ಮುಂಬೈ: ಮಹಾರಾಷ್ಟ್ರದಲ್ಲಿ ಕೊನೆಗೂ ಗೋ ಹತ್ಯಾ ನಿಷೇಧ ಕಾಯದೆ ಜಾರಿಗೆ ಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಮಹತ್ವದ ಕಾಯ್ದೆಯನ್ನು ಜಾರಿಗೊಳಿಸಿ ಹಲವಾರು ಪುಣ್ಯಕೋಟಿಗಳಿಗೆ ಜೀವದಾನ ನೀಡಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಮಹತ್ವದ ಕಾಯ್ದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿರುವುದಕ್ಕೆ ಸಿಎಂ ಫಡ್ನವೀಸ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಕೃಷಿ ಪ್ರಧಾನ ರಾಜ್ಯವಾಗಿದ್ದು, ಈ ಕಾನೂನು ಜಾರಿಗೊಂಡಿದ್ದರಿಂದ ಗೋವುಗಳ ಸಂರಕ್ಷಣೆಯಾಗುವುದಲ್ಲದೆ, ಕೃಷಿ ಚಟುವಟಿಕೆ ಹೆಚ್ಚಾಗುತ್ತದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಗೋಹತ್ಯೆ ಮಾಡಿದರೆ 5 ವರ್ಷ ಜೈಲು, ದನದ ಮಾಂಸ ಮಾರಾಟ ಮಾಡುವಂತಿಲ್ಲ. ಮಾಡಿದರೆ 10,000 ರು ದಂಡ ವಿಧಿಸಲಾಗಿದೆ.
1995ರಲ್ಲಿ ಬಿಜೆಪಿ -ಶಿವಸೇನೆ ಸರ್ಕಾರ ಇದ್ದಾಗ ಮಹಾರಾಷ್ಟ್ರದಲ್ಲಿ ಪ್ರಾಣಿ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಚರ್ಚೆಗೆ ಬಂದಿತ್ತು. ಅದರೆ, 19ವರ್ಷಗಳ ಕಾಲ ಪರ -ವಿರೋಧ ಮಾತುಕತೆಯಲ್ಲೇ ವಿಧೇಯಕ ನೆನೆಗುದಿಗೆ ಬಿದ್ದಿತ್ತು. ಈಗ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮತ್ತೊಮ್ಮೆ ಕಾನೂನು ಜಾರಿಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಅಂತಿಮವಾಗಿ ಮಾರ್ಚ್ 2 ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.