ಬಂಟ್ವಾಳ: ಇದೇ ತಿಂಗಳಿನಲ್ಲಿ ದೇಶದ ಮೊದಲ ವಿದ್ಯುತ್ಚಾಲಿತ ಬಸ್ ದೆಹಲಿಯಲ್ಲಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರದ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪದವಿ ಮಹಾ ವಿದ್ಯಾಲಯದ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ, ಬಳಿಕ ಹೊನಲು ಬೆಳಕಿನ ಕ್ರೀಡೋತ್ಸವವನ್ನು ವೀಕ್ಷಿಸಿ ಮಾತನಾಡಿದರು.

ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಂತಹ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯ ಅಗತ್ಯವಿದೆ ಎಂದ ಅವರು, ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾ ಕಲ್ಪನೆಯಲ್ಲಿ ಮುಂದಿನ ದಿನಗಳಲ್ಲಿ ಇದು ದೇಶದಾದ್ಯಂತ ವಿಸ್ತಾರಗೊಳ್ಳಬೇಕಿದೆ ಎಂದವರು ಅಭಿಪ್ರಾಯಪಟ್ಟರು.
ಕೇವಲ ಶಾಲಾಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವುದೊಂದೇ ಶಿಕ್ಷಣದ ಉದ್ದೇಶವಲ್ಲ, ಉತ್ತಮ ನಾಗರೀಕನಾಗಿ ಜೀವನದ ಪರೀಕ್ಷೆಯಲ್ಲೂ ಯಶಸ್ಸುಕಾಣುವ ಸಂಸ್ಕಾರ ಭರಿತ ಶಿಕ್ಷಣ ನಮ್ಮದಾಗಬೇಕು , ಈ ನಿಟ್ಟಿನಲ್ಲಿ ದೇಶದ ಉತ್ತಮ ನಾಗರೀಕರನ್ನು ರೂಪಿಸುವ ಶಿಕ್ಷಣ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ದಲ್ಲಿ ದೊರೆಯುತ್ತಿದೆ. ಇದೊಂದು ಸಂಸ್ಕಾರದ ಪಾಠಶಾಲೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಾವಿದ ಮೂರ್ತಿಗೆ ಸುಂದರ ರೂಪ ಕೊಡುವಾಗಿನ ಕಲ್ಪನೆ ಮಕ್ಕಳಿಗೆ ಶಿಕ್ಷಣ ನೀಡುವ ತಂದೆ, ತಾಯಿ ಹಾಗೂ ಗುರುವಿನಲ್ಲಿರಬೇಕು ಎಂದ ಅವರು, ಭವಿಷ್ಯದ ನಾಗರೀಕರನ್ನು ನಿರ್ಮಿಸಬೇಕಾದ ಶಿಕ್ಷಣ ವ್ಯವಸ್ಥೆ ಕೆಲವೆಡೆಗಳಲ್ಲಿ ವ್ಯಾಪಾರೀಕರಣವಾಗುತ್ತಿರುವುದು ವಿಷಾಧನೀಯ ಎಂದರು.
ಭಾರತ ಐಟಿ, ಬಿಟಿ ತಂತ್ರಜ್ಞಾನ ದ ಜೊತೆಯಲ್ಲಿ ಗತತಿಹಾಸದ ಪ್ರೇರಣೆಯೊಂದಿಗೆ ಭಾರತವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿಸುವ ಹೊಣೆ ಪ್ರತಿಯೊಬ್ಬರದಾಗಬೇಕು ಎಂದವರು ಆಶಯ ವ್ಯಕ್ತಪಡಿಸಿದರು.
