ಬಂಟ್ವಾಳ : ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಮೇಲೆ ಕಳೆದ ಕೆಲವಾರು ವರ್ಷಗಳಿಂದ, ಹಾಗೂ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿರುವ ಆರೋಪಗಳಿಂದ ಆಕ್ರಮಣಗಳಿಂದ ಮಾನಸಿಕವಾಗಿ ಆಘಾತಗೊಂಡಿದ್ದೇವೆ. ಲಕ್ಷಗಟ್ಟಲೆ ಶಿಷ್ಯ ಭಕ್ತರ ಭಾವನೆಗಳಿಗೆ ನೋವುಂಟುಮಾಡದಂತೆ ಹಾಗೆಯೇ ಶ್ರೀಮಠದ ಶ್ರೀಗುರುಗಳ  ಮರ್ಯಾದೆಗೆ ಧಕ್ಕೆಯಾಗದಂತೆ ರಕ್ಷಣೆ ಕೊಡಬೇಕು ಹಾಗೂ ಇದಕ್ಕೆ ಕಾರಣರಾರೆಂದು ಸೂಕ್ತ ತನಿಖೆ ನಡೆಸಿ ಅವರ ವಿರುದ್ಧ ಕಾನೂನಿನಂತೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಬಿ.ಸಿ.ರೋಡ್ ಯುವಕರು ಬಂಟ್ವಾಳದ ಸಹಾಯಕ ಪೊಲೀಸ್ ಅಧೀಕ್ಷಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Raghveshwar

IMG-20150926-WA0058

IMG-20150926-WA0059ಬಂಟ್ವಾಳ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಚಂದ್ರ ಬಿ.ಸಿ.ರೋಡ್, ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ಸಂಚಾಲಕ ತಿರುಲೇಶ್ ಬೆಳ್ಳೂರು, ಗೋಪಾಲಕೃಷ್ಣ ಭಟ್ ಸೂರಿಕುಮೇರು, ಹರೀಶ್ ಪೆರಾಜೆ, ಮಾಣಿ ಪೆರಾಜೆ ಯುವ ವೇದಿಕೆ ಸಂಚಾಲಕ ರಾಜಾರಾಮ ಕಾಡೂರು ಮತ್ತು 25 ಮಂದಿ ಯುವಕರು ಎಸ್.ಪಿ. ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಶ್ರೀರಾಮಚಂದ್ರಾಪುರಮಠ ಆದಿಗುರು ಶ್ರೀಶಂಕರಾಚಾರ್ಯರಿಂದ ಸುಮಾರು 1,300 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದು, ಇಲ್ಲಿಯ ತನಕ ಅವಿಚ್ಛಿನ್ನವಾಗಿ ಸಾಗಿ ಬಂದಿದೆ. ಇದು ಕೇವಲ ಶ್ರೀರಾಮಚಂದ್ರಾಪುರ ಮಠದಲ್ಲಿ ಮಾತ್ರವಿರುವ ವಿಶೇಷತೆ ಎಂದು ಹೇಳಲು ನಮಗೆ ಬಹಳ ಹೆಮ್ಮೆ ಎನಿಸುತ್ತದೆ. ಪ್ರಸ್ತುತ ಪೀಠಾಧೀಶರಾಗಿರುವ ಶ್ರೀರಾಘವೇಶ್ವರಭಾರತೀ ಸ್ವಾಮಿಗಳು ಈ ಅವಿಚ್ಛಿನ್ನ ಪರಂಪರೆಯ 36ನೇ ಯತಿಗಳು. ಅವರು ಪೀಠಾರೋಹಣ ಮಾಡಿದ ದಿನದಿಂದ ಅಸಂಖ್ಯ ಸಮಾಜಮುಖೀ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಉದ್ಧಾರಕ್ಕೆ, ಶಿಷ್ಯರ ಅಭಿವೃದ್ಧಿಗೆ ಹಗಲಿರುಳೆನ್ನದೇ ತಮ್ಮನ್ನು ತೇಯ್ದು ಅಪಾರ ಜನಪ್ರೀತಿಯನ್ನು, ಕೀರ್ತಿಯನ್ನು ಗಳಿಸಿರುತ್ತಾರೆ. ಇದು ಹಲವರ ಕೆಂಗಣ್ಣಿಗೆ, ಮತ್ಸರಕ್ಕೆ ಕಾರಣವಾಗಿರುತ್ತದೆ.

ಮನವಿಯಲ್ಲಿ ಏನಿದೆ? 

ಶ್ರೀಮಠದ ಮೇಲೆ, ಶ್ರೀ ಗುರುಗಳ ಮೇಲೆ ನಡೆಯುತ್ತಿರುವ ಆರೋಪಗಳು, ಆಕ್ರಮಣಗಳು ಒಂದು ಭೀಕರ ಷಡ್ಯಂತ್ರದ ಅಂಗ ಎಂಬುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸುವಂತಹ ಕೆಲವೊಂದು ಘಟನೆಗಳನ್ನು ಇಲ್ಲಿ ಉಲ್ಲೇಖಿಸಲು ಇಚ್ಛಿಸುತ್ತೇವೆ.
1. 1997 – ಶ್ರೀ ಗುರುಗಳಿಗೂ ಹಿಂದಿನ ಪೀಠಾಧಿಪತಿಗಳವರಿಗೂ ಭಿನ್ನಾಭಿಪ್ರಾಯವಿದೆ ಎಂದು ಹೇಳಿ ಸಮಾಜದಲ್ಲಿ ಆತಂಕ ಸೃಷ್ಠಿಸುವ ಪ್ರಯತ್ನ.
2. 2004 – ಕೊಲ್ಲೂರು ಸಮೀಪದ ಅಂಬಾರ ಗುಡ್ಡ ಎಂಬಲ್ಲಿ ಗಣಿಗಾರಿಕೆೆ ನಡೆದಾಗ ಪರಿಸರ ಸಂರಕ್ಷಣೆಗಾಗಿ ಹೋರಾಡಿ ಜಯ.
3. ಇಸವಿ 2007 – ವಿಶ್ವ ಗೋ ಸಮ್ಮೇಳನ ಎಂಬ ಮಹಾನ್ ಕಾರ್ಯಕ್ರಮದ ವೇಳೆ ಶರಾವತಿ ನದಿಯಲ್ಲಿ ಮಠದ ತ್ಯಾಜ್ಯ ಮಿಶ್ರಿತವಾಗಿ ಮೀನುಗಳು ನಾಶವಾಗುತ್ತಿವೆ ಎಂಬ ಸುಳ್ಳು ಆರೋಪ. ಶ್ರೀ ಮಠದ ಪರಿಸರದಲ್ಲಿ ಅರಣ್ಯ ನಾಶ ಮಾಡುತ್ತಿದ್ದಾರೆ ಎಂಬ ಇನ್ನೊಂದು ಆರೋಪ.

4. 2008 – ಶ್ರೀ ಭಾರತೀ ಗುರುಕುಲಮ್, ಹೊಸನಗರ, ಇಲ್ಲಿ ಪ್ರಾಚಾರ್ಯರಾಗಿದ್ದ ಶ್ರೀ ಜಗದೀಶ ಶರ್ಮರ ಮೇಲೆ ಲೈಂಗಿಕ ಕಿರುಕುಳದ ಆರೋಪ. (ಸಮಗ್ರ ಪೋಲೀಸ್ ತನಿಖೆಯ ನಂತರ ಇದು ಪೂರ್ತಿ  ಸುಳ್ಳು ಆರೋಪ ಎಂದು ಸಾಬೀತಾಗಿರುತ್ತದೆ).

5. 2008 – ಹೊಸಗುಂದ ಪ್ರಕರಣ, ಸಾಗರ ಸಮೀಪದ ಹೊಸಗುಂದ ಎಂಬಲ್ಲಿಯ ಪ್ರಾಚೀನ ಉಮಾಮಹೇಶ್ವರ ದೇವಸ್ಥಾನ ಜೀಣರ್ೋದ್ಧಾರಕ್ಕೆ ಸಿ.ಎಮ್.ಎನ್. ಶಾಸ್ತ್ರಿಯ ಮುಂದಾಳತ್ವದಲ್ಲಿ ಒಂದು ಟ್ರಸ್ಟ್ ರಚನೆ. ಟ್ರಸ್ಟಿಗೆ ಶ್ರೀ ಸಂಸ್ಥಾನದವರನ್ನು ಮುಖ್ಯ ಟ್ರಸ್ಠಿಗಳನ್ನಾಗಿ ನೇಮಕ. ಟ್ರಸ್ಠ್ ಹೆಸರಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ. ಮಠದ ಕಡೆಯಿಂದ ಲೆಕ್ಕ ಪತ್ರ ವಿಚಾರಿಸಿದಾಗ ದೂಷಣೆ. ಸ್ವಾಮಿಜಿಯವರನ್ನು ಕಡೆಗಣಿಸಿ, ಶ್ರೀ ಶೃಂಗೇರಿ ಪೀಠಾಧೀಶರನ್ನು ಅಧ್ಯಕ್ಷರಾಗಿ ಏಕಪಕ್ಷೀಯವಾಗಿ ಆಯ್ಕೆ. ಶ್ರೀ ಮಠದ, ಶ್ರೀ ಸಂಸ್ಥಾನದ ಮೇಲೆ ಇಲ್ಲಸಲ್ಲದ ಆರೋಪ.

6. 12.08.2008 – ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತ ಶ್ರೀ ಮಠಕ್ಕೆ ಹಸ್ತಾಂತರ. ಸದ್ಯದ ಪ್ರಕರಣಗಳಿಗೆಲ್ಲ ಈ ಪ್ರಕ್ರಿಯೆಯೆ ಕಾರಣವೇನೋ? ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನೆಲೆಸಿದ್ದ ಅವ್ಯವಸ್ಥೆ ಅರಾಜಕತೆಯನ್ನೇ ತಮ್ಮ ಆದಾಯದ ಮೂಲವನ್ನಾಗಿಸಿಕೊಂಡಿದ್ದ ಹಿತಾಸಕ್ತಿಗಳಿಗೆ ತೀವ್ರ ಹೊಡೆತ. ಶ್ರೀ ಮಠದ ಶುದ್ಧ ಪಾರದರ್ಶಕ ಆಡಳಿತ ವ್ಯವಸ್ಥೆ ಸಾರ್ವಜನಿಕರಿಂದ, ಭಕ್ತರಿಂದ ಮುಕ್ತ ಪ್ರಶಂಸೆಗೆ ಒಳಗಾಗಿದ್ದು, ಶ್ರೀ ಮಠ ಅಲ್ಲಿ ಪುನರಾರಂಭಿಸಿದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಿಗೆ ದೊರೆತ ಅಭೂತಪೂರ್ವ ಸ್ವಾಗತ, ಇವೆಲ್ಲವುಗಳಿಂದ ದಿಕ್ಕು ತೋಚದ ಗುಂಪು ಗೋಕರ್ಣ ಹಿತ ರಕ್ಷಣಾ ಸಮಿತಿ ಎಂಬ ನೋಂದಾಯಿತವಲ್ಲದ ಸಂಸ್ಥೆಯನ್ನು ಹುಟ್ಟುಹಾಕಿ ಶ್ರೀ ಮಠ ಕೈಗೊಂಡ ಯಾವುದೇ ಧನಾತ್ಮಕ ಕಾರ್ಯಗಳಿಗೆ ಅಡ್ಡಿ ಪಡಿಸುವುದೇ ತಮ್ಮ ಧ್ಯೇಯವಾಗಿಟ್ಟುಕೊಂಡಿದ್ದಾರೆ. ಸದರಿ ಸಂಸ್ಥೆಯ ಕುಕೃತ್ಯಗಳ ವಿರುದ್ದ.

