ನಾಯಕ್ ಕಲ್ಲಡ್ಕರಿಂದ `ಗೀತಾ-ಸಾಹಿತ್ಯ-ಸಂಭ್ರಮ’, ಎಳೆಯ ಪ್ರತಿಭೆಗಳಿಂದ `ನೃತ್ಯ ವೈಭವ’ ಹಾಗೂ ಗುರುಪುರ ಬಂಟರ ಮಾತೃ ಸಂಘದವರಿಂದ `ತುಳುವ ನಡಕೆ’ ನೃತ್ಯ ರೂಪಕ ಜರುಗಿತು. ಬಳಿಕ ನವೀಕೃತ ದೈವಸ್ಥಾನದಲ್ಲಿ ದೈವಗಳ ನೇಮ ಬಲಿ ಉತ್ಸವ ನಡೆಯಿತು. ಮಧ್ಯಾಹ್ನದಿಂದ ರಾತ್ರಿವರೆಗೆ 20 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.



