ಇತ್ತೀಚೆಗೆ ನಿಧನ ಹೊಂದಿದ ತೆಂಕು-ಬಡಗುತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಮೇರು ಕಲಾವಿದ ಮತ್ತು ಅರ್ಥದಾರಿ,ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ ವಾಮದಪದವು ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ವಾಮದಪದವು ಶ್ರೀ ಗಣೇಶ ಮಂಟಪದಲ್ಲಿ ಜು.9ರಂದು ಸಂಜೆ ಜರಗಿತು.ಮಂಗಳೂರು ಯಕ್ಷಾಂಗಣ ಕಾರ್ಯಾಧ್ಯಕ್ಷ,ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರ ಒಡನಾಡಿ,ಭಾಸ್ಕರ ರೈ ಕುಕ್ಕುವಳ್ಳಿ ಅವರು ನುಡಿನಮನ ಸಲ್ಲಿಸಿ ಮಾತನಾಡಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರು ಸಮಾಜಕ್ಕೆ ವಿಶಿಷ್ಟವಾದುದನ್ನು ನೀಡಿ ಸಮಾಜದ ಋಣ ತೀರಿಸಿದ ಮಹನೀಯರು.ಕೇವಲ ಕಲಾವಿದನಾಗಿರದೆ ಅರ್ಥದಾರಿ,ಲೇಖಕ,ಪ್ರಸಂಗಕರ್ತರಾಗಿ ಸರ್ವಾಂಗೀಣ ಸಾಂಸ್ಕøತಿಕ ನೇತಾರರಾಗಿದ್ದರು.ತೆಂಕು-ಬಡಗು ಉಭಯ ತಿಟ್ಟುಗಳಲ್ಲಿ ಪ್ರತ್ಯೇಕವಾದ ಸುಭದ್ರ ಸ್ಥಾನಗಳಿಸಿ ಪ್ರಬುದ್ಧ ಹಾಗೂ ಅಧ್ಯಯನ ಶೀಲ ಅರ್ಥಗಾರಿಕೆಯಿಂದ ಆಟ-ಕೂಟಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ಉಜ್ವಲ ಭವಿಷ್ಯವಿರುವ ಹೊತ್ತಿನಲ್ಲಿ ಅಸ್ತಂಗತರಾದುದು ಕಲಾಭಿಮಾನಿಗಳಿಗೆ ಸಿಡಿಲೆರಗಿದಂತಾಗಿದೆ.ಅವರ ಕಲೆಯನ್ನು ಉಳಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ಅಸ್ತಂಗತರಾದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಅವರು ಮತ್ತು ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರು ರಂಗದ ಮೇಲೆ ಮತ್ತು ಹೊರಗೆ ಇತರ ಕಲಾವಿದರಿಗೆ ಮಾದರಿಯಾಗಿ ಬದುಕಿ,ಕಲಾವಿದರಿಗೆ ಹಿರಿಯಣ್ಣನಂತಿದ್ದ ಸಿದ್ದಕಟ್ಟೆದ್ವಯರನ್ನು ಕಳೆದುಕೊಂಡು ಯಕ್ಷರಂಗ ತಬ್ಬಲಿಯಂತಾಗಿದೆ ಎಂದು ನುಡಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ಯಕ್ಷಗಾನ ಕಲಾವಿದ,ಅರ್ಥದಾರಿ ಕುಂಬ್ಳೆ ಸುಂದರ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಾವ್ಯ ,ಶಾಸ್ತ್ರ ,ಪುರಾಣ ತಿಳಿದ ಊರಿಗೆ ಖ್ಯಾತಿ ಬರುತ್ತದೆ.ಅಂತಹವರಿರುವುದು ಊರಿನ ಭಾಗ್ಯ. ಸಿದ್ದಕಟ್ಟೆಯವರಿಂದ ಊರು ಖ್ಯಾತಿಗಳಿಸಿದೆ.ಊರವರ ಕೃತಜ್ಞತೆ ಬಹು ದೊಡ್ಡದು.ಅವರ ಅಗಲುವಿಕೆ ಊರವರಿಗೆ ಮಾತ್ರವಲ್ಲ ಯಕ್ಷರಂಗದಲ್ಲಿ ಯೇ ಶೂನ್ಯ ನಿರ್ಮಿಸಿದೆ ಎಂದು ಹೇಳಿದರು.
