ಕಿನ್ನಿಗೋಳಿ: ಇತ್ತೀಚಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಕರ್ಮಕಾಂಡದ ಪುಟಗಳು ಒಂದೊಂದಾಗಿಯೇ ತೆರೆಯುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಕಳೆದೆರಡು ದಿನಗಳಿಂದ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಡಪಾಯಿ ರೋಗಿಗಳು ಹಾಗೂ ಸಂಬಂಧಿಕರನ್ನು ಕಂಗೆಡಿಸುವಂತೆ ಮಾಡಿದೆ.
2
ಹೊರನೋಟಕ್ಕೆ ಸರ್ವ ಸುಸಜ್ಜಿತವೆಂಬಂತೆ ಕಂಗೊಳಿಸುವ ಆಸ್ಪತ್ರೆ ಕಳಪೆ ಸೇವೆಯಿಂದಾಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ದೊಡ್ಡ ಆಸ್ಪತ್ರೆ ಎಂದು ಹೊರಜಿಲ್ಲೆಗಳಿಂದ ಇಲ್ಲಿಗೆ ಬರುವ ರೋಗಿಗಳು ಸಕಾಲಕ್ಕೆ ಸೂಕ್ತ ವ್ಯವಸ್ಥೆ ಸಿಗದೆ ಕಂಗಾಲಾಗಿ ಮಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿವೆ.
ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ನಡೆಯುತ್ತಿರುವ ತಪಾಸಣೆ(ಇನ್ಸ್‍ಪೆಕ್ಷನ್)ಯಿಂದ ಆಡಳಿತ ಮಂಡಳಿ ಗಲಿಬಿಲಿಗೊಂಡಿದ್ದು, ಖಾಲಿ ಇರುವ ಆಸ್ಪತ್ರೆಯ ಬೆಡ್ಡುಗಳನ್ನು ಭರ್ತಿ ಮಾಡಲು ಬೇರೆ ಬೇರೆ ಆಸ್ಪತ್ರೆಗಳ ರೋಗಿಗಳನ್ನು ತರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತಿದೆ. ಅದಕ್ಕಾಗಿಯೇ ತನ್ನದೇ ಸಂಸ್ಥೆಯ ಬಸ್ಸುಗಳ ಮೂಲಕ ಆರೋಗ್ಯವಂತ ಜನರನ್ನು ತರಿಸಿಕೊಳ್ಳುತ್ತಿದೆ. ಇಷ್ಟು ಸಾಲದೆಂಬಂತೆ ಆರೋಗ್ಯವಂತ ರೋಗಿಗಳನ್ನು ಐಸಿಯು ಹಾಗೂ ಎಂಐಸಿಯುಗಳಿಗೆ ಸ್ಥಳಾಂತರಿಸಿ ಬೆಡ್ ಭರ್ತಿ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಈ ಬಗ್ಗೆ ರೋಗಿಗಳ ಮನೆಮಂದಿ ವೈದ್ಯರು ಅಥವಾ ನರ್ಸ್‍ಗಳಲ್ಲಿ ಕೇಳಿದರೆ, `ನೀವೇನೂ ಹೆಚ್ಚಿಗೆ ಹಣ ಕೊಡುವುದು ಬೇಡ. ಸಂಜೆ ತನಕ ಅವರು ಅಲ್ಲಿರುತ್ತಾರೆ, ನಂತರ ಮತ್ತೆ ಇಲ್ಲಿಗೆ ಶಿಫ್ಟ್ ಮಾಡುತ್ತೇವೆ’ ಎನ್ನುವ ಉತ್ತರ ಅವರದ್ದು.
ತಕರಾರು ಎತ್ತಿದ ಜನರು:
ಸದ್ರಿ ಆಸ್ಪತ್ರೆಗೆ ಒಂದು ಪ್ರದೇಶದಿಂದ ಆರೋಗ್ಯವಂತ ವ್ಯಕ್ತಿಗಳನ್ನು ತಂದು ವಾರ್ಡ್‍ವೊಂದನ್ನು ಭರ್ತಿ ಮಾಡಿದ್ದು, ಈ ಬಗ್ಗೆ ಅಲ್ಲಿಗೆ ಬಂದಿರುವ ವ್ಯಕ್ತಿಗಳು ತಮಗೆ ಹಣ ನೀಡಬೇಕು ಇಲ್ಲವೆ ತಾವು ಆಸ್ಪತ್ರೆಯಿಂದ ಹೊರ ನಡೆಯುವುದಾಗಿ ತಗಾದೆ ಎತ್ತಿದ ಸನ್ನಿವೇಶವೂ ಎದುರಾಯಿತು.
ಸಮರ್ಪಕ ವ್ಯವಸ್ಥೆಗಳಿಲ್ಲ:
ಮುಕ್ಕ, ಸುರತ್ಕಲ್, ಮೂಲ್ಕಿ ಸುತ್ತಮುತ್ತಲಿನ ಹತ್ತೂರ ಜನರು ಸುಸಜ್ಜಿತ ಆಸ್ಪತ್ರೆಗಾಗಿ ಹಾತೊರೆಯುತ್ತಿದ್ದ ಕಾಲವೊಂದಿತ್ತು. ಅವರ ಆಶೋತ್ತರಗಳಿಗೆ ಸ್ಪಂದಿಸುವ ಆಸ್ಪತ್ರೆಯೊಂದು ನಿರ್ಮಾಣವಾಗಿದೆ ಎಂದುಕೊಂಡರೆ, ಆಸ್ಪತ್ರೆಯಲ್ಲಿ ಸಮರ್ಪಕವಾದ ವ್ಯವಸ್ಥೆಗಳಿಲ್ಲ ಎನ್ನುವುದು ಬಹಳಷ್ಟು ರೋಗಿಗಳಿಗೆ ಅಸಮಾಧಾನವನ್ನುಂಟು ಮಾಡಿದೆ. ಇದರಿಂದಾಗಿ ರೋಗಿಗಳು ಇಲ್ಲಿಂದ ಒಮ್ಮೆ ಹೊರಬಂದರೆ ಸಾಕು, ಬೇಡಿಯಾದರೂ ತಿನ್ನುತ್ತೇವೆ ಎಂದುಕೊಳ್ಳುವಂತಾಗಿದೆ.

