ಬಜ್ಪೆ: ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ-169 ಅಗಲೀಕರಣಗೊಳ್ಳಿದ್ದು ಇದಕ್ಕೆ ಪೂರಕವೆಂಬಂತೆ ಈ ರಸ್ತೆ ಹಾದುಹೋಗುವ ಗುರುಪುರ ಕೈಕಂಬದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಕೆಲವೊಂದು ಕಡೆ ಗುರುತು ಹಾಕಲಾಗಿದೆ. ಆದರೆ ಸಮೀಕ್ಷೆ ನಡೆಸಿದವರು ಗುರುಪುರ ಕೈಕಂಬದ ಕೆಲವೊಂದು ಬಹುಮಹಡಿ ಕಟ್ಟಡದ ಒಳಗಡೆ ಗುರುತು ಹಾಕಿಕೊಂಡಿರುವುದರಿಂದ ಕಟ್ಟಡ ಮಾಲಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಕೈಕಂಬದ ಕಟ್ಟಡವೊಂದರಲ್ಲಿ ಹಾಕಲಾದ ಗುರುತು

20 ಬಜ್ಪೆ 2: ಗುರುತು ಹಾಕಿದ ಕಟ್ಟಡ

ಈ ಹಿಂದೆ ರಾ.ಹೆ 13 ಆಗಿದ್ದ ಇದನ್ನು ರಾ.ಹೆ. 169 ಆಗಿ ಮರುನಾಮಕರಣ ಮಾಡಲಾಗಿದೆ. ಈ ರಸ್ತೆಯನ್ನು ಚತುಷ್ಪತಗೊಳಿಸಬೇಕೆಂಬ ಪ್ರಯತ್ನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳದ ಸಮೀಕ್ಷೆ ನಡೆಸಿ ಗುರುತು ಹಾಕುವ ಕಾರ್ಯ ನಡೆದಿದೆ ಎನ್ನಲಾಗಿದೆ.
ಆದರೆ ಅಚ್ಚರಿಯ ವಿಚಾರವೆಂದರೆ ಸಮೀಕ್ಷೆ ನಡೆಸಿದವರು ಗುರುಪುರ ಕೈಕಂಬದ ಹಲವು ಕಟ್ಟಡಗಳ ಒಳಗಡೆ ಗುರುತು ಹಾಕಿ ಹೋಗಿದ್ದಾರೆ. ಒಂದು ವೇಳೆ ಹೆದ್ದಾರಿ ಅಗಲೀಕರಣಗೊಳ್ಳುವಾಗ ಈ ಕಟ್ಟಡಗಳನ್ನು ಉರುಳಿಸಬಹುದೇ ಎಂಬ ಆತಂಕ ಕಟ್ಟಡ ಮಾಲಿಕರದ್ದಾಗಿದೆ.
ಒಟ್ಟಿನಲ್ಲಿ ಸಮೀಕ್ಷೆಗಾರರು ಏಕಾಏಕಿ ಬಂದು ಕಟ್ಟಡದ ಒಳಗಡೆ ಗರುತು ಹಾಕಿ ಹೋಗಿರುವುದರಿಂದ ಈ ಘಟನೆ ಸಾಕಷ್ಟು ಕುತೂಹಲಕ್ಕೂ, ಆತಂಕಕ್ಕೂ ಕಾರಣವಾಗಿದೆ.