ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಂತೂರು ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು, ಕೂಡಲೇ ದುರಸ್ತಿಗೊಳಿಸುವಂತೆ ನಾಗರಿಕರಿಂದ ಆಗ್ರಹ ಕೇಳಿ ಬಂದಿದೆ. ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸರ್ಕಾರದ ‘ಜೈಕಾ’ ಯೋಜನೆಯಡಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಕ್ಕಾಗಿ ತರಾತುರಿಯಲ್ಲಿ ಸಮೀಕ್ಷೆ ಸಡೆಸಿ ಬಳಿಕ ಸ್ಥಗಿತಗೊಂಡಿತ್ತು.

19btl-Narikombu

ಈ ಹಿಂದೆ ಕಾಂಗ್ರೆಸ್ ಆಡಳಿತ ಹೊಂದಿದ್ದ ಪಂಚಾಯಿತಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಸ್ಥಳೀಯ ಜಿ.ಪಂ.ಸದಸ್ಯೆ ಮಮತಾ ಎಸ್.ಗಟ್ಟಿ ಇವರು ಕುಡಿಯುವ ನೀರಿನ ಯೋಜನೆ ಮತ್ತಿತರ ಕಾಮಗಾರಿಗೆ ಹೆಚ್ಚಿನ ಅನುದಾನ ದೊರಕಿಸಿ ಕೊಟ್ಟಿದ್ದಾರೆ. ಇನ್ನೊಂದೆಡೆ ಕಿರು ಜಲವಿದ್ಯುತ್ ಘಟಕ ನಡೆಸುತ್ತಿರುವ ಆಂಧ್ರ ಮೂಲದ ಎಎಂಆರ್ ಸಂಸ್ಥೆ ವತಿಯಿಂದ ರೂ 40ಲಕ್ಷಕ್ಕೂ ಮಿಕ್ಕಿ ಮೊತ್ತದ ಅನುದಾನವೂ ಪಂಚಾಯಿತಿಗೆ ದೊರೆತಿದೆ ಎನ್ನುತ್ತಿದ್ದಾರೆ.

ಇಲ್ಲಿನ ನರಿಕೊಂಬು-ಕರ್ಬೆ ಟ್ಟು ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ವಿಸ್ತರಣೆ ಮತ್ತು ಡಾಂಬರೀಕರಣಗೊಳಿಸಲಾಗಿದೆ. ಆದರೆ ಇಲ್ಲಿನ ಕರ್ಬೆಟ್ಟು-ಬೋಳಂತೂರು ರಸ್ತೆ ಮಾತ್ರ ದುರಸ್ತಿಗೊಳಿಸದಿರುವುದು ಇಲ್ಲಿನ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ಈಚೆಗೆ ನಡೆದ ಚುನಾಚಣೆಯಲ್ಲಿ ಕಾಂಗ್ರೆಸ್ ಬದಲಿಗೆ ಮತದಾರರು ಮತ್ತೆ ಬಿಜೆಪಿಗೆ ಮಣೆ ಹಾಕಿದ್ದಾರೆ.

ಇದೀಗ ಬಿಜೆಪಿ ಆಡಳಿತ ಹೊಂದಿರುವ ಪಂಚಾಯಿತಿಗೆ ನಂ.1 ಎಂದು ಕರೆಸಿಕೊಳ್ಳುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಿಸಿಕೊಟ್ಟು ಈ ರಸ್ತೆ ಅಭಿವೃದ್ಧಿಪಡಿಸಲಿ ಎನ್ನುತ್ತಿದ್ದಾರೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು. ಈ ನಡುವೆ ಬಿಜೆಪಿ ತಾ.ಪಂ.ಸದಸ್ಯ ಆನಂದ ಎ.ಶಂಭೂರು ಇವರು ಕೂಡಾ ಗರಿಷ್ಟ ಮೊತ್ತದ ಅನುದಾನ ದೊರಕಿಸಿ ಕೊಟ್ಟಿದ್ದಾರೆ ಎಂಬ ವಾದ ಬಿಜೆಪಿ ಕಾರ್ಯಕರ್ತರದ್ದು.
ಒಟ್ಟಿನಲ್ಲಿ ಈ ಕಾಂಗ್ರೆಸ್-ಬಿಜೆಪಿ ರಾಜಕೀಯ ಆಟದಲ್ಲಿ ನಾಗರಿಕರು ಮಾತ್ರ ‘ಕೂಸು ಬಡವಾಯಿತು’ ಎಂಬ ಸ್ಥಿತಿ ಬಂದೊದಗಿದೆ ಎನ್ನುತ್ತಿದ್ದಾರೆ ಇಲ್ಲಿನ ನಾಗರಿಕರು.

-ಮೋಹನ್ ಕೆ.ಶ್ರೀಯಾನ್

 

By suddi9

Leave a Reply

Your email address will not be published. Required fields are marked *