ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳು ಕಾಣಿಸಿಕೊಂಡ ಪರಿಣಾಮ ವಾಹನ ಅಡ್ಡಾದಿಟ್ಟಿ ಚಲಿಸುತ್ತಾ ಅಪಘಾತ ಭೀತಿ ಎದುರಾಗಿದೆ. ಈ ತಿರುವು ರಸ್ತೆಯಲ್ಲಿ ಈಗಾಗಲೇ ಹಲವು ಬಾರಿ ಸರ್ಕಾರಿ ಬಸ್ ಮತ್ತಿತರ ವಾಹನ ಅಪಘಾತ ಮತ್ತು ಸಾವು-ನೋವು ಸಂಭವಿಸಿದ್ದು, ಇದೀಗ ಹೆದ್ದಾರಿ ನಡುವೆ ಕಾಣಿಸಿಕೊಂಡ ಕೆರೆ ಮಾದರಿ ಹೊಂಡಕ್ಕೆ ಬಿದ್ದು ಹಲವಾರು ಮಂದಿ ದ್ವಿಚಕ್ರ ವಾಹನ ಸವಾರರರು ಕೈಕಾಲು ಮುರಿದುಕೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಅತೀ ವೇಗವಾಗಿ ಸಂಚರಿಸುತ್ತಿರುವ ವಾಹನಗಳು ಇಲ್ಲಿ ದಿಢೀರನೆ ಬ್ರೇಕ್ ಹಾಕುವ ಮೂಲಕ ಸರಣಿ ಅಪಘಾತಕ್ಕೂ ಕಾರಣವಾಗಿದೆ. ಈ ನಡುವೆ ಹೊಂಡ ತಪ್ಪಿಸಲು ಬಹುತೇಕ ವಾಹನಗಳು ಅಡ್ಡಾದಿಡ್ಡಿ ಸಂಚರಿಸುವುದು ಅನಿವಾರ್ಯವಾಗಿದ್ದು, ಇದರಿಂದಾಗಿ ವಾಹನ ಸವಾರರಿಗೆ ಮತ್ತಷ್ಟು ಅಪಘಾತ ಭೀತಿ ಎದುರಾಗಿದೆ. ಭಾರೀ ಮಳೆಯಾದಾಗ ಹೊಂಡದಲ್ಲಿ ಮಳೆ ನೀರು ಸಂಗ್ರಹಗೊಂಡಿರುವುದು ಗಮನಕ್ಕೆ ಬಾರದೆ ದ್ವಿಚಕ್ರ ಮತ್ತಿತರ ವಾಹನ ಸವಾರರು ಉರುಳಿ ಬೀಳುತ್ತಿದ್ದಾರೆ. ಟ್ಯಾಂಕರ್ ಮತ್ತಿತರ ಘನ ವಾಹನಗಳು ಹೊಂಡಕ್ಕೆ ಚಕ್ರ ಸಿಲುಕಿಕೊಂಡು ಭಾರೀ ಸದ್ದು ಮಾಡುತ್ತಿದೆ. ಈ ಹೊಂಡಮಯ ರಸ್ತೆಯಿಂದಾಗಿ ಕೆಲವೊಮ್ಮೆ ಅನಿಯಮಿತ ರಸ್ತೆ ಸಂಚಾರ ಸ್ಥಗಿತಗೊಳ್ಳುವಂತಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

13btl-Kalladka

13btl-Bcroad

ಇನ್ನೊಂದೆಡೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಮೇಲ್ಸೇತುವೆ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಸರ್ವಿಸ್ ರಸ್ತೆಯಲ್ಲೇ ಮಳೆನೀರು ಸರಾಗವಾಗಿ ಹರಿದು ಹೋಗುತ್ತಿದೆ. ಇದರಿಂದಾಗಿ ಭಾರೀ ಮಳೆಯಾದಾಗ ಇಲ್ಲಿನ ಸರ್ವಿಸ್ ರಸ್ತೆ ಪುಟ್ಟ ತೋಡಿನಂತೆ ಕಂಡು ಬರುತ್ತಿದೆ. ಈ ನಡುವೆ ಹೊಂಡಮಯ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಾಗುವ ಸಂದರ್ಭದಲ್ಲಿ ಪದಚಾರಿಗಳಿಗೆ ಕೆಸರಿನ ಸಿಂಚನವೂ ಆಗುತ್ತಿದೆ. ಇಲ್ಲಿನ ಬಹುತೇಕ ವಾಹನಗಳು ಹೊಂಡ ತಪ್ಪಿಸುವ ಭರದಲ್ಲಿ ಕಿರಿದಾದ ಚರಂಡಿಗೆ ಅಳವಡಿಸಿದ ಕಾಂಕ್ರೀಟು ಮುಚ್ಚಳ ಮೇಲೆ ಹಾದು ಹೋಗುತ್ತಿರುವ ಪರಿಣಾಮ ಚರಂಡಿಯ ಬಹುತೇಕ ಕಾಂಕ್ರೀಟು ಮುಚ್ಚಳವೂ ಮುರಿದು ಬಿದ್ದಿದೆ. ಈ ನಡುವೆ ತ್ಯಾಜ್ಯ ತುಂಬಿಕೊಂಡ ಚರಂಡಿ ನೀರು ಕೂಡಾ ಸರ್ವಿಸ್ ರಸ್ತೆಯಲ್ಲಿ ಹರಿಯುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ ಎಂದು ಇಲ್ಲಿನ ವರ್ತಕರು ಆರೋಪಿಸಿದ್ದಾರೆ.
ಈಗಾಗಲೇ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬಹುಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದು, ನಂಬರ್-1 ಎಂದು ಕರೆಸಿಕೊಳ್ಳುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲು ಅವರು ಇಲ್ಲಿ ಕಣ್ಮುಚ್ಚಿಕೊಂಡು ಸಂಚರಿಸುತ್ತಿದ್ದರೇಯೇ…ಎಂದು ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಪ್ರಶ್ನಿಸಿದ್ದಾರೆ. –

ಮೋಹನ್ ಕೆ.ಶ್ರೀಯಾನ್ ರಾಯಿ

By suddi9

Leave a Reply

Your email address will not be published. Required fields are marked *