ಮೂಡುಬಿದಿರೆ: ದ.ಕ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಕೋಮುಘರ್ಷಣೆಗಳು ಜನಸಾಮಾನ್ಯರ ಜೀವನದಲ್ಲಿ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಎರಡೂ ಕೋಮುಗಳ ಕೆಲವು ಸಂಘಟನೆಗಳು ಕಾರಣವಾಗಿದ್ದು, ಸಾರ್ವಜನಿಕ ಸಮಾವೇಶಗಳಿಗೆ ಸೂಕ್ಷ್ಮ ಪ್ರದೇಶದಲ್ಲಿ ಅನುಮತಿ ಕೊಟ್ಟಿರುವುದು ಈ ಘಟನೆಯ ಹಿಂದಿರುವ ಕಾರಣ ಎಂದು ಜೆಡಿಎಸ್ ರಾಜ್ಯ ಮುಖಂಡ ತೋಡಾರು ದಿವಾಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಠಾಧಿಪತಿಗಳು, ಸ್ವಾಮೀಜಿಗಳು, ಉಳಿದ ಧಾರ್ಮಿಕ ಮುಖಂಡರು ಕರಾವಳಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಶಾಂತಿಯನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ./ದ.ಕ. ಜಿಲ್ಲೆಯಲ್ಲಿ ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಕೋಮುಘರ್ಷಣೆಗಳು ಜನಸಾಮಾನ್ಯರ ಜೀವನದಲ್ಲಿ ಬಹಳ ವ್ಯತಿರಿಕ್ತ ಪರಿಣಾಮ ಬೀರಿದೆ. ಇದಕ್ಕೆ ಎರಡೂ ಕೋಮುಗಳ ಕೆಲವು ಸಂಘಟನೆಗಳು ಕಾರಣವಾಗಿದ್ದು, ಸಾರ್ವಜನಿಕ ಸಮಾವೇಶಗಳಿಗೆ ಸೂಕ್ಷ್ಮ ಪ್ರದೇಶದಲ್ಲಿ ಅನುಮತಿ ಕೊಟ್ಟಿರುವುದು ಈ ಘಟನೆಯ ಹಿಂದಿರುವ ಕಾರಣ ಎಂದು ದಿವಾಕರ ಶೆಟ್ಟಿ ತಿಳಿಸಿದರು.

‘ನಾನೊಬ್ಬ ರಾಜಕೀಯ ಮುಖಂಡನಾಗಿ ಈ ಮಾತನ್ನು ರಾಜಕೀಯ ಉದ್ದೇಶಕ್ಕಾಗಿ ಹೇಳುತ್ತಿಲ್ಲ. ಮೂಡುಬಿದಿರೆ ಹಾಗೂ ಜಿಲ್ಲೆಯ ಎಲ್ಲ ನಾಗರಿಕರ ಹಿತಕ್ಕಾಗಿ ನಾವು ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ಇದಕ್ಕೆ ಆಯಾ ಪ್ರದೇಶಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕಾರ ನೀಡಿದರೆ ಕೋಮು ಸಾಮರಸ್ಯ ಮರಳಿ ಸ್ಥಾಪಿಸಬಹುದು’ ಎಂದರು.
‘ಮೂಡುಬಿದಿರೆಯಲ್ಲಿ ಕಳೆದ ತಿಂಗಳು ನಡೆದ ಅಹಿತಕರ ಘಟನೆಗಳಿಗೆ ಇಲ್ಲಿನ ರಾಜೀವ್ ಗಾಂಧಿ ಕಾಂಪ್ಲೆಕ್ಸ್ನ ಎದುರು ಎರಡು ಕೋಮಿನ ಸಂಘಟನೆಗಳಿಗೆ ಸಮಾವೇಶಕ್ಕೆ ಅವಕಾಶ ಕೊಟ್ಟಿರುವುದು ಕಾರಣ. ಈ ಎರಡೂ ಸಮಾವೇಶಗಳ ಸಂದರ್ಭ ಪರಸ್ಪರ ಕೋಮು ಭಾವನೆಯನ್ನು ಕೆರಳಿಸುವಂತಹ ಘಟನೆ ನಡೆದಿದ್ದು, ಇದಕ್ಕೆ ಪೊಲೀಸರು ಹಾಗೂ ಸ್ಥಳೀಯಾಡಳಿತ ಅವಕಾಶ ನೀಡಬಾರದಿತ್ತು. ಇದಿಷ್ಟೇ ಅಲ್ಲದೇ ಇದೇ ಕಾಂಪ್ಲೆಕ್ಸಿನ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಸಮಾವೇಶಗಳಿಂದ ತಮ್ಮ ವಹಿವಾಟಿಗೆ ತೊಡಕುಂಟಾಗಿತ್ತು.’
‘ಜಿಲ್ಲೆಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ದೇಶದಾದ್ಯಂತ ಅವುಗಳಿಗೆ ಒಳ್ಳೆಯ ಹೆಸರಿದೆ. ದೇಶದ ನಾನಾ ಭಾಗಗಳಿಂದ ವಿದ್ಯಾರ್ಜನೆಗೆಂದು ಬರುವ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ದಿನೇ ದಿನೇ ನಡೆಯುವ ಕೋಮು ಸಂಘರ್ಷಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಇದರಿಂದಾಗಿ ಇಲ್ಲಿನ ವ್ಯವಹಾರ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭಾರೀ ಹೊಡೆತ ಬೀಳುತ್ತಿದೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ ಇಲ್ಲಿ ಶಾಂತಿ ನೆಲೆಸುವಂತಹಾ ಕೆಲಸಗಳಿಗೆ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರು ಪ್ರಯತ್ನಿಸಬೇಕು’ ಎಂದವರು ಹೇಳಿದರು.
ಶಶಿಧರ ಪಿ. ನಾಯಕ್, ಸುಕುಮಾರ್ ದೇವಾಡಿಗ, ಕುಮಾರಸ್ವಾಮಿ, ಭಾಸ್ಕರ ಆಚಾರ್ ಉಪಸ್ಥಿತರಿದ್ದರು.