ಮೂಡುಬಿದಿರೆ : ಇಲ್ಲಿನ “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಸಂಸ್ಕøತಿ ಗ್ರಾಮದಲ್ಲಿ ಹದಿಮೂರನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವವು ಶನಿವಾರ ಬೆಳಿಗ್ಗೆ ಆರಂಭಗೊಂಡಿತು. ಕಂಬಳದ ಹೆಸರಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು, ಪ್ರಾಣಿದಯಾ ಸಂಘದವರು ಕಂಬಳದತ್ತ ತನ್ನ ಹದ್ದಿನ ಕಣ್ಣಿಟ್ಟಿದ್ದರು.

ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಗುರುತಿಸಿಕೊಂಡು ಬಂದಿರುವ, ರಾಜ್ಯ ಯುವಜನ ಸೇವೆ ಸಚಿವ, ಕಂಬಳ ಸಮಿತಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ನೇತೃತ್ವದಲ್ಲಿ ನಡೆಯುವ ಮೂಡುಬಿದಿರೆಯ ಪ್ರತಿಷ್ಠಿತ ಕಂಬಳವನ್ನು ಆಲಂಗಾರು ಚರ್ಚ್‍ನ ಧರ್ಮಗುರು ರೆ/ಫಾ/ ಬೇಸಿಲ್ ವಾಸ್, ಆಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ/ಮೂ/ಈಶ್ವರ ಭಟ್ ಮತ್ತು ಪುತ್ತಿಗೆಯ ಧರ್ಮಗುರು ಇ.ಎಂ.ಶಾಫಿ ಸಾಬ್ ಅವರು ಮೂವರು ಜತೆಗೂಡಿ ಕಂಬಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಅಧ್ಯಕ್ಷತೆಯನ್ನು ವಹಿಸಿ ಕಂಬಳದ ಕರೆಗೆ ತೆಂಗಿನಕಾಯಿಯನ್ನು ಒಡೆಯುವ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.
ಕಂಬಳ ಸಮಿತಿಯ ಕೋಶಾಧಿಕಾರಿ ಭಾಸ್ಕರ ಕೋಟ್ಯಾನ್, ಉಪಾಧ್ಯಕ್ಷರುಗಳಾದ ಮೇಘನಾಥ ಶೆಟ್ಟಿ, ರತ್ನಾಕರ ಮೊಯಿಲಿ, ಪ್ರೇಮನಾಥ ಮಾರ್ಲ, ಏರಿಮಾರು ಚಂದ್ರಹಾಸ ಸನಿಲ್, ಕಾರ್ಯದರ್ಶಿ ಸುರೇಶ್ ಪ್ರಭು, ತಹಶೀಲ್ದಾರ್ ಮಹಮ್ಮದ್ ಇಸಾಕ್, ರೋಟರಿ ಕ್ಲಬ್ ಅಧ್ಯಕ್ಷ ಡಾ.ಮುರಳಿಕೃಷ್ಣ, ರೋಟರ್ಯಾಕ್ಟ್ ಅಧ್ಯಕ್ಷ ಉದಯಕುಮಾರ್, ಜೆಸೀ ಅಧ್ಯಕ್ಷ ಧೀರೆಂದ್ರ ಬಲ್ಲಾಳ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಪಿ.ಕೆ.ಥೋಮಸ್, ಕೊರಗಪ್ಪ, ನಾಗರಾಜ ಪೂಜಾರಿ, ನಾಮನಿರ್ದೇಶಿತ ಸದಸ್ಯರಾದ ಇಕ್ಬಾಲ್ ಕರೀಮ್ ಮತ್ತು ಆಲ್ವೀನ್ ಮಿನೇಜಸ್, ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಒಂಟಿಕಟ್ಟೆಯ ಅಯ್ಯಪ್ಪ ಮಂದಿರದಲ್ಲಿ ಪೂಜೆ ವಿಧಿವಿಧಾನಗಳನ್ನು ನೆರವೇರಿಸಿ ಕಂಬಳದ ಕೋಣಗಳನ್ನು ಕರೆಗೆ ತರಲಾಯಿತು. ನಂತರ ಮಂದಿರದ ಪ್ರಸಾದವನ್ನು ಕಂಬಳದ ಕರೆಗೆ ಅರ್ಪಿಸಲಾಯಿತು. ನಂತರ ಕಂಬಳದ ಕೋಣಗಳ ಯಜಮಾನರುಗಳಿಗೆ ಸಿಹಿಯಾಳಗಳನ್ನು ನೀಡಿ ಸ್ವಾಗತಿಸಲಾಯಿತು.
ಮೂಡುಬಿದಿರೆ ಕಂಬಳದ ವಿಶೇಷ : ಕಳೆದ ಹನ್ನೆರಡು ವರ್ಷಗಳಿಂದಲೂ ಮೂವರು ಧರ್ಮಗುರುಗಳಿಂದಲೇ ಕಂಬಳಕ್ಕೆ ಚಾಲನೆ ಹಾಗೂ ಶಿಸ್ತುಬದ್ಧ ಕಂಬಳ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಪ್ರತಿವರ್ಷವೂ ಸಿನೆಮಾ ಮತ್ತು ಕಿರುತೆರೆಯ ಕಲಾವಿದರಿಗೆ ಆಹ್ವಾನ, ಅಹಿಂಸೆಗೆ ಹೆಚ್ಚಿನ ಆದ್ಯತೆ ಹಾಗೂ ಮೂರು ಹೊತ್ತು ಗಂಜಿ ಊಟ ಮತ್ತು ಚಾ-ತಿಂಡಿಯ ವ್ಯವಸ್ಥೆಯನ್ನು ಮಾಡುತ್ತಿರುವುದು ಮೂಡುಬಿದಿರೆ ಕಂಬಳದ ವಿಶೇಷ.


