ಬಂಟ್ವಾಳ: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವ ನಿಟ್ಟನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಂತ ಹಂತವಾಗಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ನಗರಾಭಿವೃದ್ದಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಬಂಟ್ವಾಳ ಪುರಸಭೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 52. 79 ಕೋಟಿ ರುಪಾಯಿ ವೆಚ್ಚದ ಬಂಟ್ವಾಳ ಪುರಸಭೆ ವ್ಯಾಪ್ತಿಯ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಗೆ ಬಂಟ್ವಾಳದ ಜಕ್ರಿಬೆಟ್ಟು ನದಿ ಕಿನಾರೆಯಲ್ಲಿ ಶಿಲಾನ್ಯಾಸ ನೆರವೇರಿಸಿ ಬಳಿಕ ಜಕ್ರಿಬೆಟ್ಟು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಯುಐಡಿಎಸ್ಎಂಟಿ ಯೋಜನೆಯಡಿ ಈ ಹಿಂದಿನ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ 7200 ಕೋಟಿ ರುಪಾಯಿಯ ಪ್ರಸ್ತಾಪವನ್ನು ಸಲ್ಲಿಸಿತ್ತು. ಅದರಲ್ಲಿ 1000 ಕೋಟಿ ಅನುದಾನ ಮಂಜೂರಾಗಿದ್ದು ಬಂಟ್ವಾಳದ ಯೋಜನೆಯೂ ಅದರಲ್ಲಿ ಸೇರಿದೆ ಎಂದು ತಿಳಿಸಿದರು.

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 12.27 ಕೋಟಿ ರುಪಾಯಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡಿದ್ದು ಹೆಚ್ಚುವರಿಯಾಗಿ 61.45 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಲಿದೆ. ಬೆಳ್ತಂಗಡಿಯಲ್ಲಿ 13 ಕೋಟಿ ರುಪಾಯಿ ವೆಚ್ಚದ ಯೋಜನೆಗೆ ಮಂಜೂರಾತಿ ದೊರೆತಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ತುಂಬೆನೂತನ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 75 ಕೋಟಿ ಅನುದಾನವನ್ನು ಮಂಡಳಿಯ ಮೂಲಕ ಒದಗಿಸಲು ಯೋಜನೆ ರೂಪಿಸಲಾಗಿದ್ದು ಮಳೆ ಪ್ರಾರಂಭವಾಗುವ ಮೊದಲು ಕಾಮಾಗಾರಿ ಪೂರ್ತಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿ ಸಲಾಗಿದೆ. ಉಳ್ಳಾಲ ಪುರಸಭೆ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಗೆ 65 ಕೋಟಿ, ಸುಳ್ಯದಲ್ಲಿ ಪಯಸ್ವಿನಿ ನದಿಯನ್ನು ಬಳಸಿಕೊಂಡು ಕುಡಿಯುವ ನೀರಿನ ಯೋಜನೆಗೆ 65.60 ಕೋಟಿ, ಎಡಿಬಿ ಸ್ಕೀಮಿನ ಮೂಲಕ ಮಂಗಳೂರಿನಲ್ಲೊ ಒಳಚರಂಡಿಗೆ ಎರಡನೇ ಹಂತದಲ್ಲಿ 280 ಕೋಟಿ, ಪುತ್ತೂರಿಗೆ 90 ಕೋಟಿ ರುಪಾಯಿ ಅನುದಾನ ಮಂಜೂರಾಗಿರುವುದಾಗಿ ಅಂಕಿ ಅಂಶ ನೀಡಿದ ಸಚಿವ ವಿನಯ್ ಕುಮಾರ್ ಸೊರಕೆ ಜಿಲ್ಲೆಯಲ್ಲಿ ಕುಡಿಯುವ ನೀರು, ಒಳಚರಂಡಿ ಹಾಗೂ ಕಸ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.
ನಗರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಇಲಾಖೆಗಳಲಿ ಕೊರತೆಯಿರುವ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. 94ಸಿಸಿ ಯೋಜನೆಯಡಿ ನಗರ ಭಾಗದಲ್ಲಿ ಸರ್ಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿದವರಿಗೆ ಹಕ್ಕು ಪತ್ರ ನೀಡಲು ಶೀಘ್ರ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿಸಿದರು.
ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿ ಸರ್ಕಾರ ಇರುವುದು ಸಾಮಾನ್ಯರ ಏಳಿಗೆಗಗಾಗಿ. ಆ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ನಗರ ಸೌಂದರ್ಯಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಟ್ರೀ ಪಾರ್ಕ್ , ಕಾರಂಜಿ ನಿರ್ಮಾಣ, ಮೊದಲಾದ ಅಭಿವೃದ್ದಿ ಕಾರ್ಯಗಳು ಇಲ್ಲಿ ಅನುಷ್ಠಾನಗೊಳ್ಳಲಿದೆ. ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕಿದ್ದ ಅಡೆತಡೆಗಳು ನಿವಾರಣೆಗೊಂಡಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಕ್ಯಾಬಿನೆಟ್ನ ಮುಂದಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಹೊಸ 12 ಗ್ರಾಮಂಚಾಯತ್ಗಳು ಉಗಮವಾಗಿ ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಗ್ರಾಮಪಂಚಾಯತ್ ದೊರೆತಿರುವ ತಾಲೂಕು ಬಂಟ್ವಾಳವಾಗಿದ್ದು ಅಭಿವೃದ್ದಿಗೆ ಇದು ಪೂರಕವಾಗಲಿದೆ ಎಂದರು.
ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್.ಖಾದರ್, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಕ.ನ.ನೀಸ. ಮತ್ತು ಒಳಚರಂಡಿ ಮಂಡಳಿ ಮುಖ್ಯ ಅಭಿಯಂತರ ಎಂ.ರಂಗಧಾಮಯ್ಯ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ತಹಸೀಲ್ದಾರ್ ಪುರಂದರ ಹೆಗ್ಡೆ, ಪಿಡಬ್ಲ್ಯುಡಿ ಮುಖ್ಯ ಅಂಭಿಯಂತರ ಧರ್ಮರಾಜ್, ತಾಂತಿಕ ಶಿಕ್ಷಣ ಇಲಾಖೆಯ ತಾಂತ್ರಿಕ ಅಧಿಕಾರಿ ಸಿ.ಡಿ.ರಾಮಲಿಂಗಯ್ಯ ಹಾಗೂ ಪುರಸಭಾ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಭರತ್ ಸ್ವಾಗತಿಸಿ, ಸಿವಿಲ್ ವಿಭಾಗ ಮುಖ್ಯಸ್ಥ ಡಾ. ಚಿನ್ನಗಿರಿಗೌಡ ಹಾಗೂ ಕ.ನ.ನೀ.ಸ ಮತ್ತು ಒ.ಚ. ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ನಟರಾಜ್ ಪ್ರಸ್ತಾವಿಸಿದರು. ಎಂಜಿನಿಯರ್ ಶುಭಲಕ್ಷ್ಮೀ ವಂದಿಸಿದರು. ಕಾರ್ಯಕ್ರಮಕ್ಕೆ ಪುರಸಭೆಯ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು.