ಅತ್ಯಂತ ಹೇಯ ಕೃತ್ಯಗಳಿಗೂ ಹೇಸದ ಸಂಸ್ಥೆ ಇದರ ಸದಸ್ಯರು ಶ್ರೀ ಮಠದ ಕಾರ್ಯಕರ್ತನೋರ್ವನನ್ನು ಪೆಟ್ರೋಲ್ ಸುರಿದು ಕೊಲೆ ಮಾಡುವ ಪ್ರಯತ್ನವನ್ನು ಮಾಡಿರುತ್ತಾರೆ.

ಶ್ರೀ ಗುರುಗಳನ್ನು ಹೋಲುವ ವ್ಯಕ್ತಿಯೋರ್ವನನ್ನು ಉಪಯೋಗಿಸಿ ಅಶ್ಲೀಲ ವಿಡೀಯೋ ಸಿ.ಡಿ. ತಯಾರಿಕೆಗೆ ಪ್ರಯತ್ನ. ಈ ಪ್ರಯತ್ನ ಇನ್ನೂ ಚಾಲನೆಯಲ್ಲಿದ್ದಾಗಲೇ ಇದರ ಹಿಂದಿದ್ದ ವ್ಯಕ್ತಿಗಳು ಪೋಲೀಸ್ ವಶವಾಗಿ ಪ್ರಕರಣ ದಾಖಲು. ಪೋಲೀಸ್ ಆಪಾದನ ಪತ್ರದ ಪ್ರಕಾರ ಈ ಚಿತ್ರೀಕರಣಕ್ಕಾಗಿ ಕೋಟಿಗಟ್ಟಲೇ ಹಣ ಸುರಿದು ವಿಡಿಯೋ ಚಿತ್ರೀಕರಣದ ಯಂತ್ರೋಪಕರಣದ ಖರೀದಿ ಮಾಡಲಾಗಿತ್ತು. ಇದು ಷಡ್ಯಂತ್ರದ ಹಿಂದಿನ ತೀವ್ರತೆಯನ್ನೂ ಸೂಚಿಸುತ್ತದೆ.

ಭಕ್ತರು, ಶಿಷ್ಯರು ಸಂದಾಯ ಮಾಡಿದ ಇನ್ಷುರೆನ್ಸ್ ಪ್ರೀಮಿಯಂ ಮೌಲ್ಯವನ್ನು ಮುಂದಿಟ್ಟು, ಶ್ರೀ ಗುರುಗಳ ಹೆಸರಿನಲ್ಲಿ ಜಮೀನು ಖರೀದಿಸಿದ ಪ್ರಕ್ರಿಯೆ ಕಾನೂನು ಬಾಹಿರ, ಜಮೀನನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಎಂಬಿತ್ಯಾದಿ ಬೇಡಿಕೆಯನ್ನಿಟ್ಟು ಮಾನ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ  ದಾಖಲೆ. ಈ ಕುಕೃತ್ಯದ ಹಿಂದಿನ ಶಕ್ತಿಗಳಿಗೆ ಇನ್ಷುರೆನ್ಸ್ ಪ್ರೀಮಿಯಂ ಭಕ್ತರು ಕೊಡುತ್ತಿರುವುದು, ಹಾಗೂ ಸದರಿ ಇನ್ಷುರೆನ್ಸ್ನ ಲಾಭ ಮಠಕ್ಕೆ ಸಲ್ಲುವುದು ಹೊರತಾಗಿ ಶ್ರೀಗಳಿಗಲ್ಲ ಎಂಬ ಸತ್ಯವನ್ನು ಅರಿಯುವ ಶಕ್ತಿ ಇಲ್ಲವೇ ಅಥವಾ ಅರಿತು ಅರಿಯದಂತಿರುವ ಪ್ರಯತ್ನವೇ?

