ಬಂಟ್ವಾಳ: ಸಾಂಕ್ರಾಮಿಕ ರೋಗದ ಬಾಧೆ, ತ್ಯಾಜ್ಯ ಸಮಸ್ಯೆ, ಸರ್ವಿಸ್ ರಸ್ತೆಯ ಅವ್ಯವಸ್ಥೆ, ಚರಂಡಿ-ಗುಂಡಿ, ಕೊಳಚೆ ನೀರು…..ಹೀಗೆ ಬಿ.ಸಿ.ರೋಡನ್ನು ಸಧ್ಯ ಕಾಡುತ್ತಿರುವ ಹಲವು ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಮಂಗಳವಾರ ರಾಜ್ಯದ ಪರಿಸರ ಸಚಿವ ಬಿ.ರಮಾನಾಥ ರೈ ಹಾಗೂ ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್‍ರವರಿಂದ ಅಧಿಕಾರಿಗಳಿಗೆ ಸ್ಪೆಷಲ್ ಕ್ಲಾಸ್ ದೊರೆತಿದೆ. ಆದರೆ ಈ ಕ್ಲಾಸ್ ಪಡೆದ ಎಷ್ಟು ಮಂದಿ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಪಾಸ್ ಆಗಿದ್ದಾರೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಮೂಡತೊಡಗಿದೆ.
ಇಬ್ಬರು ಸಚಿವರು ಸಭೆ ನಡೆಸಿ ಕೆಲವೊಂದು ಮಹತ್ವದ ವಿಷಯಗಳ ಬಗ್ಗೆ ಶೀರ್ಘದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರೂ ಯಾವೊಂದು ಸಮಸ್ಯೆಗೂ ಇದುವರೆಗೆ ಸಮರ್ಪಕ ಪರಿಹಾರ ದೊರೆತಿಲ್ಲ. ಸಮಸ್ಯೆಗಳು ತೀವ್ರಗೊಂಡಾಗ ಒಮ್ಮೆ ಸಭೆ ನಡೆಸಿ ಅಧಿಕಾರಿಗಳ ಮೇಲೆ ತರಾಟೆ, ಗರಂ ಆದೇಶ ನೀಡುವುದು ಇಂದಿನಿಂದಲೂ ಇದ್ದದ್ದೆ. ಆದರೆ ಈ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳುತ್ತದೆ ಎನ್ನುವುದು ಮುಖ್ಯ. ಇಲ್ಲವಾದಲ್ಲಿ ಜನಾದೇಶಕ್ಕೆ ಬೆಲೆ ಕೊಡದ ಅಧಿಕಾರಿಗಳು ಜನಪ್ರತಿನಿಧಿಗಳ ಅರ್ಥಾತ್ ಸಚಿವರ ಮಾತಿಗೂ ಬೆಲೆ ಕೊಡುವುದಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.
ಹಾಗೆಂದು ಇಬ್ಬರು ಸಚಿವರು ಒಂದೆಡೆ ಸಭೆ ನಡೆಸಿಲ್ಲ. ರೈಯವರು ತಮ್ಮ ಕಚೇರಿಯಲ್ಲಿ ಹಾಗೂ ಖಾದರ್ ಅವರು ತಾಲೂಕು ಪಂಚಾಯತು ಸಭಾಂಗಣದಲ್ಲಿ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವರೇ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.
ಇಬ್ಬರು ಸಚಿವರು ಒಂದೆಡೆ ಕುಳಿತು ಬಿ.ಸಿ.ರೋಡನ್ನು ಕಾಡುತ್ತಿರುವ ಪರಿಸರ ಹಾಗೂ ಆರೋಗ್ಯ ಸಂಬಂಧಿ ಗಂಬೀರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದರೆ ಪರಿಣಾಮಕಾರಿಯಾಗಬಹುದಿತ್ತೋ ಏನೋ?
