ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಬಡ ಮಹಿಳೆಯರಿಗೆ ಸೀರೆ , ಊಟದ ತಟ್ಟೆ, ಅಕ್ಕಿ ಮತ್ತಿತ್ತರ ಪರಿಕರಗಳನ್ನು ವಿತರಿಸಲಾಯಿತು. ಆಶ್ರಮದಲ್ಲಿ ಅನೇಕ ಸೇವಾ ಕಾರ್ಯಕ್ರಮಗಳು ನಡೆಯುತ್ತಿದ್ದು ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕು ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮಿ ವಿವೇಕಚೈತನ್ಯಾನಂದ ಅವರು ತಿಳಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಪೊಳಲಿ ರಾಜರಾಜೇಶ್ವರಿ ದೇಗುಲದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು. ಬಳಿಕ ಶ್ರೀ ಅನಂತಶಯನ ಮಹಿಳಾ ಯಕ್ಷಕಲಾ ಮಂಡಳಿ, ಕಾರ್ಕಳ ಇವರಿಂದ ಭಕ್ತ ಸಂಘರ್ಷ ಎನ್ನುವ ತಾಳಮದ್ದಳೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಎ.ಜೆ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ ಡಾ. ಜಯಶಂಕರ್ ಮಾರ್ಲ, ಆಶ್ರಮದಲ್ಲಿ ಅನೇಕ ಕಾರ್ಯಕ್ರಮ ನಡೆಯುತ್ತಿದ್ದು ಆಶ್ರಮದ ಉತ್ತಮ ಕಾರ್ಯಗಳಿಗೆ ನೀವೆಲ್ಲಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.
ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ, ಪೊಳಲಿ ಪರಿಸರದಲ್ಲಿ ಸದ್ದಿಲ್ಲದೇ ಕಳೆದ 12 ವರ್ಷಗಳಿಂದ ಆಶ್ರಮವು ಅನೇಕ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿದೆ. ಇನ್ನು ಆಶ್ರಮದ ಸೇವಾ ಕಾರ್ಯಗಳು ಹಲವರಿಗೆ ಸ್ಫೂರ್ತಿದಾಯಕ ಎಂದರು. ಸಭಾ ಕಾರ್ಯಕ್ರಮದಲ್ಲಿ ಪೊಳಲಿ ದೇವಳದ ಮೊಕ್ತೇಸರ ಉಳಿಪಾಡಿಗುತ್ತು ಯು. ತಾರಾನಾಥ್ ಆಳ್ವ ಭಾಗವಹಿಸಿದ್ದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಇದ್ದರು.
ಈ ಕಾರ್ಯಕ್ರಮದ ಬಳಿಕ ಪೊಳಲಿ ಸುತ್ತಮುತ್ತಲಿನ ಸುಮಾರು 350ಕ್ಕೂ ಹೆಚ್ಚು ಬಡ ಮಹಿಳೆಯರಿಗೆ ಫಲ ತಾಂಬೂಲಗಳೊಂದಿಗೆ ಸೀರೆ, ಊಟದ ತಟ್ಟೆ, ಅಕ್ಕಿ ಮತ್ತಿತ್ತರ ಪರಿಕರಗಳನ್ನು ವಿತರಿಸಲಾಯಿತು.


