ಬಂಟ್ವಾಳ :ಕನ್ನಡ ಸಂಶೋಧನಾ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕಾರರ ಕೊಡುಗೆ ಅನನ್ಯವಾದುದು. ಆಧುನಿಕ ಸಂಶೋಧನೆಯ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಪ್ರಾಚೀನ ಇತಿಹಾಸಕಾರರು ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಇತಿಹಾಸಕಾರರ ಶ್ರಮ, ವಿದ್ವತ್ತು ಮತ್ತು ಬದ್ಧತೆಯ ಪರಿಣಾಮವಾಗಿ ಅಮೂಲ್ಯ ಸಂಶೋಧನಾ ಗ್ರಂಥಗಳು ಬೆಳಕು ಕಾಣುವಂತಾಯಿತು. ಪ್ರಾಚೀನ ಇತಿಹಾಸಕಾರರು ನಿಷ್ಠೆಯಿಂದ ನಿರ್ವಹಿಸಿದ ಕೆಲಸವು ಇಂದಿನ ಯುವ ಸಂಶೋಧಕರಿಗೆ ಮಾರ್ಗಸೂಚಿಯಾಗಿದೆ.ಪ್ರಾಚೀನ ವಿದ್ವಾಂಸರ ಬದುಕು-ಬರಹವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ನಡೆಯಬೇಕು. ಮಾತ್ರವಲ್ಲ, ನಮ್ಮ ಸಂಸ್ಕೃತಿ, ಇತಿಹಾಸದ ಕುರಿತ ಅರಿವು ಯುವ ಜನಾಂಗದಲ್ಲಿ ಮೂಡಿಸುವ ಜರೂರು ವರ್ತಮಾನದ್ದಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಮ್ .ಜಾನಕಿ ಬ್ರಹ್ಮಾವರ ಅಭಿಪ್ರಾಯಪಟ್ಟರು.


ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಸಹಯೋಗದಲ್ಲಿ ನಡೆದ ಇತಿಹಾಸಕಾರ ಪೊಳಲಿ ಶೀನಪ್ಪ ಹೆಗಡೆ ಬದುಕು-ಬರಹ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮದ್ರಾಸ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ಅನುವಾದಿಸಿದ ತುಳುನಾಡ ಇತಿಹಾಸ ಕೃತಿ ಬಿಡುಗಡೆಗೊಳಿಸಲಾಯಿತು. ಕೃತಿ ಕುರಿತು ಸಂತ ಅಲೋಷಿಯಸ್ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಡೆನ್ನಿಸ್ ಫೆರ್ನಾಂಡಿಸ್ ಮಾತನಾಡಿ, ತುಳುನಾಡ ಇತಿಹಾಸ ಕೃತಿಯು ದಕ್ಷಿಣ ಕನ್ನಡದ ಇತಿಹಾಸ ಶೋಧನೆಯಲ್ಲಿ ಮಹತ್ವದ ದಾಖಲೆಯನ್ನು ಒದಗಿಸುತ್ತದೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳುವಿನ ಸ್ಥಾನಮಾನ, ಇತಿಹಾಸ ಕುರಿತು ಒಳನೋಟಗಳುಳ್ಳ ವಿದ್ವತ್ ಗ್ರಂಥ ಇದಾಗಿದೆ.