ಬಂಟ್ವಾಳ: ಜಿಲ್ಲಾ ಕೇಂದ್ರ ಮಂಗಳೂರಿನಿಂದ ಅಥವಾ ಇನ್ನಾವುದೇ ಪ್ರದೇಶಗಳಿಂದ ರಾಜ್ಯದ ಪ್ರಮುಖ ಜಿಲ್ಲೆಗಳಿಗೆ ಅಥವಾ ಇದೇ ಜಿಲ್ಲೆಯ ಯಾವುದೇ ತಾಲೂಕುಗಳಿಗೆ ಹೋಗಬೇಕಿದ್ದರೆ ಬಂಟ್ವಾಳ ತಾಲೂಕಿನ ಕೇಂದ್ರ ಸ್ಥಾನ ಬಿ.ಸಿ.ರೋಡಿನಿಂದಲೇ ಹೋಗಬೇಕು. ರಾಷ್ಟ್ರೀಯ ಹೆದ್ದಾರಿ 275 ಬಿ.ಸಿ.ರೋಡಿನ ಮೂಲಕವೇ ಹಾದು ಹೋಗಿರುವುದರಿಂದ ಸುಲಭದ ದಾರಿಗಾಗಿ ಬಿ.ಸಿ.ರೋಡನ್ನು ಆಶ್ರಯಿಸಲೇ ಬೇಕು. ಒಂದು ವೇಳೆ ನೀವು ಇಂತಹ ದೂರದ ಊರುಗಳಿಗೆ ಪ್ರಯಾಣಿಸುವುದಿದ್ದರೆ ಅಥವಾ ಅನಿವಾರ್ಯವಾಗಿ ಬಿ.ಸಿ.ರೋಡಿನ ಮೂಲಕವೇ ಹಾದು ಹೋಗುವವರಾದರೆ ನಿಗದಿತ ಸ್ಥಳ ತಲುಪಲು ಕನಿಷ್ಠ ಒಂದು ಗಂಟೆ ಮೊದಲೇ ಪ್ರಯಾಣ ಆರಂಭಿಸ ಬೇಕು. ಯಾಕೆಂದರೆ ಬಿ.ಸಿ.ರೋಡಿನ ಅವೈಜ್ಞಾನಿಕ ಮಾದರಿಯ ರಸ್ತೆಯಿಂದ ಉಂಟಾಗುವ ಟ್ರಾಫಿಕ್ ಜಾಂಗೆ ನಿಮ್ಮ ಅಮೂಲ್ಯವಾದ ಒಂದು ಗಂಟೆಯನ್ನು ಮೀಸಲಿಡಬೇಕು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿವಾರಿಸಲು ತೀರಾ ಅಗತ್ಯ ಎನ್ನುವಂತೆ ಇಲ್ಲಿ ಚತುಷ್ಪಥ ಮೇಲ್ಸೆತುವೆಯನ್ನು ನಿರ್ಮಿಸಲಾಯಿತು. ಅವೈಜ್ಞಾನಿಕತೆಯಿಂದಾಗಿ ಇದ್ದೂ ಇಲ್ಲದಂತಿರುವ ಮೇಲ್ಸೆತುವೆಯಿಂದಾಗಿ ಪ್ರಯೋಜನವಾಗುತ್ತಿಲ್ಲ ಎಂದು ಮನವರಿಕೆಯಾದಗ ಬಂಟ್ವಾಳಕ್ಕೆ ಶಾಶ್ವತ ಟ್ರಾಫಿಕ್ ಪೊಲೀಸ್ ಠಾಣೆ ಬೇಕು ಎನ್ನುವ ಬೇಡಿಕೆ ವ್ಯಕ್ತವಾಗಿ ಟ್ರಾಫಿಕ್ ಠಾಣೆಯೂ ಮಂಜೂರಾಯಿತು. ಆದರೆ ಅದೂ ಪ್ರಯೋಜನಕ್ಕೆ ಬರುತ್ತಿಲ್ಲ, ಟ್ರಾಫಿಕ್ ನಿಯಂತ್ರಣಕ್ಕೆ ಸಿಗುತ್ತಿಲ್ಲ.
ಹಾಗಾದರೆ ಈ ಸಮಸ್ಯೆಗೆ ಮೂಲ ಕಾರಣ ಏನು? ಎನ್ನುವುದೇ ಎಲ್ಲರನ್ನು ಕಾಡುವ ಪ್ರಶ್ನೆ.
ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಂ ಉಂಟಾಗುವ ಮೂಲ ಸ್ಥಳ ಇಲ್ಲಿನ ಮುಖ್ಯ ವೃತ್ತ. ಎರಡು ರಾಷ್ಟ್ರೀಯ ಹೆದ್ದಾರಿಗಳಾದ ಮಂಗಳೂರು- ಬೆಂಗಳೂರು ಹಾಗೂ ಬಂಟ್ವಾಳ- ವಿಲ್ಲುಪುರಂ ರಾ. ಹೆದ್ದಾರಿಯನ್ನು ಸಂಗಮಿಸುವ ಈ ಸ್ಥಳ ಏಳು ಕಡೆಗೆ ವಾಹನಗಳನ್ನು ಚಲಿಸಲು ಅವಕಾಶ ಮಾಡಿಕೊಡುವ ಪ್ರಮುಖ ಜಂಕ್ಷನ್ . 1 ಬಿ.ಸಿ.ರೋಡಿನಿಂದ -ಬಂಟ್ವಾಳ ಪೇಟೆ ರಸ್ತೆಗೆ, 2. ಬಿ.ಸಿ.ರೋಡಿನಿಂದ ಧರ್ಮಸ್ಥಳಕ್ಕೆ ಹಾದು ಹೋಗುವ 234 ರಾಷ್ಟ್ರೀಯ ಹೆದ್ದಾರಿಗೆ, 3. ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275ಕ್ಕೆ 4. ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಪೇಟೆ ರಸ್ತೆಗೆ 5 ಬಂಟ್ವಾಳದಿಂದ ಪಾಣೆಮಂಗಳೂರು ಪೇಟೆ ರಸ್ತೆಗೆ 6. ಬಂಟ್ವಾಳದಿಂದ ಬಿ.ಸಿರೋಡಿಗೆ, 7. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಹೋಗುವ ರಸ್ತೆಗಳಿಗೆ ಈ ವೃತ್ತವೇ ಪ್ರಮುಖ. ಏಳು ಭಾಗಗಳಿಂದ ಏಕಕಾಲದಲ್ಲಿ ನುಗ್ಗಿ ಬರುವ ವಾಹನಗಳನ್ನು ನಿಭಾಯಿಸುವಷ್ಟು ಸ್ಥಳವಕಾಶ, ಅಗಲ ರಸ್ತೆ ಹಾಗೂ ಸೂಕ್ತ ವ್ಯವಸ್ಥೆ ಇಲ್ಲಿ ಇಲ್ಲದೇ ಇರುವುದರಿಂದ ಪ್ರತಿನಿತ್ಯದ ಟ್ರಾಫಿಕ್ ಜಾಂಗೆ ಮುನ್ನುಡಿ ಬರೆಯವುದೇ ಈ ಜಂಕ್ಷನ್. ಇದೇ ಕಾರಣಕ್ಕಾಗಿ ಬಿ.ಸಿರೋಡು ಪರಿಸರದಲ್ಲಿ ಎಲ್ಲೆ ಟ್ರಾಫಿಕ್ ಜಾಂ ಉಂಟಾದರೂ ಪೊಲೀಸರು ಮೊದಲು ಓಡಿ ಬರುವುದು ಸರ್ಕಲ್ ಬಳಿಗೆ. ಜನರ ಆಡು ಭಾಷೆಯಲ್ಲಿ ಈ ಜಂಕ್ಷನ್ ‘ಬಿ.ಸಿ.ರೋಡು ಸರ್ಕಲ್’ ಎಂದು ಕರೆಯಲ್ಪಡುತ್ತಿದೆ. ಅಸಲಿಯತ್ತಿಗೆ ಇಲ್ಲಿ ಸರ್ಕಲ್ಲೇ (ವೃತ್ತ) ಇಲ್ಲ.