ವಿದ್ಯಾಕೇಂದ್ರದ ಅಧ್ಯಕ್ಷನಾರಾಯಣ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಬಳ್ಳಾರಿ ಸಂಸದ ಶ್ರೀರಾಮುಲು, ಮಾಜಿ ಸಚಿವ ಮುರುಗೇಶ್ ನಿರಾಣಿ, ನಾಘರಾಜ ಶೆಟ್ಟಿ, ಉದ್ಯಮಿಗಳಾದ ಬಿಜೂ ರಮೇಶ್ , ಸುಹಾಸ್ ಗೋಪಿನಾಥ್ ಬೆಂಗಳೂರು, ಮಲಯ ಚಟರ್ಜಿ ಮಂಗಳೂರು, ಶಿವಕುಮಾರ್ ಬೆಂಗಳೂರು, ಸುಧೀರ್ ಹೆಗ್ಡೆ ಕಾರ್ಕಳ, ಸೂರ್ಯ ಕಾಲ್ಲಾಡಿ ಕೊಟ್ಟಾಯಂ , ನಾರಾಯಣರಾಜ್, ರಮಣ್ ಗೋಯಲ್, ಕೃಷ್ಣಮೂರ್ತಿ , ಮುಂಬೈ ಶಾಸಕ ಕೃಷ್ಣಹೆಗ್ಡೆ, ರತ್ನಾಕರ ಶೆಟ್ಟಿ ಮುಂಡ್ಕೂರು, ಯದುನಾರಾಯಣ ಶೆಟ್ಟಿ ಮುಂಬಯಿ, ವಿರ್ಶವನಾಥ ಮಾಡ, ಸುರೇಶ್ ಶೆಟ್ಟಿ , ಸತೀಶ್ಚಂದ್ರ ಶೆಟ್ಟಿ ಹುಬ್ಬಳ್ಳಿ, ವಿಜಯವಿಠಲನಾಥ ಶೆಟ್ಟಿ, ವೀರೇಶ್ ಬೆಂಗಳೂರು,ಚೇತನ್ ಬೆಂಗಳೂರು, ಅಂಜನ್ ರಾಯ್ , ಮೈನಾ ಎಸ್.ಶೆಟ್ಟಿ, ಕೃಷ್ಣ ಬೆಂಗಳೂರು, ವಿಧಾನಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ಕ್ಯಾ.ಗಣೇಶ್ ಕಾರ್ಣಿಕ್, ರಾಜೇಶ್ ನಾಯ್ಕ್ ಉಳೀಪಾಡಿಗುತ್ತು, ಜಿತೇಂದ್ರ ಕೊಟ್ಟಾರಿ, ಸುಕುಮಾರ ಶೆಟ್ಟಿ, ರವಿರಾಜ್ ಹೆಗ್ಡೆ, ಮಾಜಿಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮೈಮ್ ಹೆಗ್ಡೆ, ಶಂಭುಶೆಟ್ಟಿ, ಶ್ರೀಕರ ಪ್ರಭು, ಕಮಲಾಪ್ರಭಾಕರ ಭಟ್, ಸತೀಶ್ಚಂದ್ರ, ರಂಗಮೂರ್ತಿ , ವಸಂತಮಾಧವ ವೊದಲಾದವರು ಭಾಗವಹಿಸಿದ್ದರು.
ಕ್ರೀಡೋತ್ಸವದ ಅಂಗವಾಗಿ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ, ಹಾಗೂ ಪದವಿ ತರಗತಿಗಳ 3132 ವಿದ್ಯಾರ್ಥಿ ಗಳು ಸಾಮೂಹಿಕವಾಗಿ ಪ್ರದರ್ಶನ ಸಂಜೆ 6ರಿಂದ 8.30ರವರೆಗೆ ಹೊನಲು ಬೆಳಕಿನಲ್ಲಿ ನಡೆಯಿತು. ವಿದ್ಯಾರ್ಥಿಗಳಿಂದ ಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ಯೋಗಾಸನ, ದೀಪಾರತಿ, ಮಲ್ಲಕಂಬ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ಕಾಲ್ಚಕ್ರ, ವನಸಂರಕ್ಷಣೆ, ಜನಪದ ನೃತ್ಯ, ದ್ವಿಚಕ್ರ-ಏಕಚಕ್ರ ಸಮತೋಲನ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಸಾಮೂಹಿಕ ರಚನೆಯ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಹುಲಿವೇಷಗಳ ಕುಣಿತಗಳ ಮೂಲಕ ಕಾಡು ಸಂರಕ್ಷಣೆ ಹಾಗೂ ಹುಲಿಸಂತತಿ ರಕ್ಷಣೆಯ ಜಾಗೃತಿ ಮೂಡಿಸಲಾಯಿತು. ಮಂಗಳಯಾನ ರಾಕೆಟ್ ಉಡಾವಣೆ ಹಾಗೂ ಮಂಗಳ ಗ್ರಹದಲ್ಲಿ ಸುತ್ತುತ್ತಿರುವ ಭಾರತೀಯ ಮಾಮ್ ಉಪಗ್ರಹ ಹಾಗೂ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆ ಭಾಷಣ ಎಲ್ಲರ ಗಮನಸೆಳೆಯಿತು.
. ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಸ್ವಾಗತಿಸಿ ಪ್ರಸ್ತಾಪಿಸಿದರು. ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ, ಜಯಾನಂದ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಮೂಹಿಕ ,ಸಾಹಸಮಯ ಪ್ರದರ್ಶನ ನನಗೆ ಖುಷಿಕೊಟ್ಟಿದೆ, ನನ್ನ ಜೀವನದಲ್ಲಿ ಮೊದಲಬಾರಿಗೆ ಇಂತಹಾ ಅದ್ಭುತ ಪ್ರದರ್ಶನವನ್ನು ನೋಡಿದ್ದೇನೆ. ಈ ಪ್ರದರ್ಶನದ ಹಿಂದೆ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮ, ಶಾಲಾ ಸಂಚಾಲಕ ಪ್ರಭಾಕರ ಭಟ್ ಅವರ ಮಾರ್ಗದರ್ಶನ ಅಭೀನಂದನೀಯವಾಗಿದೆ.
– ನಿತಿನ್ ಗಡ್ಕರಿ
ಭೂಸಾರಿಗೆ ಸಚಿವರು
ಭಾರತ ಸರ್ಕಾರ




