ಆದಿ ಗೋಕರ್ಣ ಪುನರ್ನಿರ್ಮಾಣ ಕಾರ್ಯಕ್ಕೆ ತಡೆಯ ಪ್ರಯತ್ನ. ಆದಿ ಗೋಕರ್ಣ ದೇವಾಲಯದ ಕಟ್ಟಡ ಪೂರ್ತಿ ಶಿಥಿಲವಾಗಿದ್ದು ಇದು ಕೂಡಲೇ ಪುನರ್ನಿರ್ಮಾಣ ಆಗತಕ್ಕದ್ದು ಎಂಬುದಾಗಿ ಪುರಾತತ್ವ ಇಲಾಖೆ ಅಭಿಪ್ರಾಯಿಸಿದ್ದು, ಅದರಂತೆ ಪುನರ್ನಿರ್ಮಾಣ ಕಾರ್ಯ ಶ್ರೀ ಮಠದ ಆಡಳಿತದ ಉಸ್ತುವಾರಿಯಲ್ಲಿ ಕೈಗೊಂಡಾಗ, ಕಟ್ಟಡದ ಅಡಿಯಲ್ಲಿರುವ ನಿಧಿ ಸಂಗ್ರಹಕ್ಕಾಗಿ ಅಗೆಯುತ್ತಿದ್ದಾರೆ ಎಂಬ ಶುದ್ಧ ಸುಳ್ಳು ಆರೋಪವನ್ನು ಹೊರಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲು. ಮೇಲ್ನೋಟಕ್ಕೆ ಪಿರ್ಯಾದುದಾರರ ಆರೋಪ ಸುಳ್ಳೆಂದು ಮನಗಂಡ ನ್ಯಾಯಾಲಯ ಯಾವುದೇ ತಡೆ ಆಜ್ಞೆ ನೀಡಲು ನಿರಾಕರಿಸಿದ್ದು, ಜೀರ್ಣೋದ್ಧಾರದ ಕಾರ್ಯ ಸುಲಲಿತವಾಗಿ ಮುಂದುವರಿದಿರುತ್ತದೆ.

ಸಿನಿಮಾ ನಟಿ ಮಲ್ಲಿಕಾ ಶೇರಾವತ್ ಎಲ್ಲರಂತೆ ಗೋಕರ್ಣದಲ್ಲಿ ಶ್ರೀಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಘಟನೆ ಹಾಗೂ ಛಾಯಾಚಿತ್ರಗಳನ್ನು ದುರುಪಯೋಗ ಪಡಿಸಿ ಶ್ರೀಗಳ ಮೇಲೆ ಅಸಹ್ಯವಾದ ಆಪಾದನೆ.

22.02.2014 – ಗೋಕರ್ಣ ರಥೋತ್ಸವ ಸಂದರ್ಭದಲ್ಲಿ ಸಂಶಯಾಸ್ಪದ ರೀತಿಯಲ್ಲಿ ರಥದ ಗಾಲಿ ಕಳಚಿ ಭಾರಿ ದುರ್ಘಟನೆ ಸಂಭವಿಸುವ ಸಾಧ್ಯತೆ. ಮೇಲ್ನೋಟಕ್ಕೆ ಕಂಡು ಬರುವಂತೆ ತಾನಾಗಿ ಗಾಲಿ ಕಳಚುವ ಯಾವುದೇ ಸಾಧ್ಯತೆ ಇಲ್ಲವೆಂದು ಸಂಬಂಧಿಸಿದ ಅಭಿಯಂತರರಿಂದ ಅಭಿಪ್ರಾಯ. ಅಂದರೆ ಇದರ ಹಿಂದೆ ಮಾನವ ದುಃಶಕ್ತಿಯ ಕೈವಾಡ ಇರುವುದು ಶತಃಸಿದ್ಧ. ಗಾಲಿ ಕಳಚಿದ ಮರುಕ್ಷಣದಲ್ಲಿ ಈ ಘಟನೆ ಮೊದಲೇ ತಿಳಿದಿತ್ತೋ ಎಂಬಂತೆ ಆತಂಕ ಸೃಷ್ಟಿಸಲು ಒಂದು ಗುಂಪು ಜನ ತಯಾರಿದ್ದರು. ಇದರಲ್ಲಿ ಮೇಲೆ ಹೆಸರಿಸಿದ ಗೋಕರ್ಣ ಹಿತರಕ್ಷಣಾ ಸಮಿತಿಯ ಸದಸ್ಯರು ಭಾಗಿಯಾಗಿದ್ದರು.

ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನ್ನದಾನಕ್ಕೆ ತಾತ್ಕಾಲಿಕ ಸ್ಥಳದ ವ್ಯವಸ್ಥೆ ಮಾಡಿದಾಗ ಗೋಕರ್ಣ ಹಿತ ರಕ್ಷಣಾ ಸಮಿತಿಯ ಸದಸ್ಯನು ಉಚ್ಛನ್ಯಾಯಾಲಯದಲ್ಲಿ ರಿಟ್ ಅರ್ಜಿ  ಸಲ್ಲಿಸಿ ಇದಕ್ಕೆ ಶಾಶ್ವತ ನಿರ್ಮಿತಿಗಳನ್ನು ನಿರ್ಮಾಣ ಮಾಡದಂತೆ ಸಾಧಾರಣ ತಾಂತ್ರಿಕ ಅಂಶವನ್ನು ವೈಭವೀಕರಿಸಿ ವಾದಿಸಿ, ಅಲ್ಲಿಯ ಅಭಿವೃದ್ಧಿ ಈ ರೀತಿಯಾಗಿ ಕುಂಠಿತಗೊಳಿಸುವ ದುರಾಲೋಚನೆ.
ಹೀಗಿದ್ದಾಗಿಯೂ ಇಂದಿನ ವರೆಗೂ ಇರುವುದರಲ್ಲೇ ಯಾವುದೇ ಭಂಗಬಾರದಂತೆ ಅನ್ನದಾನ ಸೇವೆಯನ್ನು ಅಲ್ಲಿಯ ಆಡಳಿತವು ಮುಂದುವರಿಸಿಕೊಂಡು ಬಂದಿರುತ್ತದೆ.