ಆರೋಗ್ಯ ಸಚಿವರ ಸಲಹೆ: ಜನರು ಜ್ವರ ಬಂದಾಕ್ಷಣ ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರಿಂದ ಉಚಿತ ತಪಾಸಣೆಗೆ ಒಳಪಡಿಸಿ ಉಚಿತ ಔಷಧಿ ಪಡೆದುಕೊಳ್ಳಿ. ಆರೋಗ್ಯಾಧಿಕಾರಿಗಳು ಸಹಿತ ಸಿಬ್ಬಂದಿಗಳು ಭಾನುವಾರವೂ ಆಸ್ಪತ್ರೆಯಲ್ಲಿದ್ದು, ಕೆಲಸ ಮಾಡಿ. ಗ್ರಾಮೀಣಾಭಿವೃದ್ಧಿ ಇಲಾಖೆ, ಆರೋಗ್ಯ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಜಂಟಿಯಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಇದಕ್ಕೆ ಜನರು ಕೂಡ ಸಹಕರಿಸಬೇಕು. ಬಡ ಕೂಲಿ ಕಾರ್ಮಿಕ, ಶಾಲಾ ಮಕ್ಕಳು ವಾರದ ದಿನಗಳಲ್ಲಿ ತಮ್ಮ ಕರ್ತವ್ಯಕ್ಕೆ ತೆರಳುತ್ತಿರುವುದರಿಂದ ಈ ಸಂದರ್ಭದಲ್ಲಿ ಅವರಿಗೆ ಆಸ್ಪತ್ರೆಗೆ ಬರಲು ಅನಾನುಕೂಲವಾಗುತ್ತಿದೆ. ಈ ದಿಸೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಭಾನುವಾರವೂ ಕಾರ್ಯ ನಿರ್ವಹಿಸಬೇಕು. ಸಮಸ್ಯೆಯನ್ನು ತಳಮಟ್ಟದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಕಚೇರಿಯಲ್ಲಿ ಕೂರದೇ ದಿನಕ್ಕೊಮ್ಮೆ ತಾಲೂಕಿನ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ವಿವರವನ್ನು ಪಡೆದುಕೊಳ್ಳಬೇಕು. ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೈರ್ಮಲ್ಯ ಸಮಿತಿಯ ಸಭೆ ಕರೆದು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ಹೊಟೇಲ್‍ನಲ್ಲಿ ಕಡ್ಡಾಯವಾಗಿ ಬಿಸಿನೀರನ್ನು ಗ್ರಾಹಕರಿಗೆ ನೀಡಬೇಕು ಇತ್ಯಾದಿಗಳನ್ನು ಅನುಷ್ಠಾನಗೊಳಿಸುವಂತೆ ಖಾದರ್ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ. ತಾಪಂ ಅದ್ಯಕ್ಷ ಯಶವಂತ ಡಿ, ಉಪಾಧ್ಯಕ್ಷೆ ವಿಲಾಸಿನಿ, ದಕ ಜಿಪಂ ಉಪಕಾರ್ಯದರ್ಶಿ ಎನ್.ಆರ್. ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಂಜುನಾಥ್, ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಗಿರೀಶ್ ಕೆ.ಪಿ ಸಭೆಯಲ್ಲಿದ್ದು ಸಚಿವರ ಮಾತನ್ನು ಕೇಳಿಸಿಕೊಂಡಿದ್ದಾರೆ. ಆದರೆ ಇದೆಲ್ಲಾ ನಿಜಕ್ಕೂ ಪಾಲನೆಯಾಗುತ್ತಿದೆಯೇ ಎಂದು ಜನ ಈಗ ಪ್ರಶ್ನಿಸತೊಡಗಿದ್ದಾರೆ.
