ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಾದ್ಯಂತ ಕಳೆದ ರಾತ್ರಿಯಿಂದ ಭಾನುವಾರ ದಿನವಿಡೀ ಸುರಿದ ಭಾರೀ ಮಳೆಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಈ ವರ್ಷ ಪ್ರಥಮ ಬಾರಿಗೆ 7.4 ಮೀಟರ್ ಏರಿಕೆ ಕಂಡಿದೆ. ಶಂಭೂರು ಎಎಂಆರ್ ಡ್ಯಾಂನಿಂದ ಹೆಚ್ಚುವರಿ ನೀರನ್ನು ಗೇಟ್ ತೆರದು ಹರಿಯ ಬಿಡುವ ಬಗ್ಗೆ ಸೈರನ್ ಮೊಳಗಿಸಲಾಗಿದೆ.
ನೇತ್ರಾವತಿ ನೀರಿನ ಅಪಾಯ ಮಟ್ಟ 9 ಮೀಟರ್ ಆಗಿದ್ದು, ಇದೇ ರೀತಿ ಮಳೆಯಾದರೆ ಇಲ್ಲಿನ ತಗ್ಗುಪ್ರದೇಶಗಳು ಮುಳುಗಡೆ ಭೀತಿ ಎದುರಿಸಲಿದೆ.

19btl-Nethravathi
ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದು, ಕುಡಿಯುವ ನೀರಿನ ಪೂರೈಕೆಗೂ ಅಡಚಣೆಯಾಗಿದೆ ಎಂಬ ದೂರು ಕೇಳಿ ಬಂದಿದೆ. 13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿಯೂ ನೆರೆ ನೀರು ಅಣೆಕಟ್ಟೆಯನ್ನು ಮೀರಿ ಹರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೆಲವೊಮ್ಮೆ ಬೀಸಿದ ಗಾಳಿ ಮಳೆಯಿಂದಾಗಿ ಹಲವೆಡೆ ರಸ್ತೆ ಬದಿ ಮರ ಉರುಳಿ ಬಿದ್ದು, ವಿದ್ಯುತ್ ತಂತಿ ಮತ್ತು ಕಂಬಗಳಿಗೂ ಹಾನಿಯಾಗಿದೆ. ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲೇ ಕೆಸರು ನೀರು ಹರಿದಾಡುತ್ತಿರುವುದು ಕಂಡು ಬಂದಿದೆ. ನೆರೆಭೀತಿ ಎದುರಿಸುತ್ತಿರುವ ಮನೆಗಳನ್ನು ಸ್ಥಳಾಂತರಿಸಿ ಗಂಜಿ ಕೇಂದ್ರ ತೆರೆಯಲು ಸೂಚಿಸಲಾಗಿದೆ. ಇದಕ್ಕಾಗಿ ತಾಲ್ಲೂಕು ಕಚೇರಿಯಲ್ಲಿ ಪ್ರತ್ಯೇಕ ನಿಯಂತ್ರಣಾ ಕೊಠಡಿ ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *