ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಕಾಲನಿಯಲ್ಲಿ ಸರ್ಕಾರವು ಒಂಭತ್ತು ಮಂದಿ ಅರ್ಹ ಫಲಾನುಭವಿಗಳಿಗೆ ನೀಡಿದ ನಿವೇಶನದಲ್ಲಿ ರೂ.2.40ಲಕ್ಷ ವೆಚ್ಚದಲ್ಲಿ ಬಂಟ್ವಾಳ ರೋಟರಿ ಕ್ಲಬ್ ಮತ್ತು ಪುಂಜಾಲಕಟ್ಟೆ ಸ್ವಸ್ತಿಕ್ ಕ್ಲಬ್ಬಿನ ವತಿಯಿಂದ ನಿರ್ಮಿಸಲಾಗಿರುವ ಎಲ್ಲಾ ಮನೆಗಳನ್ನು ಇದೇ 15ರಂದು ರೋಟರಿ ಜಿಲ್ಲಾ ಗವರ್ನರ್ ಡಾ.ಭಾಸ್ಕರ ಎಸ್.ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು.
ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ ಕಾರಂತ ಅವರು ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಸರ್ಕಾರವು ಒಟ್ಟು 10 ನಿವೇಶನದ ಜೊತೆಗೆ ಒಂದು ಮನೆಗೆ ತಲಾ ರೂ 1.40ಲಕ್ಷ ಅನುದಾನ ನೀಡಿದೆ. ಈ ಪೈಕಿ ಸ್ಥಳೀಯ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಒಂದು ಮನೆ ಪೂರ್ಣಗೊಳಿಸಿ ಹಸ್ತಾಂತರಿಸಿದೆ.
ಇದೀಗ ರೋಟರಿ ಕ್ಲಬ್ ಮತ್ತು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ಬಿನ ವತಿಯಿಂದ ತಲಾ ರೂ ಒಂದು ಲಕ್ಷ ಭರಿಸಿ ಒಟ್ಟು ರೂ 12.6ಲಕ್ಷ ವೆಚ್ಚದಲ್ಲಿ ಒಂಭತ್ತು ಮನೆ ನಿರ್ಮಾಣಗೊಂಡಿದೆ. ಈಗಾಗಲೇ ಮನೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಆವರಣಗೋಡೆ ನಿರ್ಮಾಣಗೊಂಡಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಗತಿಪರಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಎಂ.ತುಂಗಪ್ಪ ಬಂಗೇರ, ಗಿರಿಜ, ರಮೇಶ ಕಡ್ಮೇರು, ಭಾರತಿ ಶೆಟ್ಟಿ, ಕೆ.ಮಾಯಿಲಪ್ಪ ಸಾಲ್ಯಾನ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ಪುಂಜಾಲಕಟ್ಟೆ, ಕೆ.ನಾರಾಯಣ ಹೆಗ್ಡೆ, ಬಸ್ತಿ ಮಾಧವ ಶೆಣೈ, ರಾಜೇಶ ಮತ್ತಿತರರು ಇದ್ದರು.