ರೈ ತಾಕೀತು:
ತಾಲೂಕಿನ ವಿವಿಧ ಇಲಾಖೆಗಳಲ್ಲಿನ ಕುಂದುಕೊರತೆಯನ್ನು ಆಲಿಸುವ ಮೂಲಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು, ಕೆಲವು ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ತಾಕೀತು ಮಾಡಿದರು. ಮುಖ್ಯವಾಗಿ ನಿರ್ಮಲ ಬಂಟ್ವಾಳ, ಬಿ.ಸಿ.ರೋಡ್ ಉದ್ಯಾನವನ ನಿರ್ಮಾಣ ಹಾಗೂ ಬಂಟ್ವಾಳ ಪುರಸಭೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತಂತೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಸರ್ವೀಸ್ ರೋಡಿನಲ್ಲಿ ಹೊಂಡಗಳು ತುಂಬಿದ್ದರಿಂದ ವಾಹನ ಸಂಚಾರ ಭಾರೀ ಅಡ್ಡಿ ಉಂಟುಮಾಡುತ್ತಿರುವುದರಿಂದ ಇಲ್ಲಿರುವ ಎಲ್ಲಾ ಗುಂಡಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ವಾರದೊಳಗೆ ಮುಚ್ಚಬೇಕು. ಬಿ.ಸಿ.ರೋಡ್ ಬೈಪಾಸ್ ಬಳಿ ಮೂರು ದಿಕ್ಕಿನಲ್ಲಿ ಹಂಪ್ಸ್, ಕ್ರಾಶ್‍ಕಾರ್ಡ್, ಸಿಗ್ನಲ್, ರಿಫ್ರೆಕ್ಟರ್ ಲೈಟ್ ಅಳವಡಿಸಬೇಕು. ಇದಕ್ಕೆ ಪುರಸಭೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖಾಧಿಕಾರಿಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ಬಿ.ಸಿ.ರೋಡ್, ಬಂಟ್ವಾಳ, ಕೈಕಂಬ ಹಾಗೂ ಪಾಣೆಮಂಗಳೂರು ರಸ್ತೆ ಬದಿಯ ಚರಂಡಿ ರಚನೆ, ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ವ್ಯವಸ್ಥೆ, ಬಿ.ಸಿ.ರೋಡ್ ಫ್ಲೈಓವರ್‍ನಲ್ಲಿ ಏಕಕಾಲದಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಪಾದಾಚಾರಿಗಳ ಓಡಾಟಕ್ಕೂ ಸುರಕ್ಷಿತ ರಸ್ತೆ ರಚಿಸಬೇಕು ಎಂದು ಸಚಿವ ರೈ ತಾಕೀತು ಮಾಡಿದ್ದಾರೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಎಸ್ಪಿ ಡಾ.ಶರಣಪ್ಪ, ಸಹಾಯಕ ಕಮಿಷನರ್ ಡಾ.ಅಶೋಕ್, ಎಎಸ್ಪಿ ರಾಹುಲ್ ಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಠಾಣಾಧಿಕಾರಿ ನಂದಕುಮಾರ್, ಟ್ರಾಫಿಕ್ ಠಾಣಾಧಿಕಾರಿ ಚಂದ್ರಶೇಖರಯ್ಯ, ತಹಸೀಲ್ದಾರ್ ಪುರಂದರ ಹೆಗ್ಡೆ, ಉಪತಹಸೀಲ್ದಾರ್ ಪರಮೇಶ್ವರ ನಾಯಕ್, ಪಿಡಬ್ಲ್ಯೂಡಿ ಇಇ ಧರ್ಮರಾಜ್, ಎಇಇ ಉಮೇಶ್ ಭಟ್, ಮೆಸ್ಕಾಂ ಕಾರ್ಯನಿರ್ವಹಕ ಎಂಜಿನಿಯ್ ಉಮೇಶ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಮೊದಲಾದವರು ಸಚಿವರ ಮಾತಿಗೆ ತಲೆಯಾಡಿಸಿದ್ದಾರೆ.
ಆದರೆ ಸಭೆಯಲ್ಲಿ ನಡೆದ ಯಾವೊಂದು ನಿರ್ಣಯಗಳು ಇದುವರೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಮತ್ತೊಮ್ಮೆ ಅಧಿಕಾರಿಗಳನ್ನು ಎಚ್ಚರಿಸುವ ಅಗತ್ಯವಿದೆ ಅನಿಸುತ್ತದೆ.

By suddi9

Leave a Reply

Your email address will not be published. Required fields are marked *