ಬಂಟ್ವಾಳ: ಯಾವುದೇ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಪಟ್ಟಾಗ ಮಾಟ ಮಂತ್ರದ ಹಿಂದೆ ಬಿದ್ದು ಹಣ ದುಂದು ವೆಚ್ಚ ಮಾಡುವ ಬದಲು ಸಕಾಲದಲ್ಲಿ ಮನೋರೋಗ ತಜ್ಞರ ಸಲಹೆಯಂತೆ ಚಿಕಿತ್ಸೆ ನೀಡಿದ್ದಲ್ಲಿ ಮನೋರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ತಜ್ಞ ಡಾ. ಶಿಶಿರ್ ಕುಮಾರ್ ಹೇಳಿದರು.

ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ರೋಟರಿ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಮನೋರೋಗದ ಕುರಿತ ಮಾಹಿತಿ ಮತ್ತು ಮುಕ್ತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ವ್ಯಕ್ತಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ತನ್ನ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳ ಬೇಕು. ನಿಯಮಿತವಾದ ವ್ಯಾಯಾಮ ಹಾಗೂ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವೆನೆಯಂತಹ ಕೆಟ್ಟ ಚಟಗಳಿಂದ ದೂರ ಇರಬೇಕು ಎಂದರು.
ಮನೋರೋಗ ಚಿಕಿತ್ಸಾ ವಿಭಾಗದ ಆಪ್ತ ಸಮಾಲೋಚಕಿ ಸುಮನ್ ಮಾತನಾಡಿ ಇಂದು ಮಕ್ಕಳು ಹೊರ ಜಗತ್ತಿನ ಆಕರ್ಷಣೆಗೆ ಬಲಿಯಾಗಿ ಅವುಗಳನ್ನೇ ಅನುಕರಣೆ ಮಾಡುತ್ತಾರೆ ಈ ಬಗ್ಗೆ ಹೆತ್ತವರು ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಅವರ ನಿತ್ಯದ ನಡವಳಿಕೆಯಲ್ಲಿ ಬದಲಾವಣೆಯಾಗುತ್ತಿರುವ ಬಗ್ಗೆ ಗಮನ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿಪರೀತ ಅಮಲಿನ ಚಟಕ್ಕೆ ಒಳಗಾಗಿರುವುದು ಕೂಡ ಮನೋರೋಗದ ಒಂದು ಲಕ್ಷಣ. ಚಿಕಿತ್ಸೆಯ ಮೂಲಕ ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಮದ್ಯ ವ್ಯಸನ ನಿಮರ್ೂಲನೆ ಮಾಡುವ ಜಾಹೀರಾತಗಳಿಗೆ ಮಾರುಹೋಗದೆ ವೈದ್ಯರ ಮಾರ್ಗದರ್ಶನ ಪಡೆದೆ ಚಿಕಿತ್ಸೆ ನೀಡಬೇಕು ಎಂದರು.
ರೋಟರಿ ಕ್ಲಬ್ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಾರಂತ ನರಿಕೊಂಬು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಸುನೀತಾ ನಾಯಕ್ ವೇದಿಕೆಯಲ್ಲಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ.ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿ, ಪ್ರಸ್ತಾವಿಸಿದರು. ರೋಟರಿ ಸಮುದಾಯ ಅಭಿವೃದ್ದಿ ವಿಭಾಗದ ಮಹಮ್ಮದ್ ವಳವೂರು ವಂದಿಸಿದರು.