ಶ್ರೀ ಮಠದ ಆರ್ಥಿಕ ವ್ಯವಹಾರ ಕಾನೂನುಬಾಹಿರ ಎಂಬುದಾಗಿ ದೂರಿ, ಸಿ.ಬಿ.ಐ. ತನಿಖೆಗೆ ಆಗ್ರಹಿಸಿ ಮಾನ್ಯ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ  ದಾಖಲು. ಈ ಅರ್ಜಿಯಲ್ಲಿ ಅಸ್ತ್ರ ಎಂಬ ಸಂಸ್ಥೆ ಹಾಗೂ ಗೋಕರ್ಣ ಹಿತರಕ್ಷಣಾ ಸಮಿತಿ ಅರ್ಜಿದಾರರು. ಅಸ್ತ್ರ ಸಂಸ್ಥೆಯ ಸಂಸ್ಥಾಪಕ ಪ್ರತಿನಿಧಿ ಚಂದನ ಎಂ.ಸಿ. ಎಂಬಾತ. ಸದರಿ ಅರ್ಜಿಯನ್ನು ದಾಖಲಿಸಿದ ನಂತರ, ಅದು ನ್ಯಾಯಾಲಯದ ಮುಂದೆ ತಿಂಗಳುಗಟ್ಟಲೇ ವಿಚಾರಣೆಗೆ ಬಾರದಂತೆ ವ್ಯವಸ್ಥೆ ಮಾಡಿ, ಈ ಮಧ್ಯೆ ಮಠದ ಪ್ರತಿನಿಧಿಗಳಿಗೆ ದೂರವಾಣಿ ಕರೆ ಮಾಡಿ ಸದರಿ ಅರ್ಜಿಯನ್ನು ಉಲ್ಲೇಖಿಸಿ ಬೆದರಿಕೆ, ಹತ್ತು ಕೋಟಿ ಹಣವನ್ನು ಶ್ರೀಮಠ ಅರ್ಜಿ ದಾರರಿಗೆ ಕೊಟ್ಟಲ್ಲಿ ಅರ್ಜಿ  ವಾಪಾಸ್ ಪಡೆಯುವುದಾಗಿ ಆಶ್ವಾಸನೆ. ಮಠದ ಕಾರ್ಯಕರ್ತರು ಈ ವಿಚಾರವನ್ನು ಪೋಲೀಸ್ ಗಮನಕ್ಕೆ ತಂದು ಪೋಲೀಸ್ ನಿರ್ದೇಶನದಂತೆ ಕಾರ್ಯತಂತ್ರ ಹೆಣೆದು, ಅರ್ಜಿದಾರರಿಗೆ ಅವರ ಬೇಡಿಕೆಯ ಒಂದಂಶವನ್ನು ಕೊಡುವಂತೆ ನಟಿಸಿ ಸದರಿ ಅರ್ಜಿದಾರರು ಅಂದರೆ ಚಂದನ್ ಮತ್ತು ಇನ್ನೊಬ್ಬ ಮಲ್ಲಿಕಾರ್ಜುನ ಪಾಟೀಲ್, (ಮಧ್ಯವರ್ತಿ  ವಕೀಲ), ಹಣ ಪಡೆಯುತ್ತಿದ್ದಾಗಲೇ ಪೋಲೀಸ್ ವಶ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು. ಕೊನೆಗೂ ಸದರಿ ರಿಟ್ ಅರ್ಜಿ  ನ್ಯಾಯಾಲಯದ ಮುಂದೆ ಬಂದಾಗ
ಅರ್ಜಿ ದಾರರು ಹಾಗೂ ಅವರ ವಕೀಲರು ಗೈರು ಹಾಜರು. ಇದನ್ನು ಗಮನಿಸಿದ ನ್ಯಾಯಾಲಯ ಅರ್ಜಿದಾರರ ವಕೀಲ ಹಾಜರಿರಬೇಕೆಂದು ತಾಕೀತು. ಮುಂದಿನ ವಿಚಾರಣೆಯಂದು ವಕೀಲ ಹಾಜರಾಗಿ ಅರ್ಜಿಯನ್ನು ವಾಪಸ್ ಪಡೆಯಲು ಮನವಿ. ಆದರೆ ಪ್ರಕರಣದ ಸೂಕ್ಷ್ಮತೆಯನ್ನು ಅರಿತ ನ್ಯಾಯಾಲಯ ಅರ್ಜಿಯನ್ನು ವಾಪಸ್ ಪಡೆಯುವ ಬೇಡಿಕೆಯನ್ನು ತಿರಸ್ಕರಿಸಿ ಅರ್ಜಿದಾರರ ಮೇಲೆ ಒಂದು ಲಕ್ಷ ರೂಪಾಯಿಯ ದಂಡ ವಿಧಿಸಿ ಅರ್ಜಿ ದಾರರಾಗಲಿ, ಅರ್ಜಿದಾರರ ವಕೀಲರಾಗಲಿ ಇನ್ನು ಮುಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ  ದಾಖಲಿಸಿದಂತೆ ಹಾಗೂ ವಕಾಲತ್ತು ವಹಿಸದಂತೆ ತಾಕೀತು ಮಾಡಿರುತ್ತದೆ. ಈ ಪ್ರಕರಣಕ್ಕೂ ಹಿಂದೆ ಗೋಕರ್ಣ ಹಿತರಕ್ಷಣಾ ಸಮಿತಿಯ ಸದಸ್ಯರಿಂದ ಗೋಕರ್ಣ ದೇವೆಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿ ಹಕ್ಕು ಕಾಯಿದೆ ಅರ್ಜಿ  ದಾಖಲು. ಸದರಿ ಅರ್ಜಿಗಳಲ್ಲಿ ಮೇಲೆ ಹೇಳಿದ ಚಂದನ್ ಯಾ ರಿಟ್ ಅರ್ಜಿಯಲ್ಲಿ ಹಾಜರಾಗಿದ್ದ ವಕೀಲನೇ ಅರ್ಜಿದಾರರ ಪರವಾಗಿ ಹಾಜರಾಗಿದ್ದರು. ಯಾವುದೇ ಅರ್ಜಿಯಲ್ಲಿ ಅವರಿಗೆ ಜಯ ಸಿಗಲಿಲ್ಲ.

