ಬಂಟ್ವಾಳ: ಆಂಗ್ಲ ಭಾಷಾ ಸಂಘದ ವತಿಯಿಂದ ಆ. 18ರಂದು ಮಂಗಳವಾರ ಹಮ್ಮಿಕೊಂಡ ವಿಶೇಷ ಅತಿಥಿ ಭಾಷಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಆಂಗ್ಲ ವಿಭಾಗದ ಉಪನ್ಯಾಸಕಿ ಸರಸ್ವತಿ, ವಿವೇಕಾನಂದ ಕಾಲೇಜು ಪುತ್ತೂರು ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
“ಆಂಗ್ಲ ಭಾಷೆಯನ್ನು ಜಾಗರೂಕರಾಗಿ ಉಪಯೋಗಿಸದಿದ್ದರೆ ನಾವು ಆಡುವ ಮಾತುಗಳು ಹಾಸ್ಯಾಸ್ಪದ ಎಂದು ಅನಿಸಬಹುದು” ಎಂದರು. ಉಪನ್ಯಾಸವನ್ನು ಮುಂದುವರಿಸುತ್ತಾ “ಸಂವಹನ” ಪದದ ವಿವರಣೆ ನೀಡಿ, ದೈನಂದಿನ ಜೀವನದಲ್ಲಿ ಇಂಗ್ಲೀಷ್ ಭಾಷೆಯ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಪ್ರತಿಯೊಬ್ಬ ವ್ಯಕ್ತಿಯು ತಪ್ಪನ್ನು ಮಾಡುತ್ತಾನೆ, ತಪ್ಪನ್ನು ಮಾಡದೆ ಯಾರಿಗೂ ಯಾವುದೇ ಕಲಿಯಲು ಸಾಧ್ಯವಿಲ್ಲ. ಆದ್ದರಿಂದ ತಾವು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಅಧ್ಯಕ್ಷತೆಯನ್ನು ವಹಿಸಿ ವಿಭಾಗದ ಮುಖ್ಯಸ್ಥರಾದ ಡಾ| ಟಿ ಕೆ ರವೀಂದ್ರನ್ರವರು ಅತಿಥಿಯಾಗಿ ಆಸನವನ್ನು ಅಲಂಕರಿಸಿದ್ದರು. ಎಲ್ಲಾ ವಿಭಾಗದ ಉಪನ್ಯಾಸಕರುಗಳು, ವಿದ್ಯಾರ್ಥಿಗಳೂ ಉಪಸ್ಥಿತರಿದ್ದರು. ದ್ವಿತೀಯ ಬಿ.ಎಸ್ಸಿಯ ಅನುಷಾ ಸ್ವಾಗತಿಸಿ, ಮಹಾಲಸ, ಪ್ರಥಮ ಬಿ.ಕಾಂ ವಂದಿಸಿದರು. ಮೇಘನಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.