ಕಲಾ ಸಂಘಟಕ ತೋನ್ಸೆ ಪುಷ್ಕಳ್ ಕುಮಾರ್ ಅವರು ಮಾತನಾಡಿ ವಿಶ್ವನಾಥ ಶೆಟ್ಟರು ಸದಾ ಅಧ್ಯಯನಶೀಲರಾಗಿದ್ದು ಯಕ್ಷಗಾನ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದವರು.ಅವರು ಅನಿವಾರ್ಯ ಬೇಡಿಕೆಯ ಕಲಾವಿದರಾಗಿದ್ದರು. ಯಕ್ಷಗಾನ ಸಾಹಿತ್ಯ ರಚನೆ ಕ್ಲಿಷ್ಟವಾಗಿದ್ದರೂ ಅವರಿಂದ ಅರ್ಥಗಾರಿಕೆಗೆ ಪೂರಕವಾದ ಸಾಹಿತ್ಯ ರಚನೆಯಾಗಿರುವುದು ಗಮನಾರ್ಹವಾಗಿದೆ. ಅವರ ಅಗಲುವಿಕೆ ಸಹಿಸಲಸಾಧ್ಯ ಎಂದು ಹೇಳಿದರು.
ವಾಮದಪದವು ಗಣೇಶ ಮಂದಿರ ಜನಹಿತ ವಿಶ್ವಸ್ಥ ಮಂಡಳಿ ಸದಸ್ಯ ಜಿ.ಕೆ ಭಟ್ ಅವರು ಮಾತನಾಡಿ ಸಿದ್ದಕಟ್ಟೆ ಅವರು ಉತ್ತಮ ಕಾರ್ಯದಿಂದ ಸಮಾಜಕ್ಕೆ ಪ್ರೇರಣೆಯಾಗಿದ್ದರು ಎಂದರು.ಇದೇ ವೇಳೆ ಇತ್ತೀಚೆಗೆ ನಿಧನ ಹೊಂದಿದ ಚಂದ್ರಶೇಖರ ಶೆಟ್ಟಿ ಕೆಂಚಾರು ಮತ್ತು ವಿಠಲ ಶೆಟ್ಟಿ ಕುಂಡೋಳಿ ಅವರನ್ನು ಸ್ಮರಿಸಲಾಯಿತು.
ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರ ಸಹೋದರ,ಯಕ್ಷ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿ ,ಪುತ್ರ ಸುದರ್ಶನ್,ಪ್ರಮುಖರಾದ ಶ್ರೀಧರ ಜಿ.ಪೈ, ವಸಂತ ಶೆಟ್ಟಿ ಕೇದಗೆ,ದೇವಪ್ಪ ಶೆಟ್ಟಿ ಕುಂಟಜಾಲ್,ಯತೀಶ್ ಶೆಟ್ಟಿ,ಉದಯ ಕುಮಾರ್ ಶೆಟ್ಟಿ,ಚಂದ್ರ ಶೇಖರ ಶೆಟ್ಟಿ,ಸೋಮಪ್ಪ ರೈ,ದೇವಿಪ್ರಸಾದ್ ಶೆಟ್ಟಿ,ನಾಗರಾಜ ಶೆಟ್ಟಿ,ಕಮಲಾಕ್ಷ,ಬೂಬ ಭಂಡಾರಿ,ರಮೇಶ್ ಶೆಟ್ಟಿ ಬಜೆ,ಶ್ಯಾಮ್ ಪ್ರಸಾದ್ ಪೂಂಜ,ಸತೀಶ್ ಶೆಟ್ಟಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಿದರು.
ರಂಗ ಕಲಾವಿದ ಎಚ್ಕೆ ನಯನಾಡು ಅವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.