ಬ್ಲಾಕ್ಮೇಲ್ ಪ್ರಕರಣದ ಸಹ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿದ ವಿಚಾರಣೆಗೆ ಆರೋಪಿಗಳ ಪರ ಹಾಜರಾದ ಹಿರಿಯ ನ್ಯಾಯಾವಾದಿಯು
ತೆರೆದ ನ್ಯಾಯಾಲಯದಲ್ಲಿ ಪಿರ್ಯಾದುದಾರರ ಪರ ಹಾಜರಾದ ನ್ಯಾಯವಾದಿಗಳನ್ನು ಉದ್ದೇಶಿಸಿ ನಿನ್ನನ್ನೂ ಗೊತ್ತು, ನಿನ್ನ ಸ್ವಾಮಿಯನ್ನೂ ಗೊತ್ತು. ನಿನ್ನ ಸ್ವಾಮಿ ಕಾವಿ ಕಳಚಿ ಇಟ್ಟು ಹೋಗುವ ಹಾಗೆ ಮಾಡುತ್ತೇನೆ . ಎಂದು ಹೆದರಿಸಿರುವುದು ಈ ಮಾತುಗಳಿಂದ,ಅವರ ಉದ್ದೇಶ ಸ್ಪಷ್ಟ.

7. ರಾಮಕಥಾ ಕಲಾವಿದರಿಗೆ ಬೆದರಿಕೆ ಮತ್ತು ಬ್ಲಾಕ್ ಮೇಲ್ ಪ್ರಕರಣ ಶ್ರೀಗಳು ಪ್ರವಚನ ನೀಡುತ್ತಿದ್ದ ರಾಮಕಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕಲಾವಿದರಿಗೆ ದಿವಾಕರ ಶಾಸ್ತ್ರಿ ಯಾ ಅವನ ಕಡೆಯವರಿಂದ ದೂರವಾಣಿ ಬೆದರಿಕೆ. ರಾಮಕಥಾ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಒತ್ತಡ. ಹಾಗೇಯೇ ಶ್ರೀ ಗಳ ವಿರುದ್ಧ ಹೇಳಿಕೆ ನೀಡುವಂತೆ ಬೇಡಿಕೆ. ಇದಕ್ಕೆ ತಪ್ಪಿದಲ್ಲಿ ಶ್ರೀಗಳ ವಿರುದ್ಧ ಅತ್ಯಾಚಾರ ಇತ್ಯಾದಿ ಆರೋಪ ಹೊರಿಸಿ ದೂರದರ್ಶನ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಬೆದರಿಕೆ. ಬೇಡಿಕೆಗಳಿಗೆ ಸ್ಪಂದಿಸಿದಲ್ಲಿ ಆರ್ಥಿಕ ಸವಲತ್ತುಗಳನ್ನು ಒದಗಿಸುವುದಾಗಿ ಆಮಿಷ. ಹಾಗೆಯೇ ಶ್ರೀ ಮಠದ ಇನ್ನುಳಿದ ಕಾರ್ಯಕರ್ತರಿಗೂ ಇದೇ ರೀತಿಯ ದೂರವಾಣಿ ಕರೆ. ದೂರವಾಣಿ ಕರೆ ಸ್ವೀಕರಿಸಿದ ಕಲಾವಿದರು ಮತ್ತು ಕಾರ್ಯಕರ್ತರಿಂದ ಸಂಬಂಧಿಸಿದ ಪೋಲೀಸ್ ಠಾಣೆಯಲ್ಲಿ ದೂರು ದಾಖಲು. ದಿವಾಕರ ಶಾಸ್ತ್ರಿ ಮತ್ತು ಆತನ ಪತ್ನಿ ಪ್ರೇಮಲತಾ ಬಂಧನ. ತದನಂತರ ಪ್ರೇಮಲತಾಳ ಮಗಳಕಡೆಯಿಂದ ಶ್ರೀಗಳು ತನ್ನ ತಾಯಿಯನ್ನು ಅತ್ಯಾಚಾರ ಮಾಡಿರುತ್ತಾರೆ ಎಂಬ ಪಿರ್ಯಾದಿ. ಪ್ರೇಮಲತಾಳಿಂದ ನ್ಯಾಯಾಲಯಕ್ಕೆ ಅಪೂರ್ಣ ಬೆರಳಚ್ಚು ಮಾಡಿ ತಯಾರು ಇಟ್ಟಿದ್ದ ಪಿ ಪಿರ್ಯದಿಯ ಸಲ್ಲಿಕೆ. ನಂಬಲರ್ಹ ಮೂಲಗಳಂತೆ, ಇದಾದ ಮೇಲೂ ನ್ಯಾಯಾಲಯದ ಮುಂದೆ ಹಲವು ಬಾರಿ ಹಲವು ರೀತಿಯ ಹೇಳಿಕೆ ಸಲ್ಲಿಕೆ. ಪ್ರಕರಣ ಪೂರ್ತಿ ಸುಳ್ಳಾಗಿದ್ದರೂ, ಕಾನೂನು ಪ್ರಕ್ರಿಯೇ ಚಾಲ್ತಿಯಲ್ಲಿದೆ.

8. ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಗಳ ಬಗ್ಗೆ,ಮಠದ ಬಗ್ಗೆ ಅತೀ ಕೀಳುಮಟ್ಟದ ಅಪಪ್ರಚಾರ.

9. ತಪ್ಪು ಮಾಹಿತಿ ನೀಡುವ ಪತ್ರ. ಮತ್ತು ಪುಸ್ತಕಗಳನ್ನು ಸಮಾಜದಲ್ಲಿ ವಿತರಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ.

10. ಮುಜರಾಯಿ ಇಲಾಖೆಯ ಆಡಳಿತಕೊಳಪಟ್ಟ ಉಪ್ಪಿನಂಗಡಿ, ಕೊಡನಕಟ್ಟೆ, ಕೊಲ್ಲೂರು ಇತ್ಯಾದಿ, ದೇವಸ್ಥಾನಗಳಿಗೆ ಶ್ರೀಗಳು ಹೋಗದಂತೆ ಇಲ್ಲಸಲ್ಲದ ಅರ್ಜಿ  ಸಲ್ಲಿಸಿ ಇಲಾಖೆಯ ಮೇಲೆ ಒತ್ತಡ ತಂದರು.

11. ಪರಿಸ್ಥಿತಿ ಹೀಗಿರುತ್ತಾ ದಿನಾಂಕ:29/08/2015 ರಂದು ಸಂತ್ರಸ್ತೆ ಎಂದು ಇನ್ನೋರ್ವ ಮಹಿಳೆಯಿಂದ ಶ್ರೀಗುರುಗಳ ಮೇಲೆ ಇನ್ನೊಂದು ಅತ್ಯಾಚಾರದ ಪಿರ್ಯಾದಿ ದಾಖಲು. ಮೇಲ್ನೋಟಕ್ಕೆ ನಂಬಲಸಾಧ್ಯವಾದ ಈ ಪಿರ್ಯಾದಿಯಲ್ಲಿ ಇಸವಿ 2006ರಲ್ಲಿ ಒಂದು ಬಾರಿ ಹಾಗೂ ಇಸವಿ 2012ರಲ್ಲಿ ಇನ್ನೊಂದು ಬಾರಿ ಶ್ರೀಗುರುಗಳು ತನ್ನ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ದೂರಿರುತ್ತಾಳೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಈ ಪಿರ್ಯಾದಿ ದಾಖಲಿಸಿದ ಸಂತ್ರಸ್ತೆ , ಪ್ರೇಮಲತಾ ದಾಖಲಿಸಿದ್ದ ಪಿರ್ಯಾದಿಯ ತನಿಖೆ ಸಂದರ್ಭದಲ್ಲಿ ಸಿ.ಐ.ಡಿ.ಮುಂದೆ ಒಬ್ಬಾಕೆ ಸಾಕ್ಷಿಯಾಗಿ ಹಾಜರಾಗಿದ್ದಳು.

ಅವಳ ಹೇಳಿಕೆಯನ್ನು ದಾಖಲಿಸಿಕೊಂಡ ಸಿ.ಐ.ಡಿ. ಅಧಿಕಾರಿಗಳು, ಪ್ರೇಮಲತಾ ಪಿರ್ಯಾದಿಯ ತನಿಖೆಯನ್ನು ಮುಂದುವರಿಸಿಕೊಂಡು ಹೋಗಿರುತ್ತಾರೆ, ಹೊರತಾಗಿ ಇನ್ನಾವುದೇ ಪ್ರತ್ಯೇಕ ಪ್ರಕರಣ, ತನಿಖೆ ಮಾಡಿರುವುದಿಲ್ಲ. ಅಂದರೆ ಸಾಕ್ಷಿ ಹೇಳುವ ಸಂದರ್ಭದಲ್ಲಿ ತನ್ನ ದಿನಾಂಕ:29/08/2015 ರ ಪಿರ್ಯಾದಿಯಲ್ಲಿ ಹೇಳಿರುವ ಯಾವುದೇ ಅಂಶಗಳನ್ನು ಸಿ.ಐ.ಡಿ. ಗಮನಕ್ಕೆ ತಂದಿರುವುದಿಲ್ಲ ಎಂಬುವುದು ಸ್ಪಷ್ಟ. ಹಾಗೆಯೇ ಆಕೆಯ ಪಿರ್ಯಾದಿ ಇನ್ಯಾವುದೋ ಉದ್ದೇಶಕ್ಕೆ ಕೊಟ್ಟಿರುವುದು ಎಂಬುವುದೂ ಸ್ಪಷ್ಟ.

