ಬಂಟ್ವಾಳ; ಆಡಳಿತ ಯಂತ್ರಕ್ಕೆ ವೇಗ ನೀಡುವ ಶಕ್ತಿ ಕ್ರಿಯಾಶೀಲ ಪತ್ರಕರ್ತರಿಗೆ ಇದೆ, ಅವರು ಸಕಾರಾತ್ಮಕ ಬದ್ದತೆಯೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣೆ ಸಮಿತಿ , ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಹಾಗೂ ಪ್ರೆಸ್ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಬಂಟ್ವಾಳ ಪತ್ರಕರ್ತರ ಸಂಘದ ರಜತ ವರ್ಷಾಚರಣೆಗೆ ರಜತ ವರ್ಷದ ಶೀರ್ಷಿಕೆಯೊಂದಿಗೆ ಹಸ್ತಾಕ್ಷರ ದಾಖಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
25 ವರ್ಷದ ಹಿಂದೆ ಬಂಟ್ವಾಳದಲ್ಲಿ ಗ್ರಾಮೀಣ ಪತ್ರಕರ್ತರ ಸಂಘ ಆರಂಭದ ಸಂದರ್ಭ ತಾನು ಕೂಡ ಭಾಗಿಯಾಗಿದ್ದು, ಈಗ ರಜತವರ್ಷಾಚರಣೆಗೆ ಚಾಲನೆ ಕಾರ್ಯಕ್ರಮದಲ್ಲೂ ತಾನು ಭಾಗಿಯಾಗುತ್ತಿರುವುದು ಸಂತಸ ತಂದಿದೆ ಎಂದರು. ಯಾವುದೇ ಪತ್ರಕರ್ತ ವರದಿಗಾರಿಕೆಯಲ್ಲಿ ಸೂಕ್ಷ್ಮತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಪತ್ರಕರ್ತರ ಸಹಕಾರ ಅತೀ ಅಗತ್ಯ ಎಂದರು. ದೋಷ-ತಪ್ಪುಗಳು ಮನುಷ್ಯನ ಸಹಜ ಗುಣಗಳಲ್ಲಿ ಒಂದಾಗಿದ್ದು,ಅದನ್ನೇ ವೈಭವೀಕರಿಸುವ ಬದಲು ಭವಿಷ್ಯಕ್ಕೆ ಒಳಿತಾಗುವ ವಿಷಯಕ್ಕೆ ಒತ್ತು ನೀಡುವುದು ಒಳಿತು ಎಂದವರು ಅಭಿಪ್ರಾಯಿಸಿದರು. ರಜತವಷರ್ಾಚರಣೆಗೆ ಅಗತ್ಯ ನೆರವು ನೀಡಿ, ರಜತ ಸಂಭ್ರಮದಲ್ಲಿ ತಾನೂ ಪಾಲ್ಗೊಳ್ಳುವುದಾಗಿ ಅವರು ಘೋಷಿಸಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ಮಾತನಾಡಿ, ತಾಲೂಕಿನ ಅಭಿವೃದ್ದಿಗೆ ಪತ್ರಕರ್ತರ ಕೊಡುಗೆ ಅಪಾರವಾಗಿದ್ದು, ರಜತ ಸಂಭ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಪತ್ರಕರ್ತರ ಸಂಘದ ರಜತವರ್ಷಾಚರಣೆ ಸಮಿತಿ ಅಧ್ಯಕ್ಷ ಇಬ್ರಾಹಿಂ ಅಡ್ಕಸ್ಥಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ಜಿಲ್ಲಾಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಸದಸ್ಯ ರಾಮಕೃಷ್ಣ ಆಳ್ವ, ಮಹಮ್ಮದ್ ನಂದರಬೆಟ್ಟು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎ.ಸಿ.ಭಂಡಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ತಮ್ಮಯ್ಯ ಶುಭ ಹಾರೈಸಿದರು.ಸ್ಥಾಪಕ ಸದಸ್ಯ ಡಿ.ಎಂ.ಕುಲಾಲ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಕಾ.ನಿ.ಪತ್ರಕರ್ತರ ಸಂಘದ ಪ್ರಧಾನಕಾರ್ಯದರ್ಶಿ ನಿಶಾಂತ್ ಬಿಲ್ಲಂಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಸ್ವಾಗತಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಗೋಪಾಲ ಅಂಚನ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಸೂರ್ಯನಾರಾಯಣ ಪೂವಳ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು









