ಬಂಟ್ವಾಳ: ಜೀವನದಿ ನೇತ್ರಾವತಿಯನ್ನು ಬತ್ತಿಸುವ ಎತ್ತಿನಹೊಳೆ ಯೋಜನೆ ವಿರೋಧಿಸಿ ಬೆಳ್ತಂಗಡಿ ತಾಲೂಕು ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕರ ಒಕ್ಕೂಟದ ವತಿಯಿಂದ ಬುಧವಾರ ನೀಡಲಾದ ಬಂದ್ ಕರೆಗೆ ಪುಂಜಾಲಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಸ್ವಯಂಪ್ರೇರಿತ ಸಂಪೂರ್ಣ ಬಂದ್ ಆಚರಿಸಲಾಯಿತು.


ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದೆ ಸಹಕರಿಸಿದರು. ಅಟೋರಿಕ್ಷಾಗಳು ಕೂಡಾ ರಸ್ತೆಗಿಳಿಯಲಿಲ್ಲ. ಪ್ರಾಥಮಿಕ, ಪ್ರೌಢ, ಪ.ಪೂ. ಮತ್ತು ಪದವಿ ಕಾಲೇಜುಗಳು ವಿದ್ಯಾರ್ಥಿಗಳ ಗೈರುಹಾಜರಿಯ ಹಿನ್ನೆಲೆಯಲ್ಲಿ ಬಂದ್ ಆಚರಿಸಿದ್ದವು. ಪುಂಜಾಲಕಟ್ಟೆ ಬೆಳ್ತಂಗಡಿ ತಾಲೂಕು ಮತ್ತು ಬಂಟ್ವಾಳ ತಾಲೂಕುಗಳ ಗಡಿಭಾಗವಾದರೂ ಬಂಟ್ವಾಳ ತಾಲೂಕಿಗೆ ಸಂಬಂಧಿಸಿದ ಪುಂಜಾಲಕಟ್ಟೆ ಪೇಟೆಯ ಅಂಗಡಿ ಮುಂಗಟ್ಟುಗಳು ಕೂಡಾ ಬಂದ್ ಆಚರಿಸಿ ಪ್ರತಿಭಟನೆಗೆ ಸಹಕಾರ ನೀಡಿದ್ದರು. ಪೇಟೆಯಲ್ಲಿ ಜನಸಂಚಾರ ವಿರಳವಾಗಿತ್ತು. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್, ಮೆಡಿಕಲ್ ಬಂದ್ನಿಂದ ವಿನಾಯಿತಿ ಪಡೆದಿದ್ದವು.
ಮೂಡಬಿದಿರೆ , ನಾರಾವಿ ಕಡೆಯಿಂದ ಬರುವ ಖಾಸಗಿ ಬಸ್ಗಳು ಪುಂಜಾಲಕಟ್ಟೆಗೆ ಬಾರದೆ ಮೂರ್ಜೆಯಲ್ಲಿ ಬಸ್ ತಿರುಗಿಸಿ ಸಂಚಾರ ನಡೆಸಿದ್ದವು.ಮಂಗಳೂರು-ಧರ್ಮಸ್ಥಳ ನಡುವೆ ಓಡಾಡುತ್ತಿರುವ ಸರಕಾರಿ ಬಸ್ಸ್ ಗ ಳು ಪುಂಜಾಲಕಟ್ಟೆಯಲ್ಲಿ ಹಿಂತಿರುಗಿ ಮಂಗಳೂರಿಗೆ ತೆರಳುತ್ತಿದ್ದವು.