ಬಂಟ್ವಾಳ: ತುಂಬೆ ನೂತನ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರಿಗೆ ಸಭಾ ನಡಾವಳಿ ಪ್ರತಿಯನ್ನು ನೀಡದೆ ಮುಳುಗಡೆ ಜಮೀನು ಸರ್ವೇ ನಡೆಸುತ್ತಿದ್ದ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸಜೀಪಮುನ್ನೂರು ಗ್ರಾಮದ ಸಂತ್ರಸ್ತ ರೈತರು ದಿಗ್ಭಂದನ ಹಾಕಿದ ಘಟನೆ ಗುರುವಾರ ನಡೆದಿದೆ. ಸಭಾ ನಡಾವಳಿ ಪ್ರತಿ ಹಾಗೂ ನ್ಯಾಯೋಚಿತ ಪರಿಹಾರ ನೀಡದೆ ಸರ್ವೇಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ರೈತ ಸಂಘದ ಹಸಿರು ಸೇನೆಯ ಸಹಕಾರದೊಂದಿಗೆ ಶುಕ್ರವಾರ ಸಜೀಪಮುನ್ನೂರುವಿನಲ್ಲಿ ಪ್ರತಿಭಟನೆ ನಡೆಸಿದರು.
2

3

6ತುಂಬೆ ನೂತನ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಸಂತ್ರಸ್ತರಾಗುವ ರೈತರಿಗೆ ಮುಳುಗಡೆಯಾಗುವ ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ನ್ಯಾಯೋಚಿತ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಯ ಉಪಸ್ಥಿತಿಯಲ್ಲಿ ಸಂತ್ತಸ್ತ ರೈತರು, ರೈತ ಸಂಘದ ಮುಖಂಡರು ಹಾಗೂ ಮನಪಾ ಅಧಿಕಾರಿಗಳ ಸಭೆಯನ್ನು ನಡೆಸಲಾಗಿತ್ತು. ಸ್ಥಳೀಯ ಸಂತ್ರಸ್ತ ರೈತರನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಸಮಕ್ಷಮದಲ್ಲಿ ಜಂಟಿ ಸರ್ವೆ ನಡೆಸಬೇಕು. ಎಲ್ಲಾ ಸಂತ್ರಸ್ತ ರೈತರಿಗೆ ಈ ಬಗ್ಗೆ ಲಿಖಿತ ನೋಟಿಸನ್ನು ನೀಡಬೇಕು ಜೊತಗೆ ಸರ್ವೆಯ ಬಳಿಕ ಇನ್ನೊಂದು ಸಭೆ ನಡೆಸಿ ಎರಡೂ ಸಭೆಗಳ ನಡಾವಳಿಯನ್ನು ನೀಡಬೇಕು ಎಂದು ರೈತರು ಸಭೆಯಲ್ಲಿ ಆಗ್ರಹಿಸಿದ್ದರು. ಆದರೆ ಜಿಲ್ಲಾಧಿಕಾರಿ ಸೂಚಿಸಿದ ದಿನಾಂಕದವರೆಗೂ ಸರ್ವೇ ಕಾರ್ಯ ನಡೆಯದೇ ಮಾಹಿತಿ ಹಕ್ಕಿನ ಮೂಲಕ ಅರ್ಜಿ ಸಲ್ಲಿಸಿದ್ದರು. ಇದು ಮನಪಾ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಮನಪಾ ಆಯುಕ್ತರಿಗೆ ಇದನ್ನು ವರ್ಗಾಯಿಸಲಾಗಿತ್ತು. ನಡಾವಳಿಯ ದೃಢೀಕೃತ ಮಾಹಿತಿಯನ್ನು ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಸತಾಯಿಸುತ್ತಿರುವ ಮನಾಪ ಆಯುಕ್ತರು ಇಂದಿನವರೆಗೂ ನಡಾವಳಿ ಪ್ರತಿಯನ್ನು ನೀಡಿರುವುದಿಲ್ಲ. ಸಂತಸ್ತ ಪ್ರತೀ ರೈತರಿಗೆ ವೈಯಕ್ತಿಕ ನೋಟಿಸು ನೀಡಿ ಸರ್ವೇ ನಡೆಸುವಂತೆ ಸೂಚಿಸಲಾಗಿದ್ದರೂ ಯಾವುದೇ ಮಾಹಿತಿ ನೀಡದೆ ಕಳೆದ ಕೆಲ ದಿನಗಳಿಂದ ಸಜೀಪಮುನ್ನೂರು ಗ್ರಾಮದ ಆಲಾಡಿ ಪರಿಸರದಲ್ಲಿ ಮನಪಾ ಅಧಿಕಾರಿಗಳು ಸರ್ವೇ ಕಾರ್ಯ ಆರಂಭಿಸಿದ್ದರು. ಈ ಸಂದರ್ಭ ಸಂತ್ರಸ್ತ ರೈತರು ನಡಾವಳಿ ಪ್ರತಿಯನ್ನು ನೀಡಿ ಸರ್ವೇ ಮುಂದುವರೆಸುವಂತೆ ಆಗ್ರಹಿಸಿದ್ದರು. ನಡಾವಳಿ ಪ್ರತಿ ನೀಡುವಂತೆ ಕೋರಿಕೊಂಡರೂ ಸರ್ವೇ ಅಧಿಕಾರಿಗಳು ನಿರ್ಲಕ್ಷ ತೋರಿದ್ದರಿಂದ ಆಕ್ರೋಶಗೊಂಡ ಸಂತ್ರಸ್ತ ರೈತರು ಸರ್ವೇ ನಡೆಸುವ ಯಂತ್ರವನ್ನು ವಶಕ್ಕೆ ಪಡೆದುಕೊಂಡು ನಡಾವಳಿ ಪ್ರತಿಯನ್ನು ನೀಡಿದ ಬಳಿಕವೇ ಸರ್ವೆ ನಡೆಸಲು ಅವಕಾಶ ನೀಡವುದಾಗಿ ಅಧಿಕಾರಿಗಳಿಗೆ ದಿಗ್ಭಂದನ ಹಾಕಿದ್ದರು.
ಪ್ರತಿಭಟನಾ ಸಂದರ್ಭ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಘಟಕದ ಅಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ಸುದೇಶ್ ಮಯ್ಯ, ಎನ್.ಕೆ. ಇದ್ದಿನಬ್ಬ, ರೇವತಿ ಹಾಗೂ ಸಂತ್ರಸ್ತ ರೈತರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *