ವಿದ್ಯಾಕ್ಷೇತ್ರದ ಅಮೂಲ್ಯ ಆಸ್ತಿ
ವಿದ್ಯಾರತ್ನ ಕೆ.ರಮೇಶ ನಾಯಕ್ ರಾಯಿ
ಸರಕಾರಿ ಶಾಲೆಯೆಂದರೆ ಅದಿಲ್ಲ, ಇದಿಲ್ಲ, ವ್ಯವಸ್ಥೆಯೇ ಸರಿ ಇಲ್ಲ ಎನ್ನುವವರೇ ಹೆಚ್ಚು. ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುವ ಪೋಷಕರು ಒಂದೆಡೆಯಾದರೆ ಅಯ್ಯೋ ಕೆಲಸವೇ ಮಾಡಲು ಆಗುತ್ತಿಲ್ಲ. ಯಾವಾಗೊಮ್ಮೆ ಇದರಿಂದ ಮುಕ್ತಿ ಪಡೆದೆನೋ ಎಂದು ಕೊರಗುವ ಶಿಕ್ಷಕರು ಮತ್ತೊಂದೆಡೆ. ಇವೆಲ್ಲದರ ಮಧ್ಯೆ ಮಕ್ಕಳ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ಸರಕಾರದಿಂದ ಮುಚ್ಚುಗಡೆಯ ಭೀತಿ ಎದುರಿಸುತ್ತಿರುವ ಅದೆಷ್ಟೋ ಸರಕಾರಿ ಶಾಲೆಗಳು. ಸರಕಾರಿ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಸಮಸ್ಯೆಗಳೇನೂ ಇಲ್ಲವೆಂದಲ್ಲ. ಆದರೆ ಕೆಲವೊಂದು ಸಮಸ್ಯೆಗಳನ್ನು ನಿಭಾಯಿಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಪ್ರಾಮಾಣಿಕವಾಗಿ ದುಡಿದರೆ-ಪೋಷಕರು ಮತ್ತು ಶಿಕ್ಷಕರು ಸಂಘಟಿತರಾಗಿ ಶ್ರಮಿಸಿದರೆ ಸರಕಾರಿ ಶಾಲೆಗಳು ಜನಾಕರ್ಷಣೆ ಪಡೆಯಬಹುದು, ಇನ್ನಷ್ಟು ವರ್ಷ ಉಳಿಯಬಹುದು, ಬೆಳೆಯಬಹುದು ಎಂಬುದಕ್ಕೆ ಕೆಲವೊಂದು ಶಾಲೆಗಳ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ.

ಇಂತಹ ಶಾಲೆಗಳ ಪೈಕಿ ಮೇರು ಪಂಕ್ತಿಯಲ್ಲಿ ಮೆರೆಯುತ್ತಿದೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹಲವಾರು ಹೊಸಪ್ರಯೋಗಗಳ ಅನುಷ್ಠಾನ, ನೂರಾರು ಆಕರ್ಷಕ ಕಾರ್ಯಕ್ರಮಗಳು ಹಾಗೂ ಶಾಲೆ-ಮಕ್ಕಳ ಸಮಗ್ರ ಅಭಿವೃದ್ಧಿಯೊಂದಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಈ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ರಮೇಶ ನಾಯಕ್ ರಾಯಿ ಅವರಿಗೆ ಇತ್ತೀಚೆಗೆ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸರಕಾರಿ ಶಾಲೆಯೊಂದಕ್ಕೆ ಸಂದ ಅಮೂಲ್ಯ ಗೌರವವೇ ಸರಿ. ಇಂತಹ ಪ್ರಶಸ್ತಿ ಪುರಸ್ಕೃತರ ಸಾಧನೆಯನ್ನು ಗುರುತಿಸಿ, ಜಿಲ್ಲೆಯ ಶಿಕ್ಷಣಾಭಿಮಾನಿಗಳು ಸಂಘಟಿತರಾಗಿ, ರಮೇಶ ನಾಯಕ್ ಅಭಿನಂದನಾ ಸಮಿತಿ ರಚಿಸಿ ನಾಯಕರಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸಿದ್ದಲ್ಲದೆ ನಾಯಕರ ಬದುಕು-ಸಾಧನೆಗಳನ್ನು ಒಳಗೊಂಡ ವಿದ್ಯಾರತ್ನ ಅಭಿನಂದನಾ ಗ್ರಂಥ ಸಮರ್ಪಿಸಿ, ವಿದ್ಯಾರತ್ನ ಬಿರುದು ಪ್ರದಾನ ಮಾಡಿ ಗೌರವಿಸಿರುವುದು ಸರಕಾರಿ ಶಾಲೆಯೊಂದರ ಶಿಕ್ಷಕನಿಗೆ ದೊರೆತ ಅಪೂರ್ವ ಮನ್ನಣೆ ಎಂದರೂ ತಪ್ಪಲ್ಲ.
