ಬಂಟ್ವಾಳ; ಎಸ್ಡಿಪಿಐ ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಂದು ಬಂಟ್ವಾಳ ಪುರಸಭೆಯ ಉಪಾಧ್ಯಕ್ಷೆ ಯಾಸ್ಮೀನ್ ಆರೋಪಿಸಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ವಿರುದ್ದ ಎಸ್ಡಿಪಿಐ ಮಾಡಿದ ಆರೋಪಗಳಿಗೆ ಸ್ಪಷ್ಟಣೆ ನೀಡಿದರಲ್ಲದೆ, ಪುರಸಭಾ ನಿಧಿಯಿಂದ ತನ್ನ ವಾರ್ಡ್ 15 ರಲ್ಲಿ ನಡೆಸಿದ ಅಭಿವೃದ್ದಿ ಕಾಮಗಾರಿಗಳ ವಿವರ ನೀಡಿದರು.
1.9 ಕೋಟಿ ರೂ ವೆಚ್ಚದ ಅಭಿವೃದ್ದಿ ಕಾರ್ಯ ನಡೆದಿದ್ದು, 39.5 ಲಕ್ಷ ವೆಚ್ಚದ ಅಭಿವೃದ್ದಿ ಕಾಮಗಾರಿ ಪ್ರಗತಿಯಲ್ಲಿದೆ ಆದರೆ ಎಸ್ಡಿಪಿಐ ಟೆಂಡರ್ ಪ್ರಕ್ರಿಯೆ ನಡೆದಿರುವ ರಸ್ತೆಗೆ ಕಲ್ಲುಹಾಕಿ ದುರಸ್ತಿಪಡಿಸಿ ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆಯಲು ನನ್ನ ಮೇಲೆ ಕ್ಷುಲ್ಲಕ ಆರೋಪ ಹೊರಿಸಿದೆ ಎಂದ ಯಾಸ್ಮೀನ್, ಅವರ ಈ ಶ್ರಮ ಪ್ರಯೋಜನವಾಗುವುದಿಲ್ಲ ಎಂದು ನುಡಿದರು.

ಈ ಹಿಂದೆ ಪುರಸಭೆಯ ವಾರ್ಡ್ 15 ಯಾವುದೇ ಅಭಿವೃದ್ದಿಯಾಗದ ಹಿನ್ನೆಲೆಯಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೆ, ಕಳೆದ 2 ವರ್ಷದ ಅವಧಿಯಲ್ಲಿ ಸಚಿವರ ಸಹಕಾರದಿಂದ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇನೆ, ಮುಂದೆಯೂ ಮಾಡಲಿದ್ದೇನೆ. ಎಸ್ಡಿಪಿಐ ಕಾರ್ಯಕರ್ತರಿಗೆ ಅಷ್ಟು ಕಾಳಜಿ ಇದ್ದರೆ, ಅವರ ಪಕ್ಷದ ಸದಸ್ಯರು ಇರುವ ವಾರ್ಡ್ಗಳಲ್ಲಿ ಪರಿಶೀಲನೆ ನಡೆಸಲಿ ಎಂದವರು ಸಲಹೆ ನೀಡಿದರು. ಪುರಸಭಾ ಆಡಳಿತ ಎಲ್ಲಾ ವಾರ್ಡ್ ಗಳಿಗೆ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾವುದೇ ತಾರತಮ್ಯ ಮಾಡದೆ ಅನುದಾನಗಳನ್ನು ಸಮಾನವಾಗಿ ಹಂಚುತ್ತಿದೆ ಆದರೂ ಎಸ್ಡಿಪಿಐ ಸದಸ್ಯರಿರುವ ವಾರ್ಡ್ ಗಳಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನಡೆಯದಿರುವುದನ್ನು ಎಸ್ಡಿಪಿಐ ಕಾರ್ಯಕರ್ತರು ಮನಗಾಣಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯರಾದ ಸದಾಶಿವ ಬಂಗೇರ, ವಾಸು ಪೂಜಾರಿ,ಪ್ರವೀಣ್ ಬಂಟ್ವಾಳ , ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ, ಜಗದೀಶ್ ಕುಂದರ್, ಗಂಗಾದರ್, ಚಂಚಲಾಕ್ಷಿ, ಪ್ರಭಾ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *