ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾಗೂ ಕರ್ನಾಟಕ ನೋಂದಣಿ ಇರುವ ವಾಹನಗಳ ಕಲ್ಲು ತೂರಾಟ ನಡೆದಿದೆ. ಚೆನ್ನೈನಲ್ಲಿರುವ ಉಡುಪಿ ಹೋಟೆಲೊಂದರ ಮೇಲೂ ದಾಳಿ ನಡೆದಿದೆ.

jailamma
ತಿರುಚಿ, ಸೇಲಂ, ದಿಂಡಿಗಲ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಜಯಾ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರವಾಸಿ ತಾಣ ಊಟಿ ಹಾಗೂ ಬೆಂಗಳೂರು ಸಮೀಪದ ಹೊಸೂರಿನಲ್ಲಿ ಕರ್ನಾಟಕ ನೋಂದಣಿ ಇರುವ ವಾಹನಗಳ ಮೇಲೆಯೂ ದಾಳಿ ನಡೆದಿದೆ.

ಮಂಗಳವಾರ ಟಿವಿ ಚಾನೆಲ್‌ಗಳಲ್ಲಿ ಜಯಾಗೆ ಜಾಮೀನು ಸಿಕ್ಕಿತು ಎಂಬ ಸುದ್ದಿ ಕೇಳಿ ಸಂಭ್ರಮಾಚರಣೆಯಲ್ಲಿದ್ದ ಎಐಡಿಎಂಕೆ ಕಾರ್ಯಕರ್ತರು ನಂತರ, ‘ಜಾಮೀನು ನೀಡಿಲ್ಲ ‘ ಎಂಬ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ರೊಚ್ಚಿಗೆದ್ದು ನಗರದ ‘ದಿ ಡೇಟಾ ಉಡುಪಿ ಹೋಟೆಲ್’ ಮೇಲೆ ಕಲ್ಲು ತೂರಾಟ ಮಾಡಿ, ಗಾಜು, ಕುರ್ಚಿಗಳನ್ನು ಪುಡಿಪುಡಿ ಮಾಡಿದರು. ಕರ್ನಾಟಕ ಸರಕಾರ ಮತ್ತು ಕನ್ನಡಿಗರ ವಿರುದ್ಧ ಧಿಕ್ಕಾರ ಕೂಗಿ ಕೋಪ ಪ್ರದರ್ಶಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು ಎಂದು ವರದಿಯಾಗಿದೆ.

ಕರ್ನಾಟಕ ಹೈಕೋರ್ಟಿನಿಂದ ಜಯಾಗೆ ಜಾಮೀನು ಸಿಗದಿದ್ದರೆ ತಮಿಳುನಾಡಿನಲ್ಲಿರುವ ಕನ್ನಡಿಗರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗುವುದು ಎನ್ನುವ ಬ್ಯಾನರ್‌ಗಳು ಚೆನ್ನೈನಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದವು. ಈ ಬೆಳವಣಿಗೆಗೆ ಟೀಕೆಗಳು ಬಂದ ಬೆನ್ನಲ್ಲೇ ಸರಕಾರ ಅದನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸಿತ್ತು. ಅಲ್ಲದೇ ಕನ್ನಡಿಗರ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಹೇಳಿಕೆ ನೀಡಿದ್ದರು.

By suddi9

Leave a Reply

Your email address will not be published. Required fields are marked *