ಮೂಡುಬಿದಿರೆ: ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಗೌರವ, ಅದರೊಂದಿಗೆ ಮಹತ್ವದ ಜವಾಬ್ದಾರಿಯಿದೆ. ಸಮಾಜವನ್ನು ಸಕಾರತ್ಮಕವಾಗಿ ರೂಪಿಸುವ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಶಿಕ್ಷಕನಿಂದಾಗಬೇಕು. ನಿರಂತರ ಅಧ್ಯಯನದೊಂದಿಗೆ ಅಧ್ಯಾಪನ ಮಾಡಿದರೆ ಪರಿಣಾಮಕಾರಿಯಾಗಬಲ್ಲುದು. ಜೀವನಮೌಲ್ಯ ಕಾಪಾಡಿಕೊಳ್ಳುವ ಬೋಧನೆಯಿಂದ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತದೆ ಎಂದು ಬೆಂಗಳೂರು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಜಯರಾಮ ಶೆಟ್ಟಿ ಹೇಳಿದರು.

ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ನಡೆದ ಶಿಕ್ಷಕ ದಿನಾಚರಣೆ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಯಶೋವರ್ಮ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಮಂಗಳೂರು ಎ.ಬಿ ಶೆಟ್ಟಿ ಸ್ಮಾರಕ ದಂತ ವಿದ್ಯಾಲಯದ ನಿರ್ದೇಶಕ ಡಾ.ಶ್ರೀಧರ ಶೆಟ್ಟಿ, ಉಜಿರೆಯ ನಿವೃತ್ತ ಶಿಕ್ಷಕ ಕಾಶ್ಮೀರ್ ಮಿನೇಜಸ್, ನಿವೃತ್ತ ಉಪ ಪ್ರಾಂಶುಪಾಲ ಉಮೇಶ್ ರಾವ್ ಎಕ್ಕಾರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಿ.ಯಶೋವರ್ಮ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಚಿಂತನಾಶೀಲತೆಯನ್ನು ಬೆಳೆಸುವಂತೆ ಮಾಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ವಿಫುಲ ಅವಕಾಶವಿದೆ. ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾಲದೊಂದಿಗೆ ಬದಲಾಗಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಧ್ಯಕ್ಷತೆವಹಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಸ್ವಾಗತಿಸಿದರು. ಉದಯ ಮಂಜುನಾಥ್, ಶಿವಪ್ರಸಾದ್, ರಾಮ್ ಪ್ರಸಾದ್ ಕಾಂಚೋಡು, ಡಾ.ಯೋಗೀಶ್ ಕೈರೋಡಿ, ಸುಧಾರಾಣಿ ಸನ್ಮಾನ ಪತ್ರ ವಾಚಿಸಿದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.