ಹಾಗೆಂದು ತನ್ನ ದುಡಿತದ 34 ವರ್ಷಗಳ ಅವಧಿಯಲ್ಲಿ ನಾಯಕರಿಗೆ ಸಮಸ್ಯೆಗಳು ಎದುರಾಗಿಲ್ಲ ಎಂದಲ್ಲ. ನೂರಾರು ಸಮಸ್ಯೆಗಳು, ಸಾಂಸಾರಿಕ ಒತ್ತಡಗಳು, ಅದೆಷ್ಟೋ ಅಡೆತಡೆಗಳು ನಾಯಕರ ಸಾಧನೆಯ ಹೆಜ್ಜೆಯ ಹಾದಿಯಲ್ಲಿ ಅಡ್ಡಿಯಾಗಿದೆ. ಆದರೆ ಅದೆಲ್ಲವನ್ನೂ ನಾಯಕರು ತನ್ನ ಸಮರ್ಥ ನಾಯಕತ್ವ, ಅಸಾಮಾನ್ಯ ಸಂಘಟನಾ ಚತುರತೆ ಹಾಗೂ ಅಪೂರ್ವ ಕಾರ್ಯದಕ್ಷತೆಯಿಂದ ಎದುರಿಸಿದ್ದಾರೆ, ಸಾಧಿಸಬೇಕಾದನ್ನು ಸಾಧಿಸಿದ್ದಾರೆ, ಹೀಗೆ ನಾಯಕರು ಶಿಕ್ಷಕ ವಲಯಕ್ಕೆ ಮಾದರಿಯಾಗಿದೆ. ನಾಯಕರ ಕೆದ್ದಳಿಕೆ ಶಾಲೆ ನಾಡಿನ ಸರಕಾರಿ ಶಾಲೆಗಳಿಗೆ ದಾರಿದೀಪವಾಗಿದೆ.
ಆರಂಭದ ಹೆಜ್ಜೆಗಳು:
ಬಂಟ್ವಾಳ ತಾಲೂಕಿನ ಸಂಗಬೆಟ್ಟು ಸಿದ್ದಕಟ್ಟೆ ಸಮೀಪದ ಕರ್ಪೆ ಗ್ರಾಮದ ಕಿನ್ನಾಜೆ ನಿವಾಸಿಗಳಾದ ದಿ.ಅನಂತ ಛತ್ರ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರರಾದ ರಮೇಶ ನಾಯಕ್ ಅವರು ತನ್ನ ವಿದ್ಯಾಬ್ಯಾಸದ ಬಳಿಕ 1980ರಲ್ಲಿ ಪುತ್ತೂರು ತಾಲೂಕಿನ ತೀರಾ ಗ್ರಾಮೀಣ ಪ್ರದೇಶದ ಕೆಮ್ರಾಯಿ ಶಾಲೆಯಲ್ಲಿ ಶಿಕ್ಷಕ ಸೇವೆಯನ್ನು ಆರಂಭಿಸಿದವರು. ಐದು ವರ್ಷಗಳ ಕಾಲ ತನ್ನದಲ್ಲದ ಊರಿನಲ್ಲಿ ಶಿಕ್ಷಣ ಪ್ರೇಮಿಯೊಬ್ಬರ ಮನೆಯಲ್ಲಿದ್ದು ನಿತ್ಯ 12 ಮೈಲುಗಳ ಕಾಡಿನ ಕಾಲನಡಿಗೆಯಲ್ಲಿ ಸಂಚರಿಸಿ ವೃತ್ತಿಯನ್ನು ಪೂರೈಸಿದವರು. ನಂತರ 1985ರಿಂದ 2006ರತನಕ ತನ್ನದೇ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಯಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಶಾಲೆಯನ್ನು ರಾಜ್ಯಕ್ಕೆ ಮಾದರಿಯಾಗಿಸಿ ರೂಪಿಸಿದ ನಾಯಕರು 2006ರಿಂದ 2009 ರ ತನಕ ಚೆನ್ನೈತ್ತೋಡಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿಯೂ ಯಶಸ್ವಿ ಕರ್ತವ್ಯ ನಿರ್ವಹಿಸಿದರು. ನಂತರ ರಮೇಶ ನಾಯಕ್ ರಾಯಿ ಅವರ ಕ್ರಿಯಾಶೀಲತೆ, ಸೇವಾ ದಕ್ಷತೆ, ಸೃಜನಶೀಲ ಚಿಂತನೆ, ಅಪೂರ್ವ ಪ್ರಯೋಗಶೀಲತೆಗಳಿಗೆ ವೇದಿಕೆಯಾಗಿದ್ದು ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲೆ. 2009ರಲ್ಲಿ ಇಲ್ಲಿ ಸೇವೆಯನ್ನು ಆರಂಭಿಸಿದ ನಾಯಕರು ಇಲ್ಲಿನ ಶಿಕ್ಷಕವೃಂದ, ಪೋಷಕವೃಂದ, ವಿದ್ಯಾರ್ಥಿ ವೃಂದ, ಶಾಲಾಭಿವೃದ್ಧಿ ಮತ್ತು ಮೆಲುಸ್ತುವಾರಿ ಸಮಿತಿ, ಸ್ಥಳೀಯಾಡಳಿತ, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದೊಂದಿಗೆ ಶಾಲೆಯಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಟಾನಗೊಳಿಸಿ ಶಾಲೆಯನ್ನು ರಾಷ್ಟ್ರಕ್ಕೆ ಮಾದರಿಯಾಗಿ ರೂಪಿಸುವಲ್ಲಿ ಯಶಸ್ವಿಯಾದವರು.
ಹೇಗಿದೆ ಕೆದ್ದಳಿಕೆ ಶಾಲೆ:
ತಾಲೂಕಿನ ಕಾವಳಮೂಡೂರು ಗ್ರಾಮ ಪಂಚಾಯತು ವ್ಯಾಪ್ತಿಯ ತೀರಾ ಗ್ರಾಮೀಣ ಪ್ರದೇಶವಾದ `ಕೆದ್ದಳಿಕೆ’ ಎಂಬ ಹಚ್ಚ ಹಸಿರ ಸುಂದರ ಪರಿಸರದಲ್ಲಿ, ಸಕಲ ಮೂಲಭೂತ ಸೌಕರ್ಯಗಳುಳ್ಳ ಸುಸಜ್ಜಿತವಾದ ಸುಂದರ ಕಟ್ಟಡದಲ್ಲಿ, ವೈವಿಧ್ಯಮಯ ಚಿತ್ರ ಚಿತ್ತಾರಗಳುಳ್ಳ ಆಕರ್ಷಣೀಯ ವಾತಾವರಣದಲ್ಲಿ ಕಂಗೊಳಿಸುವ ಈ ಶಾಲೆಯ ವಿದ್ಯಾಭಿಮಾನಿಗಳ ಪಾಲಿಗೆ ನಿಜಕ್ಕೂ ದೇವಾಲಯ. ಅಧಿಕಾರಿಗಳಿಗೆ, ಅಧ್ಯಯನ ಶೀಲರಿಗೆ ಆಸಕ್ತಿಯ ಶೈಕ್ಷಣಿಕ ಕೇಂದ್ರ. ಮಕ್ಕಳಿಗಂತೂ ನೆಚ್ಚಿನ, ಅಚ್ಚುಮೆಚ್ಚಿನ ಕಲಿಕಾ ತಾಣ. ಎಲ್ಲಾ ಬಗೆಯಲ್ಲೂ ಮಾದರಿ ಶಾಲೆಯೆಂದು ಗುರುತಿಸಿಕೊಂಡಿರುವ ಈ ಶಾಲೆ ಪಾಠ, ಆಟ, ಪಠ್ಯೇತರ ಚಟುವಟಿಕೆಗಳೊಂದಿಗೆ ಮಕ್ಕಳ ವ್ಯಕ್ತಿತ್ವದ ಸಮಗ್ರ ಪ್ರಗತಿಗೆ ಒತ್ತು ನೀಡಿದ್ದು ಮಕ್ಕಳು `ಎಲ್ಲದರಲ್ಲೂ ಮುಂದು’ ಎಂಬುದು ಇಲ್ಲಿನ ಮಕ್ಕಳ ಹಿರಿಮೆ. ಯಾವುದೇ ಕಾರ್ಯಕ್ರಮಗಳನ್ನು ಕಾಟಾಚಾರಕ್ಕೆ ನಡೆಸದೇ ಎಲ್ಲದರಲ್ಲೂ ಹೊಸತನವನ್ನು ತಂದು ಶಾಲೆಯ ಕಾರ್ಯಕ್ರಮವನ್ನು ಜನ ಮೆಚ್ಚುವಂತೆ ಮಾಡಿದ ಇಲ್ಲಿನ ಕಾರ್ಯವೈಖರಿ ನಿಜಕ್ಕೂ ವಿಶೇಷ. ಸಮುದಾಯ ಶಾಲೆಯಿಂದ ದೂರವಿದೆ ಎನ್ನುವುದಕ್ಕೆ ಈ ಶಾಲೆ ಅಪವಾದವಾಗಿದ್ದು ಈ ಶಾಲೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿಯೂ ನೂರು ಶೇಖಡಾ ಪೋಷಕರ ಸಕ್ರೀಯವಾಗಿ ಭಾಗವಹಿಸುವಿಕೆ, ಶಾಲಾಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ., ಪೋಷಕ ವಲಯ ಹಾಗೂ ಶಿಕ್ಷಕ ವಲಯದ ಪರಿಣಾಮಕಾರಿ ಪಾಲ್ಗೊಳ್ಳುವಿಕೆಯಿಂದ ಈ ಶಾಲೆ ಸರಕಾರಿ ಶಾಲೆ ಎನಿಸದೇ ನಿಜಾರ್ಥದಲ್ಲಿ ಸಮುದಾಯದ ಶಾಲೆ. ಊರಜನರ ಬಾಯಿಯಿಂದ ಬರುವ ನಮ್ಮ ಶಾಲೆ, ನಮ್ಮೂರ ಶಾಲೆ ಎಂಬ ಮಾತುಗಳೇ ಇದಕ್ಕೆ ಸಾಕ್ಷಿ. ಹೀಗಾಗುವಲ್ಲಿ ಪೋಷಕರೊಂದಿಗೆ ನಾಯಕರ ಆತ್ಮೀಯತೆ, ವಿಶ್ವಾಸ, ಪ್ರಾಮಾಣಿಕತೆಯದ್ದೇ ಪ್ರಧಾನ ಪಾತ್ರ. ಎಲ್ಲರೂ ಶಾಲೆಗಾಗಿ ಮುಕ್ತವಾಗಿ ಸೇವೆ ಸಲ್ಲಿಸುವ ವಾತಾವರಣ ನಿರ್ಮಾಣವಾಗಿರುವುದು ನಾಯಕರ ಸಂಘಟನಾ ಚತುರತೆಯ ದ್ಯೋತಕ.
ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವಿಕೆ ಹಾಗೂ ನಿರಂತರ ಹೊಸ ಪ್ರೆಯೋಗಗಳ ಅನುಷ್ಠಾನದಿಂದ ಯಾವುದೇ ವ್ಯವಸ್ಥೆಯಲ್ಲೂ ಬದಲಾವಣೆ ತರಬಹುದು, ಯಶಸ್ವಿಯಾಗಬಹುದು ಎಂಬುದಕ್ಕೆ ಸೂಕ್ತ ನಿದರ್ಶನವಾಗಿದೆ ಈ ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲೆ. ಶಿಕ್ಷಕ ವಲಯದಲ್ಲಿ ಇಚ್ಛಾಶಕ್ತಿ ಇದ್ದರೆ, ಅದರೊಂದಿಗೆ ಸಮುದಾಯದ ಸಕ್ರೀಯ ಭಾಗವಹಿಸುವಿಕೆಯೂ ಜತೆಯಾದರೆ ಸರಕಾರಿ ಶಾಲೆಯು ಖಾಸಗಿ ಶಾಲೆಗಳಿಗಿಂತಲೂ ಮಿಗಿಲಾಗಿ ಹಾಗೂ ಮಕ್ಕಳ ಆಕರ್ಷಣೆಯ ಕೇಂದ್ರವಾಗಿ ಬೆಳೆಯಬಲ್ಲುದು ಎಂಬುದಕ್ಕೆ ಈ ಶಾಲೆ ಉತ್ತಮ ಮಾದರಿಯಾಗಿದೆ.