ಇದರೊಂದಿಗೆ ರೈಲು ಮೇಲ್ಸೆತುವೆ ನಿರ್ಮಾಣ ನೆಪದಲ್ಲಿ ಮೊದಲೇ ಇಕ್ಕಟ್ಟಾಗಿರುವ ಚತುಷ್ಫತ ಮೇಲ್ಸೆತುವೆ ಹೆದ್ದಾರಿಗೆ ಸಂಧಿಸುವ ಸ್ಥಳದಲ್ಲಿ ದಿಬ್ಬದಂತೆ ಮಣ್ಣು ತುಂಬಿರುವುದು ಕೂಡ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಮಳೆಗಾಲವಾಗುತ್ತಿದಂತೆಯೇ ರಸ್ತೆಗಳಲ್ಲಿ ಕಾಣ ಸಿಗುವ ಹೊಂಡಗಳು ಕೂಡ ಟ್ರಾಫಿಕ್ ಜಾಂಗೆ ಕೊಡುಗೆ ನೀಡುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಸ್ಥಳೀಯಾಡಳಿತ ಅಥವಾ ಪೊಲೀಸ್ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮ ಪಾಡಿಗೆ ಕಾಮಗಾಉ ನಡೆಸಿ ಕೈ ತೊಳೆದುಕೊಳ್ಳುವುದು ಕೂಡ ಇಲ್ಲಿ ಅವೈಜ್ಞಾನಿಕ ಮಾದರಿಯ ಕಾಮಗಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗಲು ಕಾರಣ.
ರೈಲು ಸೇತುವೆಯಾದರೆ ಸಮಸ್ಯೆ ಪರಿಹಾರ ವಾಗಬಹುದೇ?
ಸದ್ಯಕ್ಕೆ ವೇಗ ಪಡೆದುಕೊಂಡಿರುವ ರೈಲು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ಟ್ರಾಫಿಕ್ ಸಮಸ್ಯೆ ಪರಿಹಾರವಾಗಬಹುದೇ ಎನ್ನುವುದು ಜನರಲ್ಲಿ ನಿರೀಕ್ಷೆ ಮೂಡಿಸಿರುವ ಪ್ರಶ್ನೆ. ರೈಲು ಸೇತುವೆ ಪೂರ್ಣಗೊಂಡಲ್ಲಿ ಶೇ. 60 ಮಾತ್ರ ಸಮಸ್ಯೆ ಪರಿಹಾರ ಕಾಣಬಹುದು. ಆದರೆ ಸರ್ಕಲ್ ನಿರ್ಮಿಸದೇ ಇದ್ದರೆ ಅದೂ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುವುದು ದಿನದ 12 ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಕರ್ತವ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರು ನೀಡುವ ಉತ್ತರ. ರೈಲು ಸೇತುವೆಯ ಮೂಲಕ ನಿರ್ಮಾಣಗೊಳ್ಳುತ್ತಿರುವ ರಸ್ತೆ ಮೇಲ್ನೋಟಕ್ಕೆ ಬಂಟ್ವಾಳ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವಂತಿದೆ. ಇದು ನೇರವಾಗಿ ಮುಂದುವರಿದರೂ ಬೈಪಾಸ್ ಹಾಗೂ ಬಂಟ್ವಾಳ ಪೇಟೆಯಿಂದ ಬರುವ ರಸ್ತೆಯನ್ನು ಹಾದು ಹೋಗಬೇಕಾಗಿದೆ. ಮುಖ್ಯ ವೃತ್ತ ದಾಟಿದ ಬಳಿಕ ದ್ವಿಪಥ ರಸ್ತೆ ಮಾತ್ರ ಇರುವುದರಿಂದ ಅಲ್ಲೂ ವಾಹನ ಸಂಚಾರಕ್ಕೆ ಅಡ್ಡಿಯಾಗ ಬಹುದು. ಆ ಕಾರಣಕ್ಕಾಗಿಯೇ ಇಲ್ಲಿ ವೃತ್ತ ನಿರ್ಮಿಸುವ ಅಗತ್ಯತೆ ಇದೆ ಎನ್ನುವುದು ಪೊಲೀಸರ ವಾದ. ವೃತ್ತ ನಿರ್ಮಿಸಲು ಬೇಕಾದಷ್ಟು ಸ್ಥಳವಕಾಶ ಅಲ್ಲಿ ಇಲ್ಲದೆ ಇರುವುದು ಕೂಡ ಇನ್ನೊಂದು ಸವಾಲು. ದೊಡ್ಡ ನಗರಗಳಲ್ಲಿರುವಂತೆ ಸಿಗ್ನಲ್ ವ್ಯವಸ್ಥೆ ಮಾಡಬೇಕಾದರೂ ರಸ್ತೆ ವ್ಯವಸ್ಥೆಯನ್ನು ಸುಸ್ಥಿತಿಗೆ ತರದೇ ಅದೂ ಸಾಧ್ಯವಿಲ್ಲ.







