ಬಂಟ್ವಾಳ : ರಾಜಕೀಯ ಪುಡಾರಿಗಳ ಒಣಪ್ರತಿಷ್ಠೆಯ ರಾಜಕೀಯದಿಂದಾಗಿ ಕಾಮಗಾರಿ ಮುಕ್ತಾಯಗೊಳ್ಳುವ ಮುನ್ನವೇ ತರಾತುರಿಯಲ್ಲಿ ಉದ್ಘಾಟನೆಗೊಂಡ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ ರಸ್ತೆ ಇದೀಗ ಕೆಸರಿನ ರಾಡಿಯಾಗಿ ಮಾರ್ಪಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಸೇತುವೆ ಸಂಚಾರ ಮುಕ್ತಗೊಂಡಿದೆ ಎಂದು ಈ ಮಾರ್ಗವಾಗಿ ಹಾದು ಬರುವ ವಾಹನ ಸವಾರರು ಕೆಸರಿನಲ್ಲಿ ಒದ್ದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಸಚಿವ ರಮಾನಾಥ ರೈ ಅವರ ವಿಶೇಷ ಕಾಳಜಿ ಮೇರೆಗೆ ಒಂದೂಕಾಲು ಕೋಟಿಯಷ್ಟು ಬೃಹತ್ ಮೊತ್ತದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ ಇನ್ನೂ ಸಂಚಾರಕ್ಕೆ ಯೋಗ್ಯವಾಗುವ ಮುನ್ನವೇ ಮಂಗಳವಾರ ಇಲ್ಲಿನ ಕೆಲ ರಾಜಕೀಯ ವ್ಯಕ್ತಿಗಳ ದ್ವೇಷದ ರಾಜಕಾರಣದ ಪರಿಣಾಮ ಕೈಕಾಲು ಕಟ್ಟಿದ ಪರಿಸ್ಥಿತಿ ಎದುರಿಸಿದ ಲೋಕೋಪಯೋಗಿ ಇಂಜಿನಿಯರ್ ಉಮೇಶ್ ಭಟ್ ಅವರು ಸಾಂಕೇತಿಕ ಉದ್ಘಾಟನೆ ಎಂಬ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದ್ದರು. ಆದರೆ ಉದ್ಘಾಟನೆಗೆ ಬಂದ ಸಚಿವ ರೈ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಹಾಗೂ ಮಾಧ್ಯಮದವರಿಗೆ ಮಾಹಿತಿ ನೀಡದ ಸ್ಥಳೀಯ ಸ್ವಪಕ್ಷೀಯ ಫುಡಾರಿಗಳ ವಿರುದ್ದ ತೀವ್ರ ಗರಂ ಆಗಿದ್ದರು.
ಇದೀಗ ಇದೊಂದು ಸ್ಥಳೀಯ ಪುರಸಭಾ ಮಹಿಳಾ ಸದಸ್ಯೆಯ ವಿರುದ್ದ ಪರಿಸರದ ಒಂದಿಬ್ಬರು ಕೈ ಫುಡಾರಿಗಳು ರೂಪಿಸಿದ ರಾಜಕೀಯ ಸಂಚು ಎಂಬ ಆರೋಪ ಸ್ಥಳೀಯವಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಪುರಸಬಾ ಸದಸ್ಯೆ ಚಂಚಲಾಕ್ಷಿ ಕೂಡಾ ನಿಜಕ್ಕೂ ಕಾಮಗಾರಿ ಪೂರ್ಣಗೊಳ್ಳದೆ ಅಗತ್ಯವಿಲ್ಲದೆ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು ಸೇತುವೆ ಸಂಚಾರ ಮುಕ್ತಿಗೊಳಿಸಿರುವುದು ಮುಂದಿನ ದಿನಗಳಲ್ಲಿ ಸೇತುವೆಯ ಬಾಳಿಕೆಯ ಬಗ್ಗೆಯೂ ಆತಂಕಗೊಳ್ಳುವಂತೆ ಮಾಡಿದೆ ಎಂದು ಹೇಳಿಕೆ ನೀಡಿದ್ದು, ಸ್ಥಳೀಯರ ಆರೋಪಕ್ಕೆ ಪುಷ್ಠಿ ನೀಡಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿರುವ ಪಿಡಬ್ಲ್ಯುಡಿ ಇಂಜಿನಿಯರ್ ಉಮೇಶ್ ಭಟ್ ಅವರು ಕೆಲ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಇದೀಗ ತಾತ್ಕಾಲಿಕ ಉದ್ಘಾಟನೆ ಮಾತ್ರ ನೆರವೇರಿಸಲಾಗಿದೆ. ಇದೇನೂ ಅಧಿಕೃತ ಸರಕಾರಿ ಕಾರ್ಯಕ್ರಮವಾಗಿರಲಿಲ್ಲ. ಇದೀಗ ತಾತ್ಕಾಲಿಕ ರಸ್ತೆಯ ಬದಲಿಗೆ ಸೇತುವೆಯ ಮೇಲಿಂದಲೇ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಸೇತುವೆಯ ಇಬ್ಬದಿ ರಸ್ತೆಗಳು ಹದಗೆಟ್ಟು ಕೆಸರುಮಯವಾಗಿದ್ದು, ಅದನ್ನು ಮತ್ತೆ ಬಂದ್ ಮಾಡುವುದೋ ಅಥವಾ ತೇಪೆ ಕಾಮಗಾರಿ ಆರಂಭಿಸುವುದೋ ಎಂಬುದನ್ನು ಇನ್ನಷ್ಟೆ ತೀರ್ಮಾನಿಸಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ರಾಜಕೀಯ ಪ್ರತಿಷ್ಠೆಯಿಂದಾಗಿ ಇಲ್ಲಿನ ಸೇತುವೆ ಮೂಲಕ ಹಾದು ಬರುವ ವಾಹನ ಸವಾರರು ಮಾತ್ರ ಕೆಸರ ಮೇಲೆ ಸರ್ಕಸ್ ನಡೆಸಬೇಕಾದ ಸನ್ನಿವೇಶ ಎದುರಾಗಿರುವುದು ಕಂಡು ಬಂದಿದೆ.
ನಡೆದದ್ದೇನು?:
ಕಳೆದ ಹಲವು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಪಾಣೆಮಂಗಳೂರು ಪೇಟೆಯ ಸಾಲುಮರ ಕಿರು ಸೇತುವೆ ಪುನರ್ ನಿರ್ಮಾಣಕ್ಕೆ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ, ಸ್ಥಳೀಯರ ಶಾಸಕರೂ ಆಗಿರುವ ಬಿ ರಮಾನಾಥ ರೈ ಅವರ ವಿಶೇಷ ಮುತುವರ್ಜಿ ಮೇರೆಗೆ ಸುಮಾರು 1.25 ಕೋಟಿ ರೂಪಾಯಿ ಮಂಜೂರಾಗಿ ಕಳೆದ ಫೆಬ್ರವರಿಯಲ್ಲಿ ಕಾಮಗಾರಿ ಪ್ರಾರಂಭಗೊಂಡಿತ್ತು. ಜೂನ್ ಮೊದಲ ವಾರದಲ್ಲಿ ಸಂಚಾರ ಮುಕ್ತಗೊಳ್ಳುವ ಭರವಸೆಯಿಂದ ಕಾಮಗಾರಿ ಆರಂಭಿಸಲಾಗಿತ್ತಾದರೂ ಕೆಲವೊಂದು ತಾಂತ್ರಿಕ ಅಡಚಣೆಯಿಂದ ಕಾಮಗಾರಿ ವಿಳಂಬಗೊಂಡು ಸೇತುವೆ ಇನ್ನೂ ಸಂಚಾರ ಮುಕ್ತಗೊಳ್ಳಲು ಯೋಗ್ಯವಾಗಿಲ್ಲ. ಈ ನಡುವೆ ಸ್ಥಳೀಯ ಪುರಸಭಾ ಸದಸ್ಯೆ ಚಂಚಲಾಕ್ಷಿ ಅವರ ವಿರುದ್ದ ತೊಡೆತಟ್ಟಿದ ಸ್ವಪಕ್ಷೀಯ ಸ್ಥಳೀಯ ಫುಡಾರಿಗಳು ರಾಜಕೀಯ ಪ್ರತಿಷ್ಠೆ ಮರೆಯಲು ಮುಂದಾಗಿ ಲೋಕೋಪಯೋಗಿ ಇಂಜಿನಿಯರ್ ಮೊರೆ ಹೋಗಿ ತರಾತುರಿಯಲ್ಲಿ ಸೇತುವೆನ್ನು ಸಾಂಕೇತಿಕ ಉದ್ಘಾಟನೆಗೆ ದಿನ ನಿಗದಿಪಡಿಸುವಂತೆ ಒತ್ತಾಯಪಡಿಸಿದ್ದಾರೆ. ಕೈ ಫುಡಾರಿಗಳ ಪ್ರಭಾವಕ್ಕೆ ಮಣಿದ ಪಿಡಬ್ಲ್ಯುಡಿ ಇಂಜಿನಿಯರ್ ಉಮೇಶ್ ಭಟ್ ಮಂಗಳವಾರ ಸೇತುವೆ ಉದ್ಘಾಟನೆಗೆ ದಿನನಿಗಡಿಪಡಿಸಿದ್ದರು. ಈ ಬಗ್ಗೆ ಸಚಿವ ರಮಾನಾಥ ರೈ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದವರಾಗಲೀ, ಇಲಾಖಾಧಿಕಾರಿಗಳಾಗಲೀ ಸ್ಥಳೀಯ ಪುರಸಭಾ ಸದಸ್ಯರಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ನನಗೆ ಗೊತ್ತೇ ಇಲ್ಲ:
ಒಂದು ಕಾಲು ಕೋಟಿಯಷ್ಟು ಬೃಹತ್ ಮೊತ್ತದ ಕಾಮಗಾರಿ ಉದ್ಘಾಟನೆಗೇ ಮಾಧ್ಯಮ ಮಂದಿಗೆ ಮಾಹಿತಿ ನೀಡದೆ ಸಚಿವರ ಅಭಿವೃದ್ದಿ ಕಾರ್ಯಕ್ರಮವನ್ನು ಕತ್ತಲಲ್ಲಿರಿಸುವ ಮೂಲಕ ಕಾರ್ಯಕ್ರಮ ಆಯೋಜಕರು ರಾಜಕೀಯ ಸಣ್ಣತನ ಮೆರೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕೌನ್ಸಿಲರ್ ಚಂಚಲಾಕ್ಷಿ ಅವರು ಸೇತುವೆ ಇನ್ನೂ ಸಂಚಾರ ಮುಕ್ತಗೊಂಡಿಲ್ಲ. ಇದು ಇಲಾಖೆ ವತಿಯಿಂದ ನಡೆದ ಅಧಿಕೃತ ಕಾರ್ಯಕ್ರಮವೂ ಅಲ್ಲ. ಯಾರೋ ಒಂದಿಬ್ಬರು ಸ್ಥಳೀಯರು ಸೇರಿ ಕಾರ್ಯಕ್ರಮ ಆಯೋಜಿಸಿ ಸಚಿವರನ್ನು ದಾರಿ ತಪ್ಪಿಸಿದ್ದಾರೆ. ಕೊನೆ ಕ್ಷಣದಲ್ಲಿ ಪಿಡಬ್ಲ್ಯುಡಿ ಇಂಜಿನಿಯರ್ ಹಾಗೂ ಪುರಸಭಾ ಇಂಜಿನಿಯರ್ ನೀಡಿದ ಮಾಹಿತಿಯಂತೆ ನಾನು ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ಎಂದಿದ್ದಾರೆ.