ಮುಂಬಯಿ: ಯೂನಿವರ್ಸಿಟಿಸ್ ಅಂಡಲಾಸ್ ಪಡಂಗ್ ಇಂಡೋನೇಷಿಯಾ ಆಯೋಜನೆಯಲ್ಲಿ ಆ.೨೪ ರಿಂದ ೨೫ರ ಎರಡು ದಿನ ಇಂಡೋನೇಷಿಯಾದಲ್ಲಿ ಐ-ಸೆಂಟ್ರೊಐಡ್-೨೦೨೧ ಪ್ರಥಮ ಅಂತರಾಷ್ಟ್ರೀಯ ಸಮಾವೇಶ ನಡೆಯಲಿದ್ದು ಭಾರತ ರಾಷ್ಟ್ರದ ಏಕೈಕ ಪ್ರಧಾನ ಭಾಷಣಕಾರರಾಗಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಬಡಗ ಮಿಜಾರು ಇಲ್ಲಿನ ಮ್ಯಾಂಗಳೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಎಂಐಟಿಇ) ಇದರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ| ಜಯಪ್ರಕಾಶ್ ಎಂ.ಸಿ ಆಯ್ಕೆಯಾಗಿದ್ದಾರೆ.
ಕೋವಿಡ್-೧೯ರ ನಿಮಿತ್ತ ಆನ್ಲೈನ್ (ಝೂಮ್ ಮೀಟಿಂಗ್) ಮೂಲಕವಾಗಿ ಉದ್ಯಮ ಅಭಿವೃದ್ಧಿಯ ನಿರ್ಮಾಣದ ಕುರಿತು ಜಾಗತಿಕವಾಗಿ ಆಯೋಜಿಸಿರುವ ಈ ಅಂತರಾಷ್ಟ್ರೀಯ ಸಮಾವೇಶ ಮತ್ತು ವಿಚಾರ ಸಂಕಿರಣವನ್ನು ಇಂಡೋನೇಷಿಯಾದ ಸಾರ್ವಜನಿಕ ಕೆಲಸ ಮತ್ತು ವಸತಿ ಸಚಿವ ಸಮ್ಮೇಳನ ಉದ್ಘಾಟಿಸುವರು. ಎರಡು ದಿನಗಳಲ್ಲಿ ನಡೆಸಲ್ಪಡುವ ಈ ಪೂರ್ಣ ಅಧಿವೇಶನದಲ್ಲಿ ಭಾರತ ರಾಷ್ಟçದಿಂದ ಡಾ| ಜಯಪ್ರಕಾಶ್ ಏಕೈಕ ಭಾಷಣಕಾರರಾಗಿದ್ದು ಆ.೨೪ನೇ ಮಂಗಳವಾರ ಭಾರತೀಯ ಸಮಯಾನುಸಾರ ಉದ್ಯಮ ಅಭಿವೃದ್ಧಿಯ ನಿರ್ಮಾಣ ಕುರಿತು ಪ್ರಧಾನ ವಿಷಯವಾಗಿ ತಮ್ಮ ವ್ಯಾಖ್ಯಾನ ಮಂಡಿಸಲಿದ್ದಾರೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ| ಬೆನ್ನಿ ಹಿದಾಯತ್ ತಿಳಿಸಿದ್ದಾರೆ.
ಭಾರತ ರಾಷ್ಟ್ರದ ಗೌರವಾನ್ವಿತ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ರಾರಂಭಿಸಿದ ಆತ್ಮ ನಿರ್ಭಾರ್ ಭಾರತ್ ಯೋಜನೆಯ ಅಡಿಯಲ್ಲಿ ಐಐಟಿ ಮುಂಬಯಿ, ಎಐಸಿಟಿಇ ಮತ್ತು ಇಸ್ರೋ ಸಂಸ್ಥೆಗಳು ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಮಾಪಥಾನ್ ೨೦೨೦-೨೧ (ರಾಷ್ಟ್ರೀಯ ಮಟ್ಟದ ಸಹಕಾರಿ ಭಾರತೀಯ ಮ್ಯಾಪಿಂಗ್ ಈವೆಂಟ್) ಸ್ಪರ್ಧೆಯಲ್ಲಿ ಡಾ| ಜಯಪ್ರಕಾಶ್ ತನ್ನ ಸಾರತ್ಯದಲ್ಲಿ ತಂಡದೊಂದಿಗೆ ಸ್ಪರ್ಧಿಸಿ ವಿಜೇತ ಗೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಮಡ್ತಿಲ ನಿವಾಸಿ, ನಿವೃತ್ತ ಸಬ್ ಇನ್ಸ್ಪೆಕ್ಟರ್ ಚಿನ್ನಪ್ಪ ಗೌಡ ಮಡ್ತಿಲ ಮತ್ತು ಹೊನ್ನಮ್ಮ ಚಿನ್ನಪ್ಪ (ಸ್ವರ್ಗೀಯರು) ದಂಪತಿ ಸುಪುತ್ರರಾಗಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮಡಿವಾಳ ಹೈಸ್ಕೂಲು ಬೆಂಗಳೂರು, ಐವರ್ನಾಡು ಪದವಿಪೂರ್ವ ಕಾಲೇಜು ಇಲ್ಲಿ ಫ್ರೌಡ ಶಿಕ್ಷಣ ಹಾಗೂ ಬಿಎಸ್ಸಿ ಪದವಿಯನ್ನು ಎನ್ಎಂಸಿ ಸುಳ್ಯ ಇಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಹಾಗೂ ಪಿಹೆಚ್ಡಿ ಸನದು ಪಡೆದಿರುವರು.