ಕೆದ್ದಳಿಕೆ ಎಂಬ ಅಪೂರ್ವ ಪ್ರಯೋಗ ತಾಣ:
ಈ ಶಾಲೆಯಲ್ಲಿ ನಡೆದ ಹೊಸ ಪ್ರಯೋಗಗಳು ಒಂದೆರೆಡಲ್ಲ. ಎಲ್ಲವೂ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದವುಗಳು, ನಂತರ ಇತರ ಶಾಲೆಗಳೂ ಅನುಷ್ಠಾನಿಸುವಂತಾದ ವಿನೂತನ ಪರಿಕಲ್ಪನೆಗಳು. ಮಕ್ಕಳಿಗಾಗಿ ನಿರಂತರ ಕ್ರಿಯಾಶೀಲ ಚಟುವಟಿಕೆಗಳು ನಡೆದರೆ ಪಾಲಕರಿಗಾಗಿಯೂ ಶೈಕ್ಷಣಿಕ ಕಾರ್ಯಾಗಾರಗಳು, ಮಾಹಿತಿ ಶಿಬಿರಗಳು ಇಲ್ಲಿ ನಿತ್ಯ ನಿರಂತರ. ಅರ್ಥಪೂರ್ಣವಾಗಿ ಮಕ್ಕಳ ಸಾಹಿತ್ಯ ಸಮ್ಮೇಳನದ ಆಯೋಜನೆ, ಗಮನ ಸೆಳೆದ ನಲಿಕಲಿ ಉತ್ಸವ, ಮಕ್ಕಳ ಕಲಾ ತಂಡದ ಮೂಲಕ ಜಿಲ್ಲೆಯ ವಿವಿದೆಡೆ ಜಾಗೃತಿ ಕಾರ್ಯಕ್ರಮಗಳ ಪ್ರದರ್ಶನ, ಪ್ರತಿವರ್ಷ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಕಲಿಕೆ ನೀಡುವ ಮಗು ನಿ ನಗು ವಿಶೇಷ ಕಲಿಕಾ ಲೋಕ, ಮಕ್ಕಳ ಆಕರ್ಷಣೆಗಾಗಿ ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳ ದಿಬ್ಬಣ/ ಶಾಲಾ ಆಯನ/ ಶಾಲೆಗಾಗಿ ಪೋಷಕರ ಹೊರೆಕಾಣಿಕೆ/ ಮಗುವಿಗೊಂದು ಗಿಡ-ಮನೆಗೊಂದು ಮರ ಎಂಬ ಹೆಸರಿನಲ್ಲಿ ಆಚರಣೆ, ವಾರ್ಷಿ ಕೋತ್ಸವವನ್ನು ಪರಿಸರ ಸಡಗರ ಎಂಬ ಹೆಸರಿನಲ್ಲಿ ಇಡೀ ದಿನ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ನಡೆಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿರುವುದು ಮೊದಲಾದವುಗಳು ಕೆದ್ದಳಿಕೆ ಶಾಲೆಯ ಹೊಸ ಪ್ರಯೋಗಗಳಾಗಿ ಗಮನ ಸೆಳೆದವುಗಳು.
ಶಾಲೆಯಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಒಂದೊಂದು ಹಣ್ಣಿನ ಗಿಡ ನೆಟ್ಟಿರುವಿಕೆ, ರಾಜ್ಯಕ್ಕೆ ಮಾದರಿಯಾದ ಇಲ್ಲಿನ ಹಣ್ಣಿನ ತೋಟ, ಶಾಲಾಂಗಣದಲ್ಲಿ ಆಕರ್ಷನೀಯ ಹೂದೋಟ, ಬಿಸಿಯೂಟಕ್ಕೆ ಸಾಕಾಗಿ ಮೂರಾಟಕ್ಕೂ ಉಳಿಯುವಷ್ಟು ಕೊಡುವ ತರಕಾರಿ ತೋಟ, ತೆಂಗಿನ ತೋಟ, ಸೆಗಣಿ ಹಾಕಿ ಗುಡಿಸಿದ ಶಾಲಾ ಅಂಗಳ, ಇಂಗುಗುಂಡಿಗಳ ರಚನೆ, ಜಲಮರುಪೂರಣ ವ್ಯವಸ್ಥೆ, ಶಾಲೆಯ ಅಂಗಳದ ಒಂದು ಬದಿಯಲ್ಲಿ ರಚನೆಗೊಂಡ ಮುಕ್ತ ಕಲಿಕೆಯ ಸಿರಿದೊಂಪ ಚಪ್ಪರ, ಪ್ಲಾಸ್ಟಿಕ್ ಮುಕ್ತ ಶುಚಿತ್ವದ ವಾತಾವರಣ, ಅಂಗಳದಲ್ಲಿ ರೂಪುಗೊಂಡ ಹಚ್ಚಹಸಿರಿನ ವರ್ಣ ವೈವಿಧ್ಯದ ಟೋಪೊಗ್ರಾಪಿ, ಅಮೂಲ್ಯ ಗೋಡೆ ಬರಹಗಳು…ಇವೆಲ್ಲವೂ ಇಲ್ಲಿ ನೆಲ-ಜಲ-ಮನುಕುಲದ ಉಳಿವಿಗಾಗಿ ನಡೆಸಿದ ಅಮೋಘ ಸಾಹಸಗಳಾಗಿ ಶೈಕ್ಷಣಿಕ ವಲಯದಲ್ಲಿ ಗುರುತಿಸಲ್ಪಟ್ಟಿದೆ.
ಪ್ರಶಸ್ತಿಗಳ ಸರಮಾಲೆ:
2001-02ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2002-03ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2004-05ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2011-12ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2013-14ರಲ್ಲಿ ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2015ರಲ್ಲಿ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾದ ರಮೇಶ ನಾಯಕ್ ಅವರು ರಾಜ್ಯ, ಜಿಲ್ಲಾ ಮಟ್ಟದ ಹಲವಾರು ಸಂಘಟನೆಗಳಿಂದ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿರುವುದು ಅವರ ಸಾಧನಾಶೀಲತೆಯ ದ್ಯೋತಕ. ನಾಯಕ್ ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೂ ಅಲ್ಲಿನ ವಿಶೇಷ ಕಾರ್ಯ ಸಾಧನೆಗಾಗಿ ಜಿಲ್ಲಾ ಮಟ್ಟದ ಸ್ವಚ್ಚತಾ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಎಸ್ಡಿಎಂಸಿ ಪ್ರಶಸ್ತಿ, ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ, ಜಿಲ್ಲಾ ಮಟ್ಟದ ಮೆಟ್ರಿಕ್ ಮೇಳ ಪ್ರಶಸ್ತಿ, ಜಿಲ್ಲಾ ಮಟ್ಟದ ಟಿ.ಎಲ್.ಎಂ ಪ್ರಶಸ್ತಿ, ಪ್ರತಿಭಾ ಕಾರಂಜಿ-ಕ್ರೀಡಾಕೂಟದ ಪ್ರಶಸ್ತಿಗಳ ಸಹಿತ ಇಲ್ಲಿನ ಮಕ್ಕಳಿಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ದೊರೆತಿರುವುದು ನಾಯಕರ ಎಡಬಿಡದ ಪ್ರಯತ್ನದ ಸಂಕೇತವಾಗಿದೆ.
