ಬಂಟ್ವಾಳ : ರಾಜಕೀಯ ಫುಡಾರಿಗಳ ಪ್ರತಿಷ್ಠೆಯ ಬ್ಯಾನರ್ ರಾಜಕೀಯಕ್ಕೆ ಅಧಿಕಾರಿಗಳು ಕಟ್ಟುಬಿದ್ದ ಪರಿಣಾಮ ಕಾಮಗಾರಿ ಮುಕ್ತಾಯಗೊಳ್ಳುವ ಮುನ್ನವೇ ತರಾತುರಿಯಲ್ಲಿ ಉದ್ಘಾಟನೆಗೊಂಡ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ ರಸ್ತೆ ಇದೀಗ ಕೆಸರಿನ ರಾಡಿಯಾಗಿ ಮಾರ್ಪಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಸೇತುವೆ ಸಂಚಾರ ಮುಕ್ತಗೊಂಡಿದೆ ಎಂದು ಈ ಮಾರ್ಗವಾಗಿ ಹಾದು ಬರುವ ವಾಹನ ಸವಾರರು ಕೆಸರಿನಲ್ಲಿ ಒದ್ದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.


ಸಚಿವ ರಮಾನಾಥ ರೈ ಅವರ ವಿಶೇಷ ಕಾಳಜಿ ಮೇರೆಗೆ ಒಂದೂಕಾಲು ಕೋಟಿಯಷ್ಟು ಬೃಹತ್ ಮೊತ್ತದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ ಇನ್ನೂ ಸಂಚಾರಕ್ಕೆ ಯೋಗ್ಯವಾಗುವ ಮುನ್ನವೇ ಮಂಗಳವಾರ ಇಲ್ಲಿನ ಕೆಲ ರಾಜಕೀಯ ವ್ಯಕ್ತಿಗಳ ದ್ವೇಷದ ರಾಜಕಾರಣದ ಪರಿಣಾಮ ಕೈಕಾಲು ಕಟ್ಟಿದ ಪರಿಸ್ಥಿತಿ ಎದುರಿಸಿದ ಲೋಕೋಪಯೋಗಿ ಇಂಜಿನಿಯರ್ ಉಮೇಶ್ ಭಟ್ ಅವರು ಸಾಂಕೇತಿಕ ಉದ್ಘಾಟನೆ ಎಂಬ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದ್ದರು. ಆದರೆ ಉದ್ಘಾಟನೆಗೆ ಬಂದ ಸಚಿವ ರೈ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಹಾಗೂ ಮಾಧ್ಯಮದವರಿಗೆ ಮಾಹಿತಿ ನೀಡದ ಸ್ಥಳೀಯ ಸ್ವಪಕ್ಷೀಯ ಫುಡಾರಿಗಳ ವಿರುದ್ದ ತೀವ್ರ ಗರಂ ಆಗಿದ್ದರು.
ಇದೀಗ ಇದೊಂದು ಸ್ಥಳೀಯ ಪುರಸಭಾ ಮಹಿಳಾ ಸದಸ್ಯೆಯ ವಿರುದ್ದ ಪರಿಸರದ ಒಂದಿಬ್ಬರು ಕೈ ಫುಡಾರಿಗಳು ರೂಪಿಸಿದ ರಾಜಕೀಯ ಸಂಚು ಎಂಬ ಆರೋಪ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಪುರಸಬಾ ಸದಸ್ಯೆ ಚಂಚಲಾಕ್ಷಿ ಕೂಡಾ ನಿಜಕ್ಕೂ ಕಾಮಗಾರಿ ಪೂರ್ಣಗೊಳ್ಳದೆ ಅಗತ್ಯವಿಲ್ಲದೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಸೇತುವೆ ಸಂಚಾರ ಮುಕ್ತಿಗೊಳಿಸಿರುವುದು ಮುಂದಿನ ದಿನಗಳಲ್ಲಿ ಸೇತುವೆಯ ಬಾಳಿಕೆಯ ಬಗ್ಗೆಯೂ ಆತಂಕಗೊಳ್ಳುವಂತೆ ಮಾಡಿದೆ ಎಂದು ಹೇಳಿಕೆ ನೀಡಿದ್ದು, ಸ್ಥಳೀಯರ ಆರೋಪಕ್ಕೆ ಪುಷ್ಠಿ ನೀಡಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿರುವ ಪಿಡಬ್ಲ್ಯುಡಿ ಇಂಜಿನಿಯರ್ ಉಮೇಶ್ ಭಟ್ ಅವರು ಕೆಲ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಇದೀಗ ತಾತ್ಕಾಲಿಕ ಉದ್ಘಾಟನೆ ಮಾತ್ರ ನೆರವೇರಿಸಲಾಗಿದೆ. ಇದೇನೂ ಅಧಿಕೃತ ಸರಕಾರಿ ಕಾರ್ಯಕ್ರಮವಾಗಿರಲಿಲ್ಲ. ಇದೀಗ ತಾತ್ಕಾಲಿಕ ರಸ್ತೆಯ ಬದಲಿಗೆ ಸೇತುವೆಯ ಮೇಲಿಂದಲೇ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಸೇತುವೆಯ ಇಬ್ಬದಿ ರಸ್ತೆಗಳು ಹದಗೆಟ್ಟು ಕೆಸರುಮಯವಾಗಿದ್ದು, ಅದನ್ನು ಮತ್ತೆ ಬಂದ್ ಮಾಡುವುದೋ ಅಥವಾ ತೇಪೆ ಕಾಮಗಾರಿ ಆರಂಭಿಸುವುದೋ ಎಂಬುದನ್ನು ಇನ್ನಷ್ಟೆ ತೀರ್ಮಾನಿಸಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ಪ್ರತಿಷ್ಠೆಯಿಂದಾಗಿ ಇಲ್ಲಿನ ಸೇತುವೆ ಮೂಲಕ ಹಾದು ಬರುವ ವಾಹನ ಸವಾರರು ಮಾತ್ರ ಕೆಸರ ಮೇಲೆ ಸರ್ಕಸ್ ನಡೆಸಬೇಕಾದ ಸನ್ನಿವೇಶ ಎದುರಾಗಿರುವುದು ಕಂಡು ಬಂದಿದೆ.