ಬಂಟ್ವಾಳ; ಇಲ್ಲಿನ ಕಸ್ಬಾ ಗ್ರಾಮದ ಗಿರಿಗುಡ್ಡೆ ಎಂಬಲ್ಲಿ ನಿರ್ಮಾಣಗೊಂಡಿರುವ ಪಾಲಿಟೆಕ್ನಿಕ್ ನೂತನ ಕಟ್ಟಡ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವತಿಯಿಂದ ನಿರ್ಮಾಣಗೊಂಡ ನೂತನ ವಿದ್ಯಾರ್ಥಿನಿ ನಿಲಯ ಭಾನುವಾರ ಲೋಕಾರ್ಪಣೆಗೊಂಡಿತು. ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟನೆ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಕಟ್ಟಡ ಅತ್ತಯತ್ತಮ ರೀತಿಯಲ್ಲಿ ನಿಮರ್ಾಣಗೊಂಡಿದ್ದು,ಅಗತ್ಯ ವಿರುವ ಕಂಪೌಂಡ್, ವಿದ್ಯುದ್ದೀಕರಣ ಹಾಗೂ ಸಂಪರ್ಕ ರಸ್ತೆಯ ಡಾಮರೀಕರಣ ಕಾರ್ಯವನ್ನು ಮುಂದಿನ ಶೈಕ್ಷಣಿಕ ವರ್ಷದ ಒಳಗೆ ಪೂರೈಸುವುದಾಗಿ ತಿಳಿಸಿದರು. ಇಲ್ಲಿನ ವಿದ್ಯಾರ್ಥಿಗಳು ಬುದ್ದಿವಂತರು, ಶಿಸ್ತುಳ್ಳವರು ಎಂದು ಶ್ಲಾಘಿಸಿದ ಅವರು, ಬಂಟ್ವಾಳ ಕ್ಷೇತ್ರದ ಅಭಿವೃದ್ದಿಗೆ ಹಾಗೂ ಅರಣ್ಯ ಮತ್ತು ಪರಿಸರ ಸಚಿವರಾಗಿ ನಾಡಿನ ಏಳ್ಗೆಗೆ ಶ್ರಮಿಸುತ್ತಿರುವ ರೈ ಅವರು ಕಾರ್ಯ ಅಭಿನಂದನೀಯ ಎಂದರು. ಜನಪರ ಕಾಳಜಿಯುಳ್ಳ ರಮಾನಾಥ ರೈ ಈ ಭಾಗದಲ್ಲಿ ಹಲವುಬಾರಿ ಶಾಸಕರಾಗಿ ರಾಜ್ಯದ ಮಂತ್ರಿಯಾಗಿರುವುದು ಕ್ಷೇತ್ರದ ಮತ್ತು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದ ಅವರು, ಇಂತವರು ಎಲ್ಲಾ ಕಡೆ ಆಯ್ಕೆಯಾದಾಗ ಅಭಿವೃದ್ದಿ ಸಾಧ್ಯವಾಗುತ್ತದೆ, ಬಡವರ ಕಷ್ಟ ನಿವಾರಣೆಯಾಗುತ್ತದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ಪುರಸಭೆ ಅಧ್ಯಕ್ಷೆ ವಸಂತಿ ಚಂದಪ್ಪ, ಉಪಾಧ್ಯಕ್ಷೆ ಯಾಸ್ಮೀನ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ಎಲ್.ರೊಡ್ರಿಗಸ್ , ತಾಂತ್ರಿಕ ಶಿಕ್ಷಣ ಇಲಾಖೆಯ ಸಿ.ಡಿ ರಾಮಲಿಂಗಯ್ಯ, ಪ್ರಾಂಶುಪಾಲ ಕೆ.ಸುನಿಲ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.


ನಮ್ಮ ಕಾಲದಲ್ಲಿ ಏನೂ ಇರಲಿಲ್ಲ,ನಿಮ್ಮ ಅದೃಷ್ಟ ಎಲ್ಲಾ ಇದೆ.. ಹೀಗೆಂದು ವಿದ್ಯಾರ್ಥಿಗಳನ್ನು ಮಾತಿಗೆಳೆದವರು ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ. ಬಂಟ್ವಾಳ ಪಾಲಿಟೆಕ್ನಿಕ್ ನೂತನ ಕಟ್ಟಡ ಹಾಗೂ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ವತಿಯಿಂದ ನಿರ್ಮಾಣಗೊಂಡ ನೂತನ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿದ ಬಳಿಕ ವಿದ್ಯಾರ್ಥಿಗಳ ಬಳಿ ಹೋಗಿ ಮಾತನಾಡಿದ ಸಚಿವರು,ಸರ್ಕಾರ ಶಿಕ್ಷಣಭ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲತೆಗಳನ್ನು ಒದಗಿಸಿದೆ. ನಮ್ಮ ಕಾಲದಲ್ಲಿ ಇಂತಹ ವ್ಯವಸ್ಥೆಗಳು ಇರಲಿಲ್ಲ, ಆದರೆ ನೀವು ಅದೃಷ್ಟಶಾಲಿಗಳು ಎಂದರು. ಬೆಳೆಯುತ್ತಿರುವ ವಿಜ್ಞಾನದಿಂದಾಗಿ ವಿಶ್ವ ಚಿಕ್ಕದಾಗುತ್ತಿದೆ. ನೀವು ವ್ಯವಹರಿಸಬೇಕಾದ ವ್ಯಾಪ್ತಿ ರಾಜ್ಯ-ದೇಶವಲ್ಲ, ವಿಶ್ವಮಾರುಕಟ್ಟೆಯಲ್ಲಿ ನೀವು ವ್ಯವಹರಿಸಬೇಕು ಎಂದ ಅವರು, ಬುದ್ದಿಮತ್ತೆ ಮತ್ತು ವ್ಯಕ್ತಿತ್ವ ಭವಿಷ್ಯವನ್ನು ರೂಪಿಸುತ್ತದೆ, ಈ ನಿಟ್ಟಿನಲ್ಲಿ ಶ್ರದ್ದೆಯಿಂದ ಕಲಿಕೆಯಲ್ಲಿ ತೊಡಗುವಂತೆ ಮನವಿಮಾಡಿದರು.
ಬಿಲ್ಡರ್ ಆಗ್ತೀರಾ, ನಂಗೊಂದು ಫ್ಲ್ಯಾಟ್ ಬುಕ್ ಮಾಡಿ..
ವಿದ್ಯಾರ್ಥಿಗಳ ಬಳಿಗೇ ತೆರಳಿದ ಸಚಿವ ದೇಶಪಾಂಡೆಯವರು, ಕಲಿತ ಮೇಲೆ ಏನಾಗ್ತೀರಾ,, ಬಿಲ್ಡರ್ ಆಗ್ತೀರಾ..? ಬಿಲ್ಡಿಂಗ್ ಕಟ್ಟಿಸ್ತೀರಾ..? ಹಾಗಿದ್ರೆ ನಂಗೊಂದು ಫ್ಲ್ಯಾಟ್, ರೈ ಗಳಿಗೊಂದು ಫ್ಲ್ಯಾಟ್ ಬುಕ್ ಮಾಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
