ಬಂಟ್ವಾಳ: ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಎಲ್ಲಾ ರಸ್ತೆಗಳು ಡಾಮಾರೀಕರಣಗೊಂಡು ಅಭಿವೃದ್ದಿಕಂಡಿದೆ. ಆದರೆ ಪ್ರಭಾವಿ ಸಚಿವರಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ದಿ ಕಾರ್ಯಗಳು ಬಾಕಿಯಾಗಿವೆ. ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಇವರೆಲ್ಲಾ ಏನು ಮಾಡಿದ್ದಾರೆ ಎನ್ನುವ ಸಂಶಯ ಕಾಡುತ್ತಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದ್ದಾರೆ.
ಗುರುವಾರ ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಹಾಗೂ ಪಕ್ಷ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾರ್ವಜನಿಕರಿಂದ ಸುಮಾರು 20 ಅಹವಾಲುಗಳು ಸಲ್ಲಿಕೆಯಾಗಿದ್ದು ಹೆಚ್ಚಿನ ಅಹವಾಲುಗಳು ರಸ್ತೆ ಕಾಮಾಗಾರಿ ಹಾಗೂ ದುರಸ್ತಿಗೆ ಸಂಬಂಧಪಟ್ಟವುಗಳೇ ಆಗಿವೆ ಎಂದು ತಿಳಿಸಿದರು. ಈ ಹಿಂದೆ ಬಿಜೆಪಿ ಶಾಸಕರು ಅಧಿಕಾರದಲ್ಲಿದ್ದಾಗ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ಸರ್ಕಾರಿ ಕಾಲೇಜು, ಆಸ್ಪತ್ರೆ ಕಟ್ಟಡ, ಕೋರ್ಟ್ ಕಟ್ಟಡ, ಪಾಲಿಟೆಕ್ನಿಕ್, ಅಗ್ನಿಶಾಮಕದಳ, ಮೆಸ್ಕಾಂ ಸಬ್ಸ್ಟೆಷನ್, ಪುರಸಭೆಗೆ ವಿಶೇಷ ಅನುದಾನಗಳು ಮಂಜೂರಾಗಿತ್ತು. ಈಗಿನ ಸರ್ಕಾರ ಈಗ ಅನುದಾನಗಳನ್ನು ಸ್ಥಗಿತಗೊಳಿಸಿದೆ ಎಂದು ಟೀಕಿಸಿದರು.
ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸುವ ಜವಬ್ದಾರಿ ಇದೆ. ಕಾಂಗ್ರಸ್ನ ನಿಷ್ಕ್ರೀಯತೆ ನಮಗೆ ಲಾಭ ಅಲ್ಲ. ಬದಲಾಗಿ ನಮ್ಮ ಪಕ್ಷದ ಸಂಘಟನೆಯ ಮುಖಾಂತರವೇ ನಾವು ಗೆಲುವು ಪಡೆಯುತ್ತೇವೆ. ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಗಳ ವಿಸ್ತಾರ, ಕಾಂಗ್ರೆಸ್ನ ದಬ್ಬಾಳಿಕೆ, ಗೂಂಡಾಗಿರಿ, ಅವ್ಯವಹಾರದ ರಾಜಕಾರಣ ನಡೆಸುವುದನ್ನು ನಿಲ್ಲಿಸಿ, ಕಾಂಗ್ರೆಸ್ನ ಅವ್ಯವಹರಾಗಳನ್ನು ಬಹಿರಂಗ ಪಡಿಸುವ ಮೂಲಕ ಪಕ್ಷದ ಚಟುವಟಿಕೆಗಳನ್ನು ವಿಸ್ತಾರ ಪಡಿಸುತ್ತೇವೆ, ನೂತನವಾಗಿ ಆಯ್ಕೆಯಾದ ಹೊಸ ತಂಡದ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದಿರುವ ಬಗ್ಗೆ, ಬಿಎಸ್ಎನ್ಎಲ್, ಮೆಸ್ಕಾಂಗೆ ಸಂಬಂಧಪಟ್ಟ ದೂರುಗಳು ಅಹವಾಲಿನ ಮೂಲಕ ಸಲ್ಲಿಕೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪಕ್ಷ ಮುಖಂಡಾರದ ರಾಜೇಶ್ ನಾೈಕ್ ಉಳಿಪಾಡಿಗುತ್ತು, ತುಂಗಪ್ಪ ಬಂಗೇರಾ, ಸುಲೋಚನಾ ಭಟ್, ಜಿ. ಆನಂದ. ಸದಾನಂದ ಮಲ್ಲಿ, ರಾಮದಾಸ ಬಂಟ್ವಾಳ, ದಿನೇಶ್ ಅಮ್ಟೂರು, ಆನಂದ ಶಂಭೂರು, ಮೋನಪ್ಪ ದೇವಸ್ಯ, ಅಶೋಕ್ ಶೆಟ್ಟಿ ಸರಪಾಡಿ ಮತ್ತಿತರರು ಹಾಜರಿದ್ದರು.
