ಕೋಲಾರ: ನಗರದಲ್ಲಿ ಸಂಚಾರಿ ನಿಯಮಗಳ ಪಾಲನೆಯಲ್ಲಿ ಸಂಚಲನ ಮೂಡಿಸಿ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕ ವಿಜೇತರಾಗಿದ್ದ ಸಂಚಾರಿ ಠಾಣೆ ಮುಖ್ಯಪೇದೆ ಮಹಬೂಬ್ ಇದೀಗ ಗಲ್ ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಕಾಲೋನಿಯ ಖಾಲಿ ಜಾಗದಲ್ಲಿ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿ ಪರಿಸರ ಕಾಳಜಿ ಮೆರೆದಿದ್ದಾರೆ.ಬಿಡುವಿನ ವೇಳೆಯಲ್ಲಿ ನಗರದ ವಿವಿಧ ಶಾಲಾ,ಕಾಲೇಜುಗಳಿಗೆ ಭೇಟಿ ನೀಡಿ ಸಂಚಾರಿ ನಿಯಮಗಳ ಅರಿವು ಮೂಡಿಸುತ್ತಿದ್ದ ಪೇದೆ ಮಹಬೂಬ್, ಇದೀಗ ಗಲ್ ಪೇಟೆ ಪೊಲೀಸ್ ವಸತಿಗಳ ಖಾಲಿ ಜಾಗದಲ್ಲಿ ಬೇವು,ನೇರಳೆ,ಸೀತಾಪಲ, ರಾಮಫಲ, ನಕ್ಷತ್ರ ಹಣ್ಣು, ಸೀಬೆ, ಹೊಂಗೆ ಗಿಡಗಳನ್ನು ನೆಟ್ಟು ಪೋಷಿಸುವ ಕಾಯಕಕ್ಕೆ ಮುಂದಾಗಿದ್ದಾರೆ.
ಉತ್ತಮ ಆರೋಗ್ಯಕ್ಕಾಗಿ ಮತ್ತು ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಸ್ಪಂದಿಸಬೇಕು ಎಂದು ಮನವಿ ಮಾಡುವ ಮಹಬೂಬ್, ಗಿಡಗಳನ್ನು ಬೆಳೆಸುವುದರಿಂದ ನೆರಳು ಮಾತ್ರವಲ್ಲ, ಪ್ರಾಣಿ,ಪಕ್ಷಿಗಳಿಗೆ ಆಸರೆ,ಆಹಾರವೂ ನೀಡಿದಂತಾಗುತ್ತದೆ ಎನ್ನುತ್ತಾರೆ. ಗಿಡಗಳಿಂದ ಆಮ್ಲಜನಕ ಬಿಡುಗಡೆಯಾಗುವುದರಿಂದ ಪೊಲೀಸರ ನಿವಾಸಗಳ ವ್ಯಾಪ್ತಿಯಲ್ಲೂ ಉತ್ತಮ ಪರಿಸರ,ಆರೋಗ್ಯಕ್ಕೆ ಕಾರಣವಾಗಲಿದೆ ಎಂದು ಆಶಿಸುತ್ತಾರೆ.ಮುಂದಿನ ದಿನಗಳಲ್ಲಿ ರಸ್ತೆಬದಿ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡುವ ಆಸೆಯಿದೆ ಎನ್ನುವ ಅವರು, ತಾವು ನೆಟ್ಟ ಗಿಡಗಳನ್ನು ಇಲ್ಲಿನ ಜನತೆ ಪೋಷಿಸಬೇಕು ಎಂದುಮನವಿ ಮಾಡಿದರು.