ಸಿಯೋನಿ, ಮದ್ಯಪ್ರದೇಶ : ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶಾಸಕರೊಬ್ಬರು ಎಲ್ಲರ ಮುಂದೆಯೇ ಮಾಜಿ ಸಂಸದೆಯ ಸೆರಗನ್ನು ಎಳೆದು ಮಾನಗೆಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಸಿಯೋನಿ ಕ್ಷೇತ್ರದ ಶಾಸಕ ದಿನೇಶ್ ರಾಯ್ ಮಾಜಿ ಸಂಸದೆ ನೀತಾ ಫತೇರಿಯಾ ಅವರ ಸೆರಗನ್ನು ಎಳೆದದ್ದು ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಾಧ್ಯಮಗಳ ಆಹಾರವಾಗಿದೆ. ದಿನೇಶ್ ಅವರ ಈ ಕೃತ್ಯವನ್ನು ಖಂಡಿಸಿರುವ ನೀತಾ, ಅತ್ತಿಗೆ ಎಂದು ಕರೆಯುತ್ತಿದ್ದ ಅವರು ಹೀಗೆ ಮಾಡಿರುವುದು ಸರಿಯಲ್ಲ. ಒಬ್ಬ ಶಾಸಕನಾಗಿ ತಮ್ಮ ಘನತೆಯನ್ನು ಅವರು ಉಳಿಸಿಕೊಳ್ಳಬೇಕು. ಅವರ ಸ್ಥಾನದ ಮಹತ್ವವನ್ನು ಅರಿತುಕೊಂಡು ನಡೆಯಬೇಕು ಎಂದಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ದಿನೇಶ್ ರಾಯ್, ಆಕೆ ನನಗೆ ಅತ್ತಿಗೆ ಇದ್ದಂತೆ. ನಾನು ತಮಾಷೆಗಾಗಿ ಆಕೆಯ ಸೀರೆಯ ಸೆರಗಿನಲ್ಲಿ ನನ್ನ ಕೈಲಿದ್ದ ಕೊಳೆಯನ್ನು ಒರೆಸಿಕೊಳ್ಳುವ ಹಾಗೆ ಮಾಡಿದೆ. ಆದರೆ ನನ್ನ ಕೈ ನಿಜವಾಗಿಯೂ ಸ್ವಚ್ಚವಾಗಿತ್ತು ಎಂದಿದ್ದಾರೆ. ಈ ಘಟನೆ ಮಧ್ಯಪ್ರದೇಶ ಸರಕಾರ ಕೃಷಿಕರಿಗಾಗಿ ನಡೆಸಿದ ಕಾರ್ಯಕ್ರಮದಲ್ಲಿ ನಡೆದಿದೆ. ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸರಕಾರದ ಸಚಿವ ಗೌರಿಶಂಕರ್ ಬಿಸೇನ್ ಕೂಡಾ ಉಪಸ್ಥಿತರಿದ್ದರು