ನಾಯಕ್ ಅವರ ಸಾಧನೆಯೂ ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಸೀಮಿತವಾದದ್ದಲ್ಲ. ಕೃಷಿಕರಾಗಿ, ಜನೋಪಯೋಗಿ ಚಟುವಟಿಕೆಗಳ ಸಂಘಟಕರಾಗಿ, ತರಬೇತುದಾರರಾಗಿ, ವಿವಿಧ ಕಾರ್ಯಕ್ರಮಗಳ ಪೋಷಕರಾಗಿ ಸಕ್ರೀಯರಾಗಿರುವ ಇವರು ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ ಪ್ರಧಾನ ಕಾರ್ಯದರ್ಶಿ ಯಾಗಿ, ರಾಯಿ ಕೊಡಮಣಿತ್ತಾಯ ಧೂಮವತಿ ಸೇವಾ ಸಮಿತಿಯ ಅಧ್ಯಕ್ಷ ಸಹಿತ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
ವಿದ್ಯಾರತ್ನರಾದವರು:
ಶೈಕ್ಷಣಿಕ ಕ್ಷೇತ್ರದಲ್ಲಿ ಸಮಸ್ಯೆಗಳು ಸ್ವಾಬಾವಿಕ. ಅದನ್ನು ಸಮಸ್ಯೆ ಎಂದು ಕೈಕಟ್ಟಿ ಕುಳಿತರೆ ನಾವು ಏನನ್ನೂ ಸಾಧಿಸಲಾಗುವುದಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ಇತರರ ಬೆಂಬಲವನ್ನೂ ಪಡೆಯಬೇಕು. ಮಕ್ಕಳು, ಶಾಲೆ ಹಾಗೂ ಊರಿನ ಹಿತದೃಷ್ಟಿಯಿಂದ ನಾವು ಪ್ರಾಮಾಣಿಕವಾಗಿ ದುಡಿದರೆ ಸರಕಾರಿ ಶಾಲೆಗಳು ಮಾದರಿಯಾಗಿ ಬೆಳೆಯುತ್ತದೆ ಎನ್ನುವ ನಾಯಕರು ಬಂದದ್ದನ್ನು ಸವಾಲಾಗಿ ಸ್ವೀಕರಿಸುತ್ತಾ, ನಿರಂತರ ಹರಸಾಹಸ ಮಾಡುತ್ತಾ, ತನ್ನದೆಲ್ಲವನ್ನೂ ಅದಕ್ಕಾಗಿ ತ್ಯಾಗ ಮಾಡುತ್ತಾ, ಅದರಲ್ಲೇ ಬದುಕಿನ ಸಾರ್ಥಕತೆಯನ್ನು ಕಂಡವರು. ಎಲ್ಲರೊಳಗೊಂದಾಗುವ ಸ್ನೇಹಶೀಲತೆ, ಕಷ್ಟಕ್ಕೆ ಕರಗುವ ಸಹೃದಯತೆ, ಎಲ್ಲರನ್ನೂ ಪ್ರೀತಿಸುವ ಮಾನವೀಯತೆ…ಇವೆಲ್ಲವೂ ನಾಯಕರ ವ್ಯಕ್ತಿತ್ವದ ಭೂಷಣಗಳು, ನಿಜವಾಗಿಯೂ ಶಿಕ್ಷಕನಲ್ಲಿ ಇರಬೇಕಾದ ಆದರ್ಶಗಳು. ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ದಕ್ಷತೆ, ಬದುಕಿನಲ್ಲಿ ಬದ್ಧತೆ, ನಡೆ-ನುಡಿಯಲ್ಲಿ ಗಂಭೀರತೆ..