ಬಜ್ಪೆ: ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಡುವ ನೆಪದಲ್ಲಿ ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಜ್ಪೆ ಸಮೀಪದ ಪೊರ್ಕೋಡಿಯ ಅಂಬೇಡ್ಕರ್ ನಗರದ ನಿವಾಸಿ ರವಿ ಯಾನೆ ತೋಮ(25) ಎಂಬಾತ ಕಳೆದ ಒಂದು ವರ್ಷದಿಂದ ಡ್ಯಾನ್ಸ್ ಕಲಿಸಿಕೊಡುವ ನೆಪದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದಾನೆ.
ಈತ ತನ್ನ ಕಾಲೊನಿಯ ಸುಮಾರು 12 ವರ್ಷ ವಯಸ್ಸಿನ ಬಾಲಕಿಯರಿಗೆ ಕಳೆದ ಒಂದು ವರ್ಷದಿಂದ ಡ್ಯಾನ್ಸ್ ಕಲಿಸುತ್ತಿದ್ದ. ಡ್ಯಾನ್ಸ್ ಕಲಿಸುವ ನೆಪದಲ್ಲಿ ಪುಟ್ಟ ಮಕ್ಕಳನ್ನು ಪುಸಲಾಯಿಸಿ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದನ್ನಲ್ಲದೆ ಸುಮಾರು ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದಾನೆಂದು ಆರೋಪಿಸಲಾಗಿದೆ.
ಚೈಲ್ಡ್‍ಲೈನ್‍ನಿಂದ ಬೆಳಕಿಗೆ ಬಂದ ಘಟನೆ:
ಆರೋಪಿ ತೋಮ ಮಕ್ಕಳ ಮೇಲೆ ಕಳೆದ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ್ದು, ಇಷ್ಟರತನಕ ಬೆಳಕಿಗೆ ಬಂದಿರಲಿಲ್ಲ. ಕಳೆದ ಬುಧವಾರ ಚೈಲ್ಡ್‍ಲೈನ್ ಮಂಗಳೂರು ಇದರ ಸಿಬ್ಬಂದಿ ಅತ್ಯಾಚಾರಕ್ಕೆ ಸಂಬಂಧಪಟ್ಟ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ನೀಡಲು ಶಾಲೆಗೆ ಹೋಗಿದ್ದರು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯೋರ್ವರ ಬಳಿ ಬಾಲಕಿಯೋರ್ವರು ತನಗಾದ ಅಹಿತಕರ ಘಟನೆಯ ಬಗ್ಗೆ ಹೇಳಿಕೊಂಡಿದ್ದಳು.
ಆಕೆಯ ಸಮಸ್ಯೆಯ ನೈಜತೆಯನ್ನು ಅರ್ಥಮಾಡಿಕೊಂಡ ಚೈಲ್ಡ್‍ಲೈನ್ ಸಿಬ್ಬಂದಿ ಬಾಲಕಿಯನ್ನು ಪ್ರತ್ಯೇಕವಾಗಿ ಕರೆಸಿ ವಿಚಾರಣೆ ನಡೆಸಿದಾಗ ಆರೋಪಿ ರವಿ ಯಾನೆ ತೋಮ ತನ್ನನ್ನು ಹಾಗೂ ತನ್ನ ಸಹಪಾಠಿಗಳನ್ನು ಅತ್ಯಾಚಾರ ನಡೆಸಿದ ಬಗ್ಗೆ ಮಾಹಿತಿ ನೀಡಿದ್ದಾಳೆ. ಈ ಬಗ್ಗೆ ಸಿಬ್ಬಂದಿ ಬಾಲಕಿಯರ ಪೋಷಕರಿಗೆ ಮಾಹಿತಿ ನೀಡಿದ್ದರು.
ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಬಜ್ಪೆ ಇನ್ಸ್‍ಪೆಕ್ಟರ್ ಟಿ.ಡಿ. ನಾಗರಾಜ್ ನೇತೃತ್ವದ ತಂಡ ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಆರೋಪಿಗೆ ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *