ಗುರುಪುರ ಕೈಕಂಬ: ಗುರುಪುರ – ಸುರತ್ಕಲ್ ಹೋಬಳಿಯ ಮುಂಡಾಲ ಸಮಾಜ ಬಾಂಧವರಿಗಾಗಿ ಕಂದಾವರ ಪದವಿನಲ್ಲಿ ಆ.02 ಭಾನುವಾರ ಆಟಿ, ಆಟ- ಊಟ- ಕೂಟ ಕಾರ್ಯಕ್ರಮ ಜರಗಿತು.
ಸಮಾಜ ಬಾಂಧವರು ನಿನ್ನೆಯ ದಿನಗಳನ್ನು ಮರೆಯದೆ ನಾಳೆಯ ಒಳ್ಳೆಯ ದಿನಗಳಿಗಾಗಿ ಇಂದು ಶ್ರಮವಹಿಸಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಅದ್ಯಪಾಡಿ ಮೋನಪ್ಪ ಗುರಿಕಾರರು ಕರೆ ನೀಡಿದರು.
ನಾವು ಶೈಕ್ಷಣಿಕವಾಗಿ ಮುಂದುವರಿದರೆ, ನಮ್ಮ ಸಮಾಜ ಬಾಂಧವರು ಎಲ್ಲಾ ರಂಗಗಳಲ್ಲಿಯೂ ಸುಧೃಢವಾಗಿ ಬೆಳೆಯುತ್ತಾರೆ. ಇದಕ್ಕೆ ಶಿಕ್ಷಣವೊಂದೇ ರಾಮಬಾಣ ಎಂದರು. ಅವರು ಮುಂಡಾಲ ಸಮಾಜದಲ್ಲಿ ಜರಗಿದ ಆಟಿ, ಆಟ-ಊಟ-ಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಆನಂದ ಕಾಜಿಲರವರು ಮಾತನಾಡುತ್ತಾ, ಸಮಾಜ ಬಾಂಧವರು ಸಂಘಟಿತರಾದಾಗ ಮಾತ್ರಾ ಮುಖ್ಯವಾಹಿನಿಯಲ್ಲಿ ಗುರುತಿಸಲು ಸಾಧ್ಯ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಯಾದ ಅರಣ್ಯ ಇಲಾಖೆಯ ಅಧೀಕ್ಷಕರಾದ ದೇವೇಂದ್ರ ಕಾಪಿಕಾಡ್‍ರವರು ಮಾತನಾಡುತ್ತಾ, ಮುಂಡಾಲ ಬಾಂಧವರು ಕೂಡಾ ಇಂದು ಯಾರಿಗೂ ಯಾವ ರಂಗದಲ್ಲೂ ಕಡಿಮೆಯಿಲ್ಲದಂತೆ ಬೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಇನ್ನೋರ್ವ ಮುಖ್ಯ ಅತಿಥಿಯಾದ ದ.ಸಂ.ಸಮಿತಿಯ ಮುಖಂಡರಾದ ರೋಹಿತಾಕ್ಷ ಅಂಗಡಿಗುಡ್ಡೆರವರು ಮಾತನಾಡುತ್ತಾ, ಡಾ1ಬಿ. ಆರ್ ಅಂಬೇಡ್ಕರ್‍ರವರ ಚಿಂತನೆಯ ಹಾದಿಯಲ್ಲಿ ನಾವು ನಡೆಯಬೇಕಾದ ಅವಶ್ಯಕತೆಯಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿಯಾದ ಬಿ ಎಸ್ ವಸಂತ್ ಕುಮಾರ್‍ರವರು ಮಾತನಾಡುತ್ತಾ, ಸರಕಾರಿ ಕೆಲಸದ ಹಂಬಲವನ್ನು ಬದಿಗೊತ್ತಿ ಸ್ವ-ಉದ್ಯೋಗದ ಮೂಲಕ ಕೂಡಾ ಸಂತೃಪ್ತ ಬದುಕು ನಡೆಸಲು ಸಾಧ್ಯ ಎಂದರು.ಈ ಸಂಧರ್ಭದಲ್ಲಿ ಜಾನಪದ ಕ್ರೀಡಾ ಕೂಟಗಳು ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯ್ತು. ಜೊತೆಗೆ ಆಷಾಡ ತಿಂಗಳ ಮಹತ್ವ, ತಿಂಡಿ ತಿನಿಸುಗಳ ಮಹತ್ವವನ್ನು ಮುಂಡಾಲ ಕೂಟದಲ್ಲಿ ಚರ್ಚಿಸಲಾಯ್ತು. ಕೂಟದಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳು, ಹಾಡುಗಳು, ನೃತ್ಯಗಳು, ರಸಪ್ರಶ್ನೆಗಳು ಕೂಟಕ್ಕೆ ಮತ್ತಷ್ಟು ಮೆರಗನ್ನು ನೀಡಿತು. ವೇದಿಕೆಯಲ್ಲಿ ಸೋಮಯ್ಯ ಬೆಳ್ಳೂರು, ಆನಂದ ಕರ್ಕೇರ ಗುರಿಕಾರ, ಸೀತಾರಾಮ ಎಚ್ ಬಿ, ಶ್ರೀಮತಿ ಸುಮತಿ ಸಾಲಿಯಾನ್, ಶ್ರೀಮತಿ ಮೀನಾಕ್ಷಿ ಕರ್ಕೇರ, ಶ್ರೀಮತಿ ಶಾಂಭವಿ, ಶ್ರೀಮತಿ ಕಮಲಾಕ್ಷಿ ಕಾಜಿಲರವರು ಉಪಸ್ಥಿತರಿದ್ದರು. ಜಯಂತ ಕೊಳಂಬೆ, ಹರೀಶ್ ಕೊಳಂಬೆ, ನವೀನ್ ಸ್ಕಂದನಗರ ಕ್ರೀಡಾಕೂಟವನ್ನು ಸಂಘಟಿಸಿದರು. ಕು ರಮ್ಯಾ ಸ್ವಾಗತಿಸಿದರು. ಕು.ಪ್ರಜ್ಞಾ ಪ್ರಾರ್ಥಿಸಿದರು. ಜಯಂತ ಮಾಸ್ಟರ್ ಮತ್ತು ವಿಠಲ ಆಳ್ವರವರು ಕಾರ್ಯಕ್ರಮ ನಿರ್ವಹಿಸಿದರು. ದೇವು ಕುಮಾರ್ ವಂದಿಸಿದರು.