ಇವೆಲ್ಲವೂ ನಾಯಕರ ಗೆಲುವಿನ ಹಾದಿಗೆ ಮೆಟ್ಟಿಲುಗಳು. ಒಬ್ಬ ಶಿಕ್ಷಕನಾಗಿ ಏನೆಲ್ಲಾ ಸಾಧನೆ ಮಾಡಬಹುದು-ಶಿಕ್ಷಣ ಕ್ಷೇತ್ರದಿಂದ ತಾನು ಪಡೆದುದಕ್ಕಿಂತ ಹೆಚ್ಚಾಗಿ ತಾನೇನು ಕೊಡಬಹುದು ಎಂಬುದಕ್ಕೆ ಮಾದರಿಯಾಗುವ ರಮೇಶ ನಾಯಕ್ ರಾಯಿ ಅವರು ತಾನು ದುಡಿದ ಎಲ್ಲಾ ಶಾಲೆಗಳಲ್ಲಿಯೂ ಹತ್ತು ಹಲವು ವಿನೂತನ ಪ್ರಯೋಗಗಳ ಅನುಷ್ಠಾನದೊಂದಿಗೆ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ, ಶಾಲೆಯನ್ನು ಮಾದರಿಯಾಗಿ ರೂಪಿಸಿ ಪೋಷಕರು, ಶಿಕ್ಷಕ ವೃಂದ, ಮಕ್ಕಳು ಹಾಗೂ ಜನ ಸಮುದಾಯದ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾದವರು. ಬಹುಮುಖಿ ಸಾಧಕರಾದ ರಮೇಶ ನಾಯಕರ ಬದುಕು-ಸಾಧನೆಯ ಹಾದಿಯನ್ನೊಮ್ಮೆ ಅವಲೋಕಿಸಿದರೆ ಅಶ್ಚರ್ಯವೇ ಆಗುತ್ತದೆ ನಮಗೆಲ್ಲಾ. ನಾಯಕ್ ಅವರು ತನ್ನ ಪತ್ನಿಯಾದ ಶ್ರೀಮತಿ ಭಾರತಿಯವರನ್ನು ಕೆಲವರ್ಷದ ಹಿಂದೆಯೇ ಕಳೆದುಕೊಂಡವರು. ಆದರೆ ತನ್ನ ವೈಯಕ್ತಿಕ ಬದುಕಿನ ನೋವನ್ನು ಶಾಲೆಯಲ್ಲಿ ಮಕ್ಕಳೊಂದಿಗೆ, ಸಮಾಜದಲ್ಲಿ ಕ್ರಿಯಾಶೀಲ ಚಟುವಟಿಕೆಗಳೊಂದಿಗೆ ಕಳೆಯುತ್ತಾ ತನ್ನ ಇಡೀ ಬದುಕನ್ನು ಶಾಲೆಗಾಗಿ ಮುಡಿಪಾಗಿಡುತ್ತಾ ಮುನ್ನಡೆದವರು. ಪ್ರಸ್ತುತ ಮಗ ಕಾರ್ತಿಕ್ ನೊಂದಿಗೆ ರಾಯಿಯಲ್ಲಿ ವಾಸವಾಗಿದ್ದು 2009ರಿಂದ ಇದುವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆದ್ದಳಿಕೆಯಲ್ಲಿ ಸೇವೆ ಸಲ್ಲಿಸುತ್ತಾ ಶಾಲೆಯನ್ನು ಒಂದು ಹೊಸತನಗಳ ಪ್ರಯೋಗ ಕೇಂದ್ರವಾಗಿ, ಮಾದರಿಯಾಗಿ ರೂಪಿಸಿ ರಾಷ್ಟ್ರದ ಗಮನ ಸೆಳೆಯುತ್ತಿರುವುದು ನಿಜಕ್ಕೂ ನಾವೆಲ್ಲಾ ಹೆಮ್ಮೆ ಪಡಬೇಕಾದ ವಿಚಾರ.
ರಮೇಶ್ ನಾಯಕ್ ಅವರ ಮುಂದಿದ್ದದ್ದು ಸಮಸ್ಯೆಯಲ್ಲ, ಸ್ಪಷ್ಟವಾದ ಗುರಿ, ಗುರಿ ಸಾಧಿಸಲು ಸ್ಪಷ್ಟವಾದ ಯೋಜನೆ, ಯೋಜನೆ ಜಾರಿಯಾಗಲು ಸಮರ್ಪಕವಾದ ಕಾರ್ಯವಿಧಾನ. ಅದಕ್ಕಾಗಿ ತಾನೂ ಕೆಲಸ ಮಾಡಿದರು, ಇತರರನ್ನೂ ಮಾಡಿಸಿದರು. ಎಲ್ಲೊ ಬದಲಾವಣೆಯಾಗಬೇಕೆಂದು ಇವರು ಬಯಸಲಿಲ್ಲ. ತಾನೇ ಬದಲಾದರು. ಈ ನೆಲೆಯಲ್ಲಿಯೇ ಇತರರಿಗೆ ಮಾದರಿಯಾದವರು, ವಿದ್ಯಾರತ್ನರಾದವರು.
ಗೋಪಾಲ ಅಂಚನ್.






