ಬಂಟ್ವಾಳ; ಪಿಲಾತಬೆಟ್ಟು ಗ್ರಾಮಪಂಚಾಯತ್ ಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ನಡೆದ ಕಾಮಗಾರಿಯ ಪುನರ್ ಪರಿಶೀಲನೆಗೆಂದು ಬೆಂಗಳೂರಿನಿಂದ ಆಗಮಿಸಿದ್ದ ಯೋಜನೆಯ ಅಧಿಕಾರಿಯೊಬ್ಬರು ಹಠಾತ್ತನೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ಪಿಲಾತಬೆಟ್ಟು ಗ್ರಾ.ಪಂ. ವ್ಯಾಪ್ತಿಯ ನಿನ್ಯಾರು ಎಂಬಲ್ಲಿ ಸಂಭವಿಸಿದೆ.

ಮೃತರನ್ನು ಮೂಲತಃ ಬೆಳಗಾವಿ ನಿವಾಸಿ ಗುರುರಾಜ್ ಎಂ.ಜಂಬಲಗಿ(55) ಎಂದು ಗುರುತಿಸಲಾಗಿದೆ. ಇವರು ತನ್ನ ಸಹ ಅಧಿಕಾರಿಯೊಂದಿಗೆ ಮಂಗಳವಾರ ಪಿಲಾತಬೆಟ್ಟು ಗ್ರಾಮಪಂಚಾಯತ್ ಗೆ ಆಗಮಿಸಿ ಬಳಿಕ ನಿನ್ಯಾರು ಎಂಬಲ್ಲಿ ಉದ್ಯೋಗ ಖಾತರಿಯೋಜನೆಯಡಿ ನಡೆದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ವಾಪಾಸು ತಮ್ಮ ವಾಹನದತ್ತ ನಡೆದುಕೊಂಡು ಬರುತ್ತಿದ್ದ ವೇಳೆ ಹಠಾತ್ತನೇ ರಸ್ತೆಯಲ್ಲಿ ಕುಸಿದುಬಿದ್ದರೆನ್ನಲಾಗಿದೆ. ತಕ್ಷಣ ಅವರೊಂದಿಗಿದ್ದ ಅಧಿಕಾರಿಗಳು ಗುರುರಾಜ್ ಅವರನ್ನು ಅದೇ ವಾಹನದಲ್ಲಿ ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸುತ್ತಿದ್ದ ವೇಳೆ, ದಾರಿ ಮಧ್ಯದಲ್ಲಿ ಗುರುರಾಜ್ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ.
ಹೃದಯಾಘಾತಕ್ಕೊಳಗಾಗಿ ಇವರು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ. ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸುದ್ದಿ ತಿಳಿದ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ , ಜಿಲ್ಲಾಪಂಚಾಯತ್ ಉಪಕಾರ್ಯದಶರ್ಿ ಎನ್..ಆರ್. ಉಮೇಶ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ, ಮಂಜುವಿಟ್ಲ ಮೊದಲಾದವರು ಆಸ್ಪತ್ರೆಗೆ ಭೇಟಿನೀಡಿದರು.


