ನವದೆಹಲಿ, : ಆಂಧ್ರ ಪ್ರದೇಶ ಹಾಗೂ ಒರಿಸ್ಸಾದ ಕರಾವಳಿ ತೀರ ಪ್ರದೇಶದಲ್ಲಿ ಹುಡ್ ಹುಡ್ ಚಂಡಮಾರುತ ಕೆಲವೇ ಕ್ಷಣಗಳಲ್ಲಿ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಎಲ್ಲೆಡೆ ಹಿಂದೆಂದಿಗಿಂತಲೂ ಅಭೂತಪೂರ್ವ ಕಟ್ಟೆಚ್ಚರ ವಹಿಸಲಾಗಿದೆ.
ವಿಶಾಖಪಟ್ಟಣಂ ಸಮೀಪ ಹುಡ್ ಹುಡ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇವಲ 350ಕಿಮೀ ದೂರದಲ್ಲಿರುವ ಹುಡ್ ಹುಡ್ ಗಂಟೆಗೆ 500ಕಿಮೀ ವೇಗದಲ್ಲಿ ಅಪ್ಪಳಿಸುತ್ತಿದ್ದು, ಚಂಡಮಾರುತ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಅನಾಹುತ ಸೃಷ್ಟಿಸಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಒರಿಸ್ಸಾದ ಗೋಪಾಲಪುರಂ ಮೂಲಕ ಹಾದು ಬರುತ್ತಿರುವ ಚಂಡಮಾರುತ ವಿಶಾಖಪಟ್ಟಣಂನಲ್ಲಿ ಅಪ್ಪಳಿಸಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ತುರ್ತುಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಗೃಹ ಇಲಾಖೆ ಎರಡೂ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಮತ್ತು ಒರಿಸ್ಸಾ ಸರ್ಕಾರಗಳು ಈಗಾಗಲೇ ಕರಾವಳಿ ತೀರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು,
ಮುನ್ನೆಚ್ಚರಿಕೆ ಕ್ರಮವಾಗಿ 6 ಲಕ್ಷಕ್ಕೂ ಹೆಚ್ಚಿನ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಈಗಾಗಲೇ ವಿಶಾಖಪಟ್ಟಣಂ ಮತ್ತು ಭುವನೇಶ್ವರಕ್ಕೆ ಕೇಂದ್ರದ ಎನ್‍ಡಿಆರ್‍ಎಫ್‍ನ 39 ತಂಡಗಳು, ಪ್ರಕೃತಿ ವಿಕೋಪ ಕ್ಷಿಪ್ರ ಕಾರ್ಯಪಡೆಯ 12 ತಂಡಗಳು 10 ಜಿಲ್ಲೆಗಳಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ದಗೊಂಡಿದೆ.