ಹಿಂದಿನ ಅತ್ಯಾಚಾರ ಪ್ರಕರಣ ಹಾಗೂ ಪ್ರಸ್ತುತ ಪ್ರಕರಣ ಎರಡೂ ಶ್ರೀಗುರುಗಳು ಚಾತುರ್ಮಾಸ್ಯ ವ್ರತದಲ್ಲಿದ್ದಾಗಲೇ ದಾಖಲಾಗಿರುವುದು ಗಮನಿಸಬೇಕಾದ ಅಂಶ. ಈ ಪ್ರಕರಣಗಳ ಹಿಂದಿನ ಕಾಣದ ಕೈಗಳಿಗೆ ಶ್ರೀಗುರುಗಳ ಚತುರ್ಮಾಸ್ಯಕ್ಕೆ ಭಂಗ ತರುವುದೇ ಉದ್ದೇಶ ಎಂಬುವುದು ನಿಜವಾದ ಅಂಶ. ಈ ಮೂಲಕ ಶ್ರೀಗುರುಗಳು ಪೀಠದಲ್ಲಿ ಮುಂದುವರಿಯುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂಬ ವಾದವನ್ನು ಮುಂದಿಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡುಬರುತ್ತದೆ.

ಶ್ರೀ ಗುರುಗಳು ಪೀಠತ್ಯಾಗ ಮಾಡಬೇಕೆಂಬುವುದು ಒಂದು ಗುಂಪು ಜನರ ಬಹಳ ಹಿಂದಿನ ಬೇಡಿಕೆ. ಅವಕಾಶ ಇದ್ದಲ್ಲಿ ಎಲ್ಲಾ ಈ ಬೇಡಿಕೆ ಮೇಲೆದ್ದು ಬರುವುದು ಪ್ರತ್ಯಕ್ಷ. ಪ್ರೇಮಲತಾ ಪ್ರಕರಣದಲ್ಲೂ, ಅತ್ಯಂತ ಗಂಭಿರ ಆರೋಪ ಹೊರಿಸಿದ ಪ್ರೇಮಲತಾ ದಂಪತಿ ಪೀಠ ತ್ಯಾಗವೇ ತಮ್ಮ ಪ್ರಮುಖ ಹಾಗೂ ಬೇಡಿಕೆ ಎಂದು ಸಾರಾಸಗಟು ಟಿ.ವಿ. ಮಾಧ್ಯಮದಲ್ಲಿ ಹೇಳಿಕೊಂಡಿರುವುದನ್ನು ಇಲ್ಲಿ ಗಮನಿಸಬಹುದು. ಅದೇರೀತಿ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ, ಸೂಕ್ಷ್ಮ ಅವಲೋಕನಕ್ಕೆ ತಿಳಿದು ಬರುವ ವಿಚಾರ, ಸದರಿ ಪಿರ್ಯಾದಿಗಳು, ತದ ನಂತರದ ಇಲಾಖಾ ಮಟ್ಟದ ಅಥವಾ ನ್ಯಾಯಾಲಯಗಳ ಹೋರಾಟದ ಪ್ರಖರತೆ, ಇದು ಕೇವಲ ಒಬ್ಬಾಕೆ ಅಥವಾ ಅವಳ ಕುಟುಂಬ ನಡೆಸುತ್ತಿರುವ ಹೋರಾಟವಲ್ಲ ಬದಲಿಗೆ ಇದರ ಹಿಂದೆ ಸಶಕ್ತ ವ್ಯಕ್ತಿ ಯಾ ಸಂಸ್ಥೆ ಯಾ ಕೈವಾಡವಿರುವುದು ಸ್ಪಷ್ಟ.
ಶ್ರೀ ಮಠದ, ಶ್ರೀ ಗುರುಗಳ ವಿರುದ್ಧ ದಾಖಲಾಗಿರುವ ಅಥವಾ ದಾಖಲಾಗುತ್ತಿರುವ ಎಲ್ಲಾ ಪ್ರಕರಣಗಳಲ್ಲೂ ಅಂದರೆ, ಗೋಕರ್ಣ ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಿಂದ ಹಿಡಿದು, ಅಸ್ತ್ರ ಎಂಬ ಸಂಸ್ಥೆ ದಾಖಲಿಸಿದ ಪ್ರಕರಣಗಳ ವರೆಗೂ, ತದನಂತರವೂ ಒಬ್ಬರೇ ವಕೀಲರು ಹಾಜರಾಗುತ್ತಿದ್ದಾರೆ. ಅಂದರೆ ಎಲ್ಲವುಗಳ ಹಿಂದಿನ ಕೈ ಒಂದೇ. ಈ ಎಲ್ಲಾ ಪ್ರಕರಣಗಳನ್ನು ಅವಲೋಕಿಸಿದರೆ, ಇವುಗಳೆಲ್ಲ ಒಂದೇ ಉದ್ದೇಶದಿಂದ ಕೈಗೊಂಡ ದುಷ್ಕೃತ್ಯಗಳು ಎಂಬುದು ಸರ್ವವಿದಿತ. ಆದುದರಿಂದ ಸಮಾಜದ ಹಿತದೃಷ್ಠಿಯಿಂದ, ಶ್ರೀ ಮಠದ ಒಳಿತಿನ ದೃಷ್ಠಿಯಿಂದ ಈ ಘಟನೆಗಳ ಹಿಂದಿರುವ ಕೈವಾಡ ಯಾರದು, ಯಾಕೆ ? ಎಂದು ತನಿಖೆ ಮಾಡಬೇಕಾಗಿ ವಿನಂತಿಸಿದ್ದಾರೆ.

ವರದಿ, ಚಿತ್ರ: ತಿರುಮಲೇಶ್ ಬೆಳ್ಳೂರು

 

By suddi9

Leave a Reply

Your email address will not be published. Required fields are marked *