ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಎಂಬಲ್ಲಿ ಅವಿವಾಹಿತ ಅಣ್ಣ- ತಂಗಿ ಇಬ್ಬರ ಮೃತದೇಹ ಬೆಂಕಿ ಹಚ್ಚಿ ಕರಕಲಾದ ದಾರುಣ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಇಲ್ಲಿಯ ನಿವಾಸಿಗಳಾದ ನೀಲಯ್ಯ ಶೆಟ್ಟಿಗಾರ್ (42) ಮತ್ತು ಕೇಸರಿ (39) ಎಂಬವರ ಮೃತದೇಹ ಬೆಂಕಿ ಹಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆ ಎಂಬ ಶಂಕೆ ಇದ್ದರೂ ಘಟನೆಯ ಕುರಿತು ಕೂಲಂಕಷವಾಗಿ ತನಿಖೆ ನಡೆಸುತ್ತಿರುವ ಪೊಲೀಸರು, ಅಸಹಜ ಮರಣ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ನಿಖರ ಕಾರಣಗಳನ್ನು ಮರಣೋತ್ತರ ಪರೀಕ್ಷೆಯ ತಿಳಿಯಲು ಸಾಧ್ಯವಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು, ಅವರು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು.
ನರಳಾಡುವ ಸದ್ದು ಕೇಳಿ ಅವರು ಹೊರ ಬಂದಾಗ ನೀಲಯ್ಯ ಮತ್ತು ಕೇಸರಿ ಬೆಂಕಿಯಿಂದ ಸುಟ್ಟು ಕರಟಿರುವುದು ಕಂಡು ಬಂದಿದೆ.ತಕ್ಷಣ ಸ್ಥಳೀಯರು ಸೇರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆದಾಗಲೇ ಅವರಿಬ್ಬರು ಸಾವನ್ನಪ್ಪಿದ್ದರೆನ್ನಲಾಗಿದೆ. ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಸಿ.ಡಿ.ನಾಗರಾಜ್ ನೇತೃತ್ವದಲ್ಲಿ ಎಸ್.ಐ. ಪ್ರಸನ್ನ ತನಿಖೆ ನಡೆಸುತ್ತಿದ್ದಾರೆ.