ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.7ರ ಭಾನುವಾರ ನಡೆಯಿತು. ಈ ವೇಳೆ ಮಕ್ಕಳ ವಿವಿಧ ವಿನೋದಾವಳಿಗಳು ನೆರದಿದ್ದ ಸಭಿಕರಿಗೆ ಮನರಂಜನೆಯನ್ನು ನೀಡಿತು.
ಈ ವೇಳೆ ಸಭಾಕಾರ್ಮಾಯಕ್ತಾರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಕರಿಯಂಗಳ ಗ್ರಾ.ಪಂ. ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಮಕ್ಕಳಿಗೆ ಆಸ್ತಿಯನ್ನು ಕೂಡಿಡುವುದಕ್ಕಿಂತಲೂ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಇದಕ್ಕಾಗಿ ಮಕ್ಕಳಿಗೆ ಸೂಕ್ತ ವಿದ್ಯೆ ನೀಡಿದರೆ ಮುಂದೆ ಮಕ್ಕಳೇ ಆಸ್ತಿಯನ್ನಾಗುತ್ತಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಒಂದು ವರ್ಗದ ಧಾರ್ಮಿಕ ನಂಬಿಕೆಯ ಜನರು ಮಾತ್ರ ಭಾಗವಹಿಸುತ್ತಾರೆ. ಆದರೆ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಎಲ್ಲಾ ಪಂಗಡದವರು ಭಾಗವಹಿಸುತ್ತಾರೆ. ಮಕ್ಕಳು ದೇವರಿಗೆ ಸಮಾನ ಅಂಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಸತ್ಪ್ರಜೆಗಳಾಗುತ್ತಾರೆ ಎಂದು ನುಡಿದರು.
ಕಾರ್ಯಕ್ರಮ ಮುಂಚಿತವಾಗಿ ಬೆಳಿಗ್ಗೆ ಪೊಳಲಿ ರಾಮಕೃಷ್ಣ ತಪೋವನದ ವಿವೇಕಚೈತನ್ಯಾನಂದ ಸ್ವಾಮೀಜಿಗಳಿಂದ ಧ್ವಜವಂದನೆ ನಡೆಯಿತು. ಬಳಿಕ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂ.ಸದಸ್ಯೆ ಜಯಶ್ರೀ ಕೆ.ಎ ದೀಪ ಬೆಳಗಿಸಿ ಉದ್ಘಾಟಿಸಿದರು. ಕರಿಯಂಗಳ ಗ್ರಾಮ ಪಂ.ಅಧ್ಯಕ್ಷ ಚಂದ್ರಶೇಖರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪಂ.ನ ಪಿಡಿಓ ನವೀನ್ ಭಂಡಾರಿ, ಕರಿಯಂಗಳದ ತಾ.ಪಂ. ಸದಸ್ಯೆ ಗುಣವತಿ, ಉದ್ಯಮಿ ರುಕ್ಕಯ್ಯ ಎನ್. ಬಂಗೇರಾ , ಅರ್ಚಕರಾದ ಪಲ್ಲಿಪಾಡಿಯ ಪಿ.ರಾಮಚಂದ್ರ ತುಂಗ, ಮಾಮು ಬ್ಯಾರಿ ಧಾರಿಮಿ. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಶೆಟ್ಟಿ ಪ್ರಗತಿಪರ ಕೃಷಿಕರಾದ ಗಂಗಯ್ಯ ಪೂಜಾರಿ, ರಾಜು ಕೋಟ್ಯಾನ್, ಉಮೇಶ್ ಆಚಾರ್ಯ, ಬಸೀರ್ ಬಡಕಬೈಲ್ , ಚಂದ್ರಹಾಶ ಪಲ್ಲಿಪಾಡಿ, ಮುಖ್ಯ ಶಿಕ್ಷಕಿ ವರೆನಿಕಾ ಡಿಸಿಲ್ವಾ, ಬೆಸೆಂಟ್ ಸಂಧ್ಯಾ ಕಾಲೇಜಿನ ಉದಯ, ಎಸ್ ಡಿಎಂ ಸಿ ಅಧ್ಯಕ್ಷ ಚಂದ್ರಶೇಖರ ರಾವ್ ಮೊದಲಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಾಟಿವ್ಯದ್ಯ ಬಾಲಚಂದ್ರಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಕಾರ್ಯಕ್ರಮದ ಬಳಿಕ `ಒಂತೆ ಬುಲಿಪುಲೆ ಒಂತೆ ತೆಲಿಪುಲೆ’ ಹಾಗೂ ಕೆಂಚನ ಗಮ್ಮತ್ ಎಂಬ ತುಳು ಹಾಸ್ಯಮಯ ಸಾಮಾಜಿಕ ನಾಟಕಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಶಿಕ್ಷಕಿ ವಿನೋದಾ ಕಾರ್ಯಕ್ರಮ ನಿರೂಪಿಸಿದರು.

