ಸಿಬ್ಬಂದಿಯ ಮೊಂಡುತನ:
ರೋಗಿಗಳ ಬಗೆಗಿನ ಕಾಳಜಿಯಿಂದ ಸಂಬಂಧಿಕರು ಮಾಹಿತಿ ಕೇಳಿದರೆ ಆಸ್ಪತ್ರೆಯ ಸಿಬ್ಬಂದಿ ಮೊಂಡುತನವನ್ನು ಪ್ರದರ್ಶಿಸುವುದು ಇಲ್ಲಿ ಸಾಮಾನ್ಯ. ಕನಿಷ್ಟ ಪಕ್ಷ ರೋಗಿಯೊಬ್ಬರು ಯಾವ ವಾರ್ಡ್ ಎನ್ನುವುದನ್ನು ಕೂಡಾ ಸರಿಯಾದ ರೀತಿಯಲ್ಲಿ ತಿಳಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.
ಕರ್ತವ್ಯಕ್ಕೆ ತಡವಾಗಿ ಹಾಜರಾಗುವ ವೈದ್ಯರು
ಎಲ್ಲಾ ರೀತಿಯ ವ್ಯವಸ್ಥೆಯಿಂದ ವಂಚಿತವಾಗಿರುವ ಮುಕ್ಕದ ಆಸ್ಪತ್ರೆಯ ಆಡಳಿತ ಮಂಡಳಿಯೇ ಸರಿ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಇದಕ್ಕೆ ಪೂರಕವೆಂಬಂತೆ ರೋಗಿಗಳ ತಪಾಸಣೆ ನಡೆಸಬೇಕಾದ ಕೆಲವು ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಸರಿಯಾದ ಸಮಯದಲ್ಲಿ ಹಾಜರಿರುವುದಿಲ್ಲ. ಇದೇ ಕಾರಣಕ್ಕಾಗಿ ಈ ಹಿಂದೆ ಕೂಡಾ ಇಲ್ಲಿ ಸಾರ್ವಜನಿಕರು ತಕರಾರು ಎತ್ತಿ ಗಲಾಟೆ ನಡೆಸಿರುವುದನ್ನು ನೆನಪಿಸಬಹುದು.

By suddi9

Leave a Reply

Your email address will not be published. Required fields are marked *