ಬಂಟ್ವಾಳ: ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಈ ಬಾರಿ ಎರಡೆರಡು ಪ್ರತ್ಯೇಕ ’12ನೇ ವರ್ಷದ ಶಾರದೋತ್ಸವ’ ಕಾರ್ಯಕ್ರಮ ನಡೆಸಿರುವುದು ಇಲ್ಲಿನ ಭಕ್ತರಲ್ಲಿ ವ್ಯಾಪಕ ಗೊಂದಲಕ್ಕೆ ಕಾರಣವಾಗಿದೆ.
ಇಲ್ಲಿನ ಶಾರದೋತ್ಸವ ಸಮಿತಿ ಮತ್ತು ಹಿಂದೂ ಧರ್ಮೋತ್ತಾನ ವೇದಿಕೆ ವತಿಯಿಂದ ಒಂದೇ ಕಡೆ ಅಕ್ಕ-ಪಕ್ಕದಲ್ಲಿ ಪ್ರತ್ಯೇಕ ಪೆಂಡಾಲ್ ನಿರ್ಮಿಸಿ ’12ನೇ ವರ್ಷದ ಸಾರ್ವಜನಿಕ ಶಾರದೋತ್ಸವ’ ಕಾರ್ಯಕ್ರಮವನ್ನು ಅ.1ರಿಂದ 4ರತನಕ ನಡೆಸುವ ಮೂಲಕ ಭಕ್ತರಲ್ಲಿ ಗೊಂದಲ ಮೂಡಿಸಿದೆ.
ಕೊಯಿಲ ಪ್ರಮುಖ ರಸ್ತೆ ಬಳಿ ಸ್ಥಳೀಯ ಮಾವಂತೂರು ಕುಟುಂಬಿಕರು ಕಳೆದ 100 ವರ್ಷಗಳ ಹಿಂದೆ ಸ್ಥಾಪಿಸಿರುವ ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ಕಳೆದ 11 ವರ್ಷಗಳ ಹಿಂದೆ ಸ್ಥಳೀಯ ರಾಯಿ-ಕೊಯಿಲ-ಅರಳ ಮೂರು ಗ್ರಾಮಗಳ ಭಕ್ತರ ತಂಡವೊಂದು ಶಾರದೋತ್ಸವ ಸಮಿತಿ ರಚಿಸಿ ‘ಸಾರ್ವಜನಿಕ ಶಾರದೋತ್ಸವ’ ಕಾರ್ಯಕ್ರಮ ಆರಂಭಿಸಿತ್ತು.
6btl-koila
ಪ್ರಥಮ ವರ್ಷದಲ್ಲೇ ಅಂದಿನ ಕಾಂಗ್ರೆಸ್ ಮುಖಂಡರೊಬ್ಬರನ್ನು ಸಮಿತಿ ಕಡೆಗಣಿಸಿದೆ ಎಂಬ ನೆಪದಲ್ಲಿ ವಿವಾದ ಉಂಟಾಗಿ ಬಳಿಕ ಅಂದಿನ ಸಮಿತಿಯಲ್ಲಿ ಸಕ್ರಿಯರಾಗಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರಿಗೆ ‘ರಾಜಕೀಯ ಪ್ರೇರಿತ’ ವರ್ಗಾವಣೆ ಎಂಬ ಶಿಕ್ಷೆ ನೀಡಲಾಗಿತ್ತು.
ಐದನೇ ವರ್ಷದ ಶಾರದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಥಳೀಯ ಬಾಲಕಿಯೊಬ್ಬರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಆಕೆ ಒಂದು ಕಾಲು ಕಳೆದುಕೊಂಡಿದ್ದು, ಸಮಿತಿ ವತಿಯಿಂದಲೇ ಆಕೆಗೆ ಉಚಿತ ಶಿಕ್ಷಣ ನೀಡುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಮತ್ತೆ ಇದೇ ಸಮಿತಿ ಸದಸ್ಯರೊಬ್ಬರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡ ಬಳಿಕ ಅವರು ರಾಯಿ ಪೇಟೆಯಲ್ಲಿ ಪ್ರಥಮ ಬಾರಿಗೆ ‘ಸಾರ್ವಜನಿಕ ಶ್ರೀ ಗಣೇಶೋತ್ಸವ’ ಆರಂಭಿಸಿದ್ದರು.
ಇದೀಗ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ನೋಂದಣಿಯಾಗಿದ್ದು, ಟ್ರಸ್ಟಿನಲ್ಲಿ ಇಬ್ಬರು ಸದಸ್ಯರನ್ನು ತೆಗೆದು ಮತ್ತೆ ಇಬ್ಬರ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಒಂದೇ ಕಡೆ ಎರಡೆರಡು ‘ಶಾರದೋತ್ಸವ’ ಕಾರ್ಯಕ್ರಮ ನಡೆಸಲು ಕಾರಣ ಎನ್ನಲಾಗುತ್ತಿದೆ.
ಇಲ್ಲಿನ ರಸ್ತೆ ಬದಿ ಎರಡು ಪ್ರತ್ಯೇಕ ಪೆಂಡಾಲ್ ನಿರ್ಮಿಸಿ ರಸ್ತೆಯುದ್ದಕ್ಕೂ ಒಂದೇ ರೀತಿ ಬೃಹತ್ ಗಾತ್ರದ ಬ್ಯಾನರ್, ಕಟೌಟ್, ಕೇಸರಿ ಧ್ವಜ, ಬಂಟಿಂಗ್ಸ್ ಅಳವಡಿಸಿರುವುದು ಭಕ್ತರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.
ಕಳೆದ ಬುಧವಾರದಿಂದ ಗುರುವಾರ ತನಕ (ಅ.1 ಮತ್ತು 2ರಂದು) ಹಾಗೂ ಶುಕ್ರವಾರದಿಂದ ಶನಿವಾರ ತನಕ (ಅ.3 ಮತ್ತು 4ರಂದು) ನಡೆದ ಎರಡು ಅದ್ದೂರಿ ಶಾರದೋತ್ಸವ ಕಾರ್ಯಕ್ರಮದಲ್ಲಿ ’12ನೇ ವರ್ಷದ ಶಾರದೋತ್ಸವ’ ನಮ್ಮದೇ ಎಂದು ಸಮರ್ಥಸಿಕೊಂಡಿವೆ. ಹಿಂದೂ ಧರ್ಮೋತ್ಥಾನ ವೇದಿಕೆ ಶಾರದೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ‘ಹಿಂದೂ ಸಮಾಜೋತ್ಸವ’ದಂತೆ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ನಡುವೆ ಸ್ವ ಹಿತಾಸಕ್ತಿ, ಕೌಟುಂಬಿಕ ಪ್ರತಿಷ್ಠೆ, ಪಕ್ಷ ಮತ್ತು ಜಾತಿ ರಾಜಕೀಯ, ಹಿಂದುತ್ವ, ಅಪ್ರಬುದ್ಧತೆ, ಜಾಗ ವಿವಾದ ಹೀಗೆ ಎರಡು ಸಮಿತಿಯಿಂದಲೂ ಆರೋಪ- ಪ್ರತ್ಯಾರೋಪವೂ ಕೇಳಿ ಬಂದಿದೆ.
ಒಟ್ಟಿನಲ್ಲಿ ರಾಯಿ-ಕೊಯಿಲ-ಅರಳ ಈ ಮೂರು ಗ್ರಾಮಸ್ಥರ ‘ಧಾರ್ಮಿಕ ನಂಬಿಕೆ’ಯೊಂದಿಗೆ ಇಲ್ಲಿನ ‘ಮುಖಂಡರು’ ಎಂದು ಕರೆಸಿಕೊಳ್ಳುವವರು ‘ಚೆಲ್ಲಾಟ’ ಆಡುತ್ತಿದ್ದಾರೆ ಎಂಬ ಆರೋಪ ಇಲ್ಲಿನ ಭಕ್ತರದ್ದು.
ಈ ನಡುವೆ ಮುಂದಿನ ವರ್ಷ ಮತ್ತೆ ಒಟ್ಟಿಗೆ ಸೇರಿಕೊಂಡು ’13ನೇ ವರ್ಷದ ಶಾರದೋತ್ಸವ’ ಆಚರಿಸುವ ಸದ್ಗುಣ ಇವೆರಡೂ ಸಮಿತಿಗೆ ‘ಶಾರದಾ ಮಾತೆ’ ಕರುಣಿಸಲಿ ಎಂಬ ಹಾರೈಕೆ ರಾಯಿ ಕೊಯಿಲ ಗ್ರಾಮದ ಭಕ್ತರಿಂದ ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *