ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಯೂರೇಶ್ವರ ಮಠದ ಗಣೇಶ ಯೋಗಿ ಮಹಾರಾಜರು (ಆನಂದ ಸ್ವಾಮೀಜಿ) (87) ಶನಿವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲಿಯೇ ವಿಷ ಸೇವಿಸಿ ಸಾವನ್ನಪ್ಪುತ್ತೇನೆ. ಆದರೆ, ಮತ್ತೆ ಮೂರು ದಿನಗಳ ಬಳಿಕ ಎದ್ದು ಬರುತ್ತೇನೆ ಎಂದು ಕೆಲವು ಭಕ್ತರ ಮುಂದೆ ಈಚೆಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಹೀಗಾಗಿ ಸ್ವಾಮೀಜಿ ಎದ್ದು ಬರುತ್ತಾರೆ. ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ಕೆಲವು ಭಕ್ತರು ಶವಪರೀಕ್ಷೆ ನಡೆಸಲು ಅವಾಕಶ ಮಾಡಿಕೊಡದೆ ವಿಳಂಬ ಮಾಡಿದರು. ಕೊನೆಗೆ ಮಠದ ಭಕ್ತರಿಗೆ ಪೊಲೀಸರು ಬುದ್ಧಿವಾದ ಹೇಳಿದ ಬಳಿಕ ಭಾನುವಾರ ಮಧ್ಯಾಹ್ನ 3.30ಕ್ಕೆ ಶವಪರೀಕ್ಷೆಗೆ ಕಳುಹಿಸಲಾಗಿದೆ.

ಸ್ವಾಮೀಜಿ ಗಣಪತಿಯ ಆರಾಧಕರಾಗಿದ್ದು, ಸಾಕಷ್ಟು ಭಕ್ತರನ್ನು ಹೊಂದಿದ್ದರು. ಗಣಪತಿ ಮಂದಿರಲ್ಲಿ ವಾಸಿಸುತ್ತಿದ್ದ ಇವರು ಪ್ರತಿ ತಿಂಗಳು ಸಂಕಷ್ಟಿ ಚುತುರ್ಥಿ ದಿನದಂದು ವಿಶೇಷ ಪೂಜೆ ನೆರವೇರಿಸುತ್ತಿದ್ದರು. ಸಾಮಾಜಿಕ ಕಾರ್ಯಕ್ರಮಗಳಲ್ಲೂ ತೊಡಗಿಕೊಳ್ಳುತ್ತಿದ್ದರು.
ಹಿನ್ನೆಲೆ: ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನವರು. ಇವರು ತಮ್ಮ 19ನೇ ವಯಸ್ಸಿನಲ್ಲಿಯೇ ಮನೆ ತೊರೆದಿದ್ದರು. ಕೆಲವು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 50 ವರ್ಷಗಳ ಹಿಂದೆ ಕೆಂಪವಾಡ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಅವರ ಮೂಲ ಹೆಸರು ಫಕೀರಪ್ಪ ಪಾಟೀಲ.