ಕೈಕಂಬ : ಗುರುಪುರ ಮೂಳೂರು ಗ್ರಾಮದ ನಡುಗುಡ್ಡೆಯಲ್ಲಿ ಭಾನುವಾರ ಬೀಸಿದ ಭಾರೀ ಗಾಳಿ ಮಳೆಗೆ ಮರ ಬಿದ್ದು ಹಾನಿಗೀಡಾದ ಜಯಶ್ರೀ ಎಂಬವರ ಮನೆಗೆ ಮಂಗಳವಾರ ಭೇಟಿ ನೀಡಿದ ಶಾಸಕ ಡಾ. ಭರತ್ ಶೆಟ್ಟಿ, ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರು ತಹಶೀಲ್ದಾರ್ಗೆ ಕರೆ ಮಾಡಿ ಪರಿಹಾರದ ಬಗ್ಗೆ ಸೂಕ್ತ ಹಾಗೂ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಎಪ್ರಿಲ್ ೩ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸುಟ್ಟು ಹೋಗಿರುವ ಕುಕ್ಕುದಕಟ್ಟೆಯ ಕೃಷ್ಣ ಪೂಜಾರಿಯವರ ಮನೆಗೆ ಭೇಟಿ ನೀಡಿದ ಶಾಸಕ ಡಾ. ಭರತ್ ಶೆಟ್ಟಿ, ಮನೆ ಪುನರ್ ನಿರ್ಮಾಣಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯ ಒದಗಿಸಲು ಪ್ರಯತ್ನಿಸುವುದರೊಂದಿಗೆ ತನ್ನಿಂದ ಸಾಧ್ಯವಿರುವ ಸಹಾಯ ಮಾಡುವೆ. ನಾಳೆಯೇ ಮನೆ ನಿರ್ಮಾಣ ಕಾಮಗಾರಿ ಮುಂದುವರಿಸಿ ಎಂದರು.
ಶಾಸಕರ ಜೊತೆಯಲ್ಲಿ ಗುರುಪುರ ಪಂಚಾಯತ್ ಸದಸ್ಯರಾದ ಸುನಿಲ್ ಕುಮಾರ್, ರಾಜೇಶ್ ಸುವರ್ಣ, ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ಬಿಜೆಪಿ ಮುಖಂಡರಾದ ಶ್ರೀಕರ ಶೆಟ್ಟಿ, ವಿನಯ್, ಶರತ್, ಸುರೇಂದ್ರ ಮತ್ತಿತರರು ಇದ್ದರು.