ಬಂಟ್ವಾಳ: ಕಡ್ಡಾಯ ಶಿಕ್ಷಣ ಕಾಯ್ದೆ ಹಾಗೂ ಬಾಲ ಕಾರ್ಮಿಕ ಪದ್ದತಿಯಲ್ಲಿ ಮಕ್ಕಳ ವಯಸನ್ನು 14 ವರ್ಷದಿಂದ 18 ವರ್ಷಕ್ಕೆ ಏರಿಸುವಂತೆ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ ಆಗ್ರಹಿಸಿದ್ದು , ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‍ಕ್ಲಬ್ ಬಂಟ್ವಾಳ, ಪತ್ರಕರ್ತ ಸಂಘದ ರಜತ ವರ್ಷಾಚರಣೆ ಸಮಿತಿಯ ಜಂಟಿ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಶನಿವಾರ ಬಿ.ಸಿ.ರೋಡ್ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
3 (2)

9btl-childrights samvada
ಕಡಿಮೆ ವೇತನ ನೀಡಿ ಮಕ್ಕಳ ದುಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಶಾಲೆಕಡೆ ನನ್ನ ನಡೆ ಎನ್ನುವ ಆಂದೋಲನವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಪ್ರತೀ ಮಕ್ಕಳಿಗೂ ಪಿಯುಸಿ ವರೆಗಿನ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವ ನಿಟ್ಟಿನಲ್ಲಿ ಪೋಷಕರು ಜಾಗೃತರಾಗಬೇಕು ಎಂದರು.
ಎಲ್ಲ ಮಕ್ಕಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಹೀಗಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಂತಾ ಘಟನೆಗಳು ಮರುಕಳಿಸುತ್ತಿದೆ ಎಂದ ಅವರು, ನಾವು ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಿದಾಗ ಮಾತ್ರ ಈ ಅಸಮತೋಲನವನ್ನು ಸರಿಪಡಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಆರ್‍ಟಿಯ ಕಾಯ್ದೆಯಡಿ ಮಕ್ಕಳ ಶಾಲಾದಾಖಲಾತಿಗೆ ಗೊಂದಲ ಉಂಟಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಈ ಕುರಿತಾದ ಮೂರು ಸಾವಿರ ದೂರು ಅರ್ಜಿಗಳು ಬಂದಿದ್ದು , ವಿಚಾರಣೆ ನಡೆಯುತ್ತಿದೆ ಎಂದರು. ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳ ಕುರಿತಾಗಿ ಶಾಲಾ ಶಿಕ್ಷಕರಿಗೆ ತರಬೇತಿ-ಮಾಹಿತಿ ಸಿಗುತ್ತಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ರಾಷ್ಟ್ರಮಟ್ಟದ ತರಬೇತುದಾರರಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ 550 ಪ್ರಾಂಶುಪಾಲರಿಗೆ ತರಬೇತಿ ಕಾರ್ಯಆಗಾರವನ್ನು ಮುಂದಿನ ಅಕ್ಟೋಬರ್ ನಲ್ಲಿ ಆಯೋಜಿಲಾಗುವುದು, ಪ್ರತೀ ಶಿಕ್ಷಕರಿಗೂ ಈ ಬಗ್ಗೆ ಮಾಹಿತಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪತ್ರಕರ್ತೆ ರೇಷ್ಮಾ ಜಿ.ಉಳ್ಳಾಲ್, ತಾಲೂಕು ಕಾರ